ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ದಿಢೀರ್ ಪರಪ್ಪನ ಅಗ್ರಹಾರ ಜೈಲಿಗೆ ಶುಕ್ರವಾರ ಭೇಟಿ ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಈ ಸುದ್ದಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ದಿಡೀರ್ ಭೇಟಿಯ ಹಿನ್ನೆಲೆಯಲ್ಲಿ ಡಿಕೆಶಿ ಅವರು ವಿಚಾರಣಾಧೀನ ಕೈದಿಗಳಾದ ಕಾಂಗ್ರೆಸ್ ಶಾಸಕರಾದ ವಿನಯ್ ಕುಲಕರ್ಣಿ ಮತ್ತು ವೀರೇಂದ್ರ ಪಪ್ಪಿ ಅವರನ್ನು ಭೇಟಿಯಾಗಿ ಧೈರ್ಯ ಹೇಳಿದರು.
ವಿನಯ್ ಕುಲಕರ್ಣಿ ಅವರು ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನರಾಗಿದ್ದು, ವೀರೇಂದ್ರ ಪಪ್ಪಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಲ್ಲಿದ್ದಾರೆ. ಶಿವಕುಮಾರ್ ಅವರು ಮೊದಲಿಗೆ ವೀರೇಂದ್ರ ಪಪ್ಪಿ ಅವರನ್ನು ಭೇಟಿಯಾಗಿ ಸಮಾಧಾನ ಹೇಳಿ ಬಂದರು, ಆನಂತರ ಕೋರ್ಟ್ ವಿಚಾರಣೆ ಮುಗಿಸಿ ಬಂದ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾಗಿ ಸಂತೈಸಿದರು ಎಂದು ತಿಳಿದುಬಂದಿದೆ.
ಇತ್ತ ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಕೂಡ ತೀವ್ರವಾಗಿವೆ. ಸಿದ್ದರಾಮಯ್ಯ ಅವರು “ಐದು ವರ್ಷ ನಾನೇ ಮುಖ್ಯಮಂತ್ರಿ” ಎಂದು ಘೋಷಿಸಿದರೆ, ಶಿವಕುಮಾರ್ ಬಣದ ಕೆಲ ಶಾಸಕರು ದೆಹಲಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ಬಣದ ಶಾಸಕರು ಬೆಂಗಳೂರಿನಲ್ಲಿ ಡಿನ್ನರ್ ಸಭೆ ನಡೆಸಿದ್ದು, ಉಭಯ ಬಣಗಳು ತಮ್ಮದೇ ಆದ ರೀತಿಯಲ್ಲಿ ರಾಜಕೀಯದಲ್ಲಿ ತೊಡಗಿವೆ.
ಹೈಕಮಾಂಡ್ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರೂ, ನಾಯಕತ್ವದ ಬದಲಾವಣೆ ಕುರಿತ ಚರ್ಚೆಗಳು ನವೆಂಬರ್ ಕ್ರಾಂತಿ ಎಂಬ ಮಾತಿನ ನಡುವೆ ಮತ್ತಷ್ಟು ಬಣ್ಣ ಪಡೆದುಕೊಂಡಿವೆ. ಅಧಿಕಾರ ಹಂಚಿಕೆ ವಿಚಾರ ಬಂದರೆ ಎರಡೂ ಬಣಗಳಲ್ಲಿ ಎಷ್ಟು ಶಾಸಕರಿದ್ದಾರೆ ಎಂಬುದು ಪ್ರಮುಖವಾಗಲಿದೆ.
ಈ ಹಿನ್ನೆಲೆಯಲ್ಲಿ, ಜೈಲಿನಲ್ಲಿ ಇಬ್ಬರು ಶಾಸಕರ ಜೊತೆ ಡಿಕೆ ಶಿವಕುಮಾರ್ ಮಾತನಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಕೇವಲ ಧೈರ್ಯ ನೀಡುವ ಭೇಟಿಯೇ ಅಥವಾ ರಾಜಕೀಯ ತಂತ್ರದ ಭಾಗವೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಭೇಟಿಯ ಹಿಂದಿನ ಅಸಲಿಯತ್ತೇನು ಎಂಬುದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿರೋದಂತೂ ನಿಜ.