ಕರ್ನಾಟಕ ರಾಜಕಾರಣದಲ್ಲಿ ನಾಳೆ (ಜೂನ್ 3) ಒಂದು ಐತಿಹಾಸಿಕ ಮತ್ತು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದ ಡಿ.ಕೆ.ಶಿವಕುಮಾರ್ ಅವರು ನಾಳೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜಕೀಯದ ಆಚೆಗೂ ಡಿಕೆಶಿ ಅವರ ಅಚಲ ದೈವಭಕ್ತಿ, ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತೇ ಇದೆ. ಹಾಗಾಗಿ ತಮ್ಮ ಬದುಕಿನ ಈ ಬಿಗ್ಗೆಸ್ಟ್ ಮೆಮೊರೇಬಲ್ ದಿನವನ್ನು ಅವರು ಸಖತ್ ಸ್ಪೆಷಲ್ ಆಗಿ ಪ್ಲಾನ್ ಮಾಡಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ ಧರ್ಮಗಳ ಸ್ವಾಮೀಜಿಗಳು, ಫಾದರ್‌ಗಳು ಮತ್ತು ಮೌಲ್ವಿಗಳ ಸಮ್ಮುಖದಲ್ಲಿ ಡಿಕೆಶಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನಾಳೆ ಸಂಜೆ 4.05ರ ಶುಭ ಮುಹೂರ್ತದಲ್ಲಿ ಪದಗ್ರಹಣ!
ಡಿಕೆ ಶಿವಕುಮಾರ್ ಅವರು ನಾಳೆ (ಜೂನ್ 03) ಸಂಜೆ ಸರಿಯಾಗಿ 4.05ಕ್ಕೆ ಬೆಂಗಳೂರಿನ ಲೋಕಭವನದ ಗಾಜಿನಮನೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಶೇಷ ಏನೆಂದರೆ, ಸ್ವಾಮೀಜಿಗಳು ಮತ್ತು ಜ್ಯೋತಿಷಿಗಳು ಹೇಳಿದ ದಿನಾಂಕ ಹಾಗೂ ಸಮಯವನ್ನು ಅವರು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.
ಅವರ ನಂಬಿಕೆಯ ಪ್ರಕಾರ, ಈ ಶುಭ ಕಾರ್ಯಕ್ರಮಕ್ಕಾಗಿ ಲೋಕಭವನದ ಗಾಜಿನ ಮನೆಯಲ್ಲಿ ಪೂರ್ವಾಭಿಮುಖವಾಗಿ (Facing East) ಭವ್ಯವಾದ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಸಿಎಂ ಮತ್ತು ಅವರ ಜೊತೆ ಪ್ರಮಾಣವಚನ ಸ್ವೀಕರಿಸುವ ಸಚಿವರು ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಶಿಷ್ಟಾಚಾರ ವಿಭಾಗವು ಡಿಕೆಶಿ ಕಚೇರಿಯಿಂದ ಪಕ್ಕಾ ಗೈಡ್‌ಲೈನ್ಸ್ ಪಡೆದು ಇಡೀ ಸ್ಟೇಜ್ ಸೆಟಪ್ ಮಾಡಿದೆ.
ಇತಿಹಾಸದಲ್ಲೇ ಫಸ್ಟ್ ಟೈಮ್: 55 ಧರ್ಮಗುರುಗಳಿಗೆ ಅಫೀಶಿಯಲ್ ಇನ್ವಿಟೇಷನ್
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಈ ಹಿಂದೆ ಯಾವುದೇ ಮುಖ್ಯಮಂತ್ರಿ ಎಲ್ಲಾ ಧರ್ಮಗಳ ಗುರುಗಳನ್ನು ಒಟ್ಟಿಗೆ ಒಂದೇ ವೇದಿಕೆಗೆ ಕರೆಸಿ ಅಧಿಕಾರ ವಹಿಸಿಕೊಂಡ ಉದಾಹರಣೆಗಳಿಲ್ಲ. ಡಿಕೆಶಿ ಅವರು ಈ ಹೊಸ ಸಂಪ್ರದಾಯದ ಮೂಲಕ ಸರ್ವ ಧರ್ಮ ಸಹಿಷ್ಣುತೆ, ಸೌಹಾರ್ದತೆ ಮತ್ತು ಶಾಂತಿಯ ಸಂದೇಶವನ್ನು ಇಡೀ ದೇಶಕ್ಕೆ ಸಾರಲು ಮುಂದಾಗಿದ್ದಾರೆ.
ಸರ್ಕಾರದ ವತಿಯಿಂದಲೇ ವಿವಿಧ ಧರ್ಮ ಹಾಗೂ ಸಮುದಾಯಗಳ ಸುಮಾರು 55 ಮಠಾಧಿಪತಿಗಳು, ಫಾದರ್‌ಗಳು ಮತ್ತು ಮೌಲ್ವಿಗಳಿಗೆ ಅಧಿಕೃತ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ. ಲೋಕಭವನದ ಗಾಜಿನ ಮನೆಯಲ್ಲಿ ಸುಮಾರು 1,100 ಆಸನಗಳ ಲಕ್ಸುರಿ ವ್ಯವಸ್ಥೆ ಮಾಡಲಾಗಿದ್ದು, ಈ ಧರ್ಮಗುರುಗಳು, ಹೈಕೋರ್ಟ್ ನ್ಯಾಯಾಧೀಶರು, ವಿಶೇಷ ಆಹ್ವಾನಿತರು ಮತ್ತು ಬೇರೆ ರಾಜ್ಯಗಳ ಮುಖ್ಯಮಂತ್ರಿಗಳಿಗಾಗಿ ವಿಐಪಿ ಸೀಟುಗಳನ್ನು ಮೀಸಲಿಡಲಾಗಿದೆ.
ಆಹ್ವಾನಿತ ಪ್ರಮುಖ ಧರ್ಮಗುರುಗಳ ಲಿಸ್ಟ್ ಇಲ್ಲಿದೆ:
ಡಿಕೆಶಿ ಅವರ ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಯಾಗಲಿರುವ ರಾಜ್ಯದ ಪ್ರಮುಖ ಮಠಾಧೀಶರು ಮತ್ತು ಧರ್ಮಗುರುಗಳ ಹೆಸರುಗಳು ಹೀಗಿವೆ:
ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು – ಆದಿಚುಂಚನಗಿರಿ ಮಹಾಸಂಸ್ಥಾನಮಠ.
ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು – ಸುತ್ತೂರುಮಠ, ಮೈಸೂರು.
ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು – ಶ್ರೀ ಸಿದ್ಧಗಂಗಾಮಠ, ತುಮಕೂರು.
ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು – ವಿಶ್ವ ಒಕ್ಕಲಿಗ ಮಹಾಸಂಸ್ಥಾನಮಠ, ಬೆಂಗಳೂರು.
ಶ್ರೀ ನಂಜಾವಧೂತ ಮಹಾಸ್ವಾಮಿಗಳು – ಗುರು ಬೃಹ್ಮೇಶ್ವರಮಠ, ಪಟ್ಟನಾಯಕನಹಳ್ಳಿ.
ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು – ತರಳಬಾಳು ಬೃಹನ್ಮಠ, ಸಿರಿಗೆರೆ.
ಶ್ರೀ ವಚನಾನಂದ ಮಹಾಸ್ವಾಮಿಗಳು – ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಹರಿಹರ.
ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು – ರಂಭಾಪುರ ಪೀಠ.
ಶ್ರೀ ನಿರಂಜನಾನಂದಪುರಿ ಸ್ವಾಮೀಜಿ – ಕನಕ ಗುರುಪೀಠ, ಕಾಗಿನೆಲೆ.
ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ – ಭೋವಿ ಗುರು ಪೀಠ, ಚಿತ್ರದುರ್ಗ.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ – ಚಿತ್ರದುರ್ಗ.
ಶ್ರೀ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮಿಗಳು – ಪೇಜಾವರಮಠ, ಉಡುಪಿ.
ಶ್ರೀ ರವಿಶಂಕರ ಗುರೂಜೀ – ಆರ್ಟ್ ಆಫ್ ಲಿವಿಂಗ್ ಆಶ್ರಮ, ಬೆಂಗಳೂರು.
ಶ್ರೀ ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು – ದಿಗಂಬರ ಜೈನಮಠ, ಶ್ರವಣಬೆಳಗೊಳ.
ಆನಂದ ಬಿಕ್ಕು – ಮಹಾಬೋಧಿ ಸೊಸಾಯಿಟಿ, ಬೆಂಗಳೂರು.
ಆರ್ಚಬಿಷಪ್ ಡಾ.ಪೀಟರ್ ಮಚಾಡೋ – ಕ್ಯಾಥೋಲಿಕ್ ಚರ್ಚ್, ಬೆಂಗಳೂರು.
ಹಜರತ್ ಹಫೀಜ್ ಡಾ.ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನ್ – ಬಂದೆನವಾಜ್ ದರ್ಗಾ, ಕಲಬುರ್ಗಿ.
ಡಿಕೆಶಿ ಅವರ ಈ ಹೊಸ ಮಾಸ್ಟರ್ ಪ್ಲಾನ್ ರಾಜಕೀಯ ವಲಯದಲ್ಲಷ್ಟೇ ಅಲ್ಲದೆ ಧಾರ್ಮಿಕ ಕ್ಷೇತ್ರದಲ್ಲೂ ಭಾರಿ ಚರ್ಚೆ ಮತ್ತು ಮೆಚ್ಚುಗೆಗೆ ಕಾರಣವಾಗಿದೆ. ಸರ್ವ ಧರ್ಮಗಳ ಆಶೀರ್ವಾದದೊಂದಿಗೆ ಸಿಎಂ ಗದ್ದುಗೆ ಏರುತ್ತಿರುವ ಡಿ ಕೆ ಶಿವಕುಮಾರ್ ಅವರ ಹೊಸ ಇನ್ನಿಂಗ್ಸ್ ಯಶಸ್ವಿಯಾಗಲಿ