Mar 5, 2026 Languages : ಕನ್ನಡ | English

ಮನೆ ಖಾಲಿ ಮಾಡುವ ವಿವಾದಕ್ಕೆ ಬಲಿಯಾದ ಮಾವ - 'ಸಹಜ ಸಾವು' ಎಂದು ನಾಟಕವಾಡಿದ ಅಳಿಯ ಈಗ ಲಾಕಪ್‌ನಲ್ಲಿ!!

ಬೆಂಗಳೂರಿನ ಆಸ್ಟಿನ್ ಟೌನ್‌ನಲ್ಲಿ ನಡೆದ ಅಮಾನವೀಯ ಕೊಲೆ ಪ್ರಕರಣವೊಂದು ಈಗ ಬೆಳಕಿಗೆ ಬಂದಿದ್ದು, ಸ್ವಂತ ಮಾವನನ್ನೇ ಕೊಂದು ಅದನ್ನು 'ಸಹಜ ಸಾವು' ಎಂದು ನಂಬಿಸಲು ಯತ್ನಿಸಿದ ಅಳಿಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ
ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ

ಕೊಲೆಯಾದ ವ್ಯಕ್ತಿಯನ್ನು ಇನಾಯತ್ ಪಾಷಾ ಎಂದು ಗುರುತಿಸಲಾಗಿದೆ. ಇವರು ವೃತ್ತಿಯಿಂದ ಮೆಕಾನಿಕ್ ಆಗಿದ್ದು, ಹುಟ್ಟಿನಿಂದಲೇ ದೈಹಿಕವಾಗಿ ಅಂಗವಿಕಲರಾಗಿದ್ದರು. ಇನಾಯತ್ ಅವರು ಆಸ್ಟಿನ್ ಟೌನ್‌ನಲ್ಲಿರುವ ತಮ್ಮ ಸ್ವಂತ ಸಹೋದರಿಯ ಮನೆಯ ನೆಲಮಹಡಿಯನ್ನು ಲೀಸ್ ಪಡೆದುಕೊಂಡು ಅಲ್ಲಿ ಒಬ್ಬರೇ ವಾಸವಿದ್ದರು. ಆದರೆ, ಕಳೆದ ಕೆಲವು ಸಮಯದಿಂದ ಇನಾಯತ್ ಮತ್ತು ಅವರ ಸಹೋದರಿಯ ನಡುವೆ ಮನೆ ಖಾಲಿ ಮಾಡುವ ವಿಚಾರವಾಗಿ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಲೀಸ್ ಹಣವನ್ನು ವಾಪಸ್ ನೀಡದೆಯೇ ಮನೆಯನ್ನು ಬಿಟ್ಟುಕೊಡುವಂತೆ ಸಹೋದರಿ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಕಳೆದ ಭಾನುವಾರ ಇನಾಯತ್ ಕೆಲಸ ಮುಗಿಸಿ ಮನೆಗೆ ಬಂದಾಗ ಮತ್ತೆ ಅದೇ ಹಳೆಯ ವಿವಾದದ ಕಿಡಿ ಹೊತ್ತಿಕೊಂಡಿದೆ. ಮನೆ ಖಾಲಿ ಮಾಡುವ ವಿಚಾರವಾಗಿ ಅಕ್ಕ-ತಮ್ಮನ ನಡುವೆ ಜೋರು ಜಗಳ ನಡೆದಿದೆ. ಈ ಸಂದರ್ಭದಲ್ಲಿ ಅಕ್ಕನ ಮಗ (ಅಳಿಯ) ಮಸ್ರೂರ್ ಅಹ್ಮದ್ (22) ಜಗಳದ ಮಧ್ಯೆ ಪ್ರವೇಶಿಸಿದ್ದಾನೆ. ಮಾತಿಗೆ ಮಾತು ಬೆಳೆದು ಸಿಟ್ಟಿಗೆದ್ದ ಮಸ್ರೂರ್, ತನ್ನ ಮಾವ ಇನಾಯತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಇನಾಯತ್ ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ.

ಕೊಲೆ ನಡೆದ ಬಳಿಕ ಗಾಬರಿಯಾದ ಆರೋಪಿ ಮಸ್ರೂರ್ ಮತ್ತು ಕುಟುಂಬಸ್ಥರು ಇದನ್ನು ಮುಚ್ಚಿಹಾಕಲು ಸ್ಕೆಚ್ ಹಾಕಿದ್ದರು. ಇನಾಯತ್ ಅತಿಯಾಗಿ ಮದ್ಯಪಾನ ಮಾಡಿ, ಆಯತಪ್ಪಿ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಮತ್ತು ನೆರೆಹೊರೆಯವರ ಬಳಿ ಸುಳ್ಳು ಹೇಳಿದ್ದರು. ಎಲ್ಲರೂ ಇದನ್ನು ನಂಬುವಂತೆ ಮಾಡಿ, ಅತ್ಯಂತ ವೇಗವಾಗಿ ಅಂತ್ಯಸಂಸ್ಕಾರಕ್ಕೂ ಸಿದ್ಧತೆ ನಡೆಸಲಾಗಿತ್ತು. ಯಾವುದೇ ಅನುಮಾನ ಬಾರದಂತೆ ಪ್ರಕರಣವನ್ನು ಮುಕ್ತಾಯಗೊಳಿಸಲು ಆರೋಪಿಗಳು ಸಂಚು ರೂಪಿಸಿದ್ದರು.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ವಿವೇಕ್ ನಗರ ಪೊಲೀಸರು ಇನಾಯತ್ ಅವರ ಮೃತದೇಹವನ್ನು ಪರಿಶೀಲಿಸಿದರು. ಈ ವೇಳೆ ಮೃತದೇಹದ ಮೇಲೆ ಕೆಲವು ಗಾಯದ ಗುರುತುಗಳು ಕಂಡುಬಂದವು. ಜೊತೆಗೆ ಸ್ಥಳದಲ್ಲಿದ್ದ ಕೆಲವು ಸಂಬಂಧಿಕರು ಇನಾಯತ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಂತ್ಯಸಂಸ್ಕಾರವನ್ನು ತಡೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇನಾಯತ್ ಅವರ ಸಾವು ಆಕಸ್ಮಿಕವಾಗಿ ನಡೆದಿಲ್ಲ, ಬದಲಿಗೆ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬ ಅಂಶ ದೃಢಪಟ್ಟಿತು. ಪೊಲೀಸರು ಅಳಿಯ ಮಸ್ರೂರ್ ಅಹ್ಮದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಸ್ತಿ ಮತ್ತು ಮನೆ ಖಾಲಿ ಮಾಡುವ ವಿಚಾರಕ್ಕೆ ಜಗಳವಾಗಿ ಕೊಲೆ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Latest News