ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳ ಸಂಭ್ರಮ ಆಚರಿಸುತ್ತಿರುವ ಹೊತ್ತಲ್ಲೇ ಅಧಿಕಾರ ಹಂಚಿಕೆ ಕುರಿತ ಒಳಕಲಹ ಮತ್ತೆ ತಲೆದೋರಿದ ಸುಳಿವು ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಸಂಬಂಧದಲ್ಲಿ ಶೈತ್ಯ ವಾತಾವರಣ ನಿರ್ಮಾಣವಾಗಿದೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಗರಿಗೆದರಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಇಬ್ಬರೂ ನಾಯಕರು ಒಂದೇ ವೇದಿಕೆಯಲ್ಲಿ ಇದ್ದರೂ, ಪರಸ್ಪರ ಮಾತುಕತೆ ಇಲ್ಲದಿರುವುದು ಕುತೂಹಲಕ್ಕೆ ಕಾರಣವಾಯಿತು. ಸಾಮಾನ್ಯವಾಗಿ ಅಕ್ಕಪಕ್ಕ ಕುಳಿತಾಗ ಮಾತನಾಡುವುದು ಸಹಜ. ಆದರೆ ಆ ದಿನ ಇಬ್ಬರೂ ಬಹಳ ಹೊತ್ತು ಮಾತೇ ಆಡದೆ ಕುಳಿತಿದ್ದರು. ನಂತರ ನದಿ ಮೂಲ ನಿರ್ವಹಣೆ ಪುಸ್ತಕದ ವಿಚಾರದಲ್ಲಿ ಮಾತ್ರ ಅನಿವಾರ್ಯವಾಗಿ ಕೆಲ ಮಾತುಗಳ ವಿನಿಮಯ ನಡೆದಿದೆ. ಈ ಘಟನೆ ಕಾಂಗ್ರೆಸ್ ಒಳಗಿನ ‘ಮೌನ ಯುದ್ಧ’ಕ್ಕೆ ಕನ್ನಡಿ ಹಿಡಿದಂತಾಗಿದೆ.
ಅಧಿಕಾರ ಹಂಚಿಕೆ ವಿಚಾರವಾಗಿ “ನಾ ಕೊಡೆ” ಎನ್ನುವ ಸಿಎಂ, “ನಾ ಬಿಡೆ” ಎನ್ನುವ ಡಿಕೆಶಿ ಎನ್ನುವ ರಾಜಕೀಯ ವ್ಯಾಖ್ಯಾನಗಳು ಕೇಳಿಬರುತ್ತಿವೆ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಬಂದ ಬಳಿಕ ಡಿಕೆ ಶಿವಕುಮಾರ್ ಅವರ ರಾಜಕೀಯ ಶೈಲಿಯಲ್ಲಿ ಬದಲಾವಣೆ ಕಂಡುಬಂದಿದೆ ಎಂಬ ಮಾತುಗಳು ಕೇಳಿಸುತ್ತಿವೆ. “ಏನು ಹೇಳಬೇಕೋ ಅದನ್ನು ವರಿಷ್ಠರಿಗೆ ಹೇಳಿದ್ದೇನೆ” ಎಂದು ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆ, ಹೈಕಮಾಂಡ್ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ.
ದೆಹಲಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ವಾಪಸ್ ಆಗಿರುವ ಡಿಕೆಶಿ, “ಕಾಲವೇ ಉತ್ತರಿಸುತ್ತದೆ” ಎಂದು ಹೇಳಿರುವುದು ರಾಜಕೀಯ ಕುತೂಹಲ ಹೆಚ್ಚಿಸಿದೆ. ಫೆಬ್ರವರಿ 17ರ ನಂತರ ಮಹತ್ವದ ಬೆಳವಣಿಗೆಗಳು ಸಾಧ್ಯವೆಂಬ ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ, ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಜ್ಜಾಗಿರುವುದರಿಂದ ಮುಂದಿನ ತಿಂಗಳು ಸರ್ಕಾರದ ಕೆಲಸಗಳಲ್ಲಿ ಬ್ಯುಸಿ ಎಂಬ ಸಂದೇಶ ನೀಡಿದ್ದಾರೆ. ಆದರೆ ಹೈಕಮಾಂಡ್ ಇಬ್ಬರನ್ನೂ ಪ್ರತ್ಯೇಕವಾಗಿ ಕರೆಸಿ ಮಾತುಕತೆ ನಡೆಸಬಹುದು ಎಂಬ ಮಾಹಿತಿ ಎಐಸಿಸಿ ಮೂಲಗಳಿಂದ ಲಭ್ಯವಾಗಿದೆ. ಸಚಿವರು ಮತ್ತು ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನವೂ ನಡೆಯುತ್ತಿದೆ ಎಂದು ಹೇಳಲಾಗಿದೆ.
ಈ ನಡುವೆ ಡಿಕೆ ಶಿವಕುಮಾರ್ ನೊಣವಿನಕೆರೆ ಅಜ್ಜಯ್ಯನ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವುದು ಗಮನಸೆಳೆದಿದೆ. “ಅಜ್ಜಯ್ಯನ ಶಕ್ತಿ ಇಲ್ಲದಿದ್ದರೆ ಸರ್ಕಾರ ಇಷ್ಟು ಶಕ್ತಿಯುತವಾಗಿರಲಿಲ್ಲ” ಎಂಬ ಹೇಳಿಕೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಮುಂದೇನಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಮಾತನಾಡದೇ ಅವರು ಟ್ವಿಸ್ಟ್ ನೀಡಿದ್ದಾರೆ. ಸಿಎಂ ಆಪ್ತರು ತ್ಯಾಗದ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದರೆ, ಡಿಕೆಶಿ ಬಣ ಹೈಕಮಾಂಡ್ ಮಧ್ಯಪ್ರವೇಶಕ್ಕೆ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಇವೆಲ್ಲದರ ನಡುವೆ ಸರ್ಕಾರ ಸಾವಿರ ದಿನಗಳ ಸಂಭ್ರಮವನ್ನು ಹಾವೇರಿಯಲ್ಲಿ ಭರ್ಜರಿಯಾಗಿ ಆಚರಿಸಲು ಸಜ್ಜಾಗಿದೆ. ಪಟ್ಟದಾಟದ ರಾಜಕೀಯದ ನಡುವೆಯೂ ಈ ಸಂಭ್ರಮ ಕಾರ್ಯಕ್ರಮದತ್ತ ಎಲ್ಲರ ಗಮನ ನೆಟ್ಟಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಒಳರಾಜಕೀಯ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.