ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿದ ಹಿನ್ನೆಲೆಯಲ್ಲಿ, BMRCL ಇಂದು ಸಂಜೆ 4 ಗಂಟೆಗೆ ಮಹತ್ವದ ನಿರ್ದೇಶಕರ ಮಂಡಳಿ ಸಭೆಯನ್ನು ನಡೆಸಲಿದೆ. ಈ ಸಭೆ ಬೆಂಗಳೂರಿನ ಶಾಂತಿನಗರದಲ್ಲಿರುವ BMRCL ಕಚೇರಿಯಲ್ಲಿ ನಡೆಯಲಿದೆ. ದರ ಏರಿಕೆ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಬಂದ ಆಕ್ಷೇಪದ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.
ಒಟ್ಟು 14 ಸದಸ್ಯರಿರುವ BMRCL ಮಂಡಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಪರ 5 ಹಿರಿಯ ಅಧಿಕಾರಿಗಳು ಹಾಗೂ ಚೇರ್ಮನ್, ರಾಜ್ಯ ಸರ್ಕಾರದ ಪರ 5 ಅಧಿಕಾರಿಗಳು ಮತ್ತು BMRCLನ 4 ನಿರ್ದೇಶಕರು ಸಭೆಯಲ್ಲಿ ಹಾಜರಾಗಲಿದ್ದಾರೆ. ಕೆಲವು ಸದಸ್ಯರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೂಡ ಭಾಗವಹಿಸಲಿದ್ದಾರೆ.
ಸಭೆಯ ಮುಖ್ಯ ಅಜೆಂಡಾ ಮೆಟ್ರೋ ದರ ಏರಿಕೆ. ಈ ವಿಷಯವು ಲಕ್ಷಾಂತರ ಪ್ರಯಾಣಿಕರಿಗೆ ನೇರ ಪರಿಣಾಮ ಬೀರುತ್ತದೆ. ದರ ಏರಿಕೆಯನ್ನು ಮುಂದುವರಿಸಬೇಕೇ, ತಿದ್ದುಪಡಿ ಮಾಡಬೇಕೇ ಅಥವಾ ಸಂಪೂರ್ಣ ಹಿಂಪಡೆಯಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ದರ ನಿಗದಿ ಸಮಿತಿಯವರು ಸಹ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಸಭೆ ಮುಗಿದ ನಂತರ, ಮೆಟ್ರೋ ದರ ಏರಿಕೆ ಕುರಿತು ಅಂತಿಮ ತೀರ್ಮಾನ ಪ್ರಕಟವಾಗಲಿದೆ. ಪ್ರಯಾಣಿಕರು ಈ ನಿರ್ಧಾರದ ಬಗ್ಗೆ ಕಾದು ನೋಡಬೇಕಾಗಿದೆ, BMRCL ಈ ವಿಚಾರದಲ್ಲಿ ಜನಸಾಮಾನ್ಯರ ಅಭಿಪ್ರಾಯ ಹಾಗೂ ಸಾರ್ವಜನಿಕ ಆಕ್ಷೇಪವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಸಭೆ ಫಲಿತಾಂಶವು ನಗರದ ಮೆಟ್ರೋ ಪ್ರಯಾಣದ ದರದ ಭವಿಷ್ಯವನ್ನು ನಿರ್ಧರಿಸಲಿದೆ.