ಐಪಿಎಲ್ 2026ರಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿ ಕಪ್ ಗೆದ್ದು ಇತಿಹಾಸ ಬರೆದಿರೋದೇನೋ ನಿಜ. ಆದ್ರೆ, ಈ ಹೈವೋಲ್ಟೇಜ್ ಫೈನಲ್ ಮ್ಯಾಚ್ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೀಬೇಕಿತ್ತು ಅನ್ನೋ ಬೇಸರ ಕನ್ನಡಿಗರಲ್ಲಿ ಇನ್ನು ಹಾಗೇ ಇದೆ. ಇದೀಗ ಇದೇ ವಿಚಾರವಾಗಿ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಬಿಸಿಸಿಐ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.
ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್‌ಗೆ ಶಿಫ್ಟ್ ಮಾಡಿದ್ದು ಕೇವಲ ಆರ್‌ಸಿಬಿಗೆ ಮಾತ್ರವಲ್ಲ, ಇಡೀ ಬೆಂಗಳೂರು ಮತ್ತು ಕರ್ನಾಟಕದ ಯುವ ಜನತೆಗೆ ಮಾಡಿದ ಅನ್ಯಾಯ ಅಂತ ಡಿಕೆಶಿ ಗರಂ ಆಗಿದ್ದಾರೆ. ದೆಹಲಿಗೆ ಹೊರಡುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಡಿಕೆಶಿ ಹೇಳಿದ್ದೇನು?
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, "ಐಪಿಎಲ್ ಫೈನಲ್ ಪಂದ್ಯ ನಮ್ಮ ಬೆಂಗಳೂರಿನಲ್ಲೇ ನಡೀಬೇಕಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಅದನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಯಿತು. ಬಿಸಿಸಿಐ ತಗೊಂಡ ಈ ನಿರ್ಧಾರದಿಂದ ಆರ್‌ಸಿಬಿ ತಂಡಕ್ಕೆ ಮಾತ್ರವಲ್ಲ, ನಮ್ಮ ಕರ್ನಾಟಕದ ಯುವಕರಿಗೆ ಮತ್ತು ಕ್ರಿಕೆಟ್ ಆಟಗಾರರಿಗೆ ದೊಡ್ಡ ಅನ್ಯಾಯವಾಗಿದೆ. ಕಳೆದ ಬಾರಿ ಏನೇನೋ ರಾಜಕೀಯ ಆಗಿರಬಹುದು, ಆದ್ರೆ ನಾವೆಲ್ಲರೂ ಅದನ್ನು ಮರೆತು ಹೊಸದಾಗಿ ಎಲ್ಲವನ್ನೂ ಸ್ಟಾರ್ಟ್ ಮಾಡಿದ್ದೇವೆ" ಅಂತ ಬೇಸರದಿಂದಲೇ ಹೇಳಿದ್ದಾರೆ.
ಬೆಂಗಳೂರಲ್ಲಿ ನಡೆಯಬೇಕಿದ್ದ ಫೈನಲ್ ಶಿಫ್ಟ್ ಆಗಿದ್ದು ಯಾಕೆ?
ಐಪಿಎಲ್ ರೂಲ್ಸ್ ಪ್ರಕಾರ, ಯಾವ ತಂಡ ಕಳೆದ ಸೀಸನ್‌ನಲ್ಲಿ ಚಾಂಪಿಯನ್ ಆಗಿರುತ್ತದೋ ಆ ತಂಡದ ಹೋಮ್ ಗ್ರೌಂಡ್‌ನಲ್ಲಿಯೇ ಮುಂದಿನ ಸೀಸನ್‌ನ ಫೈನಲ್ ಮತ್ತು ಒಂದು ಪ್ಲೇಆಫ್ ಮ್ಯಾಚ್ ನಡೀಬೇಕು. 2025ರಲ್ಲಿ ಆರ್‌ಸಿಬಿ ಕಪ್ ಗೆದ್ದಿದ್ದರಿಂದ ನಿಯಮದ ಪ್ರಕಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಫೈನಲ್ ನಡೀಬೇಕಿತ್ತು. ಬಿಸಿಸಿಐ ಮೊದಲು ಹಾಗೇ ಪ್ಲಾನ್ ಮಾಡಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಮ್ಯಾಚ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಶಿಫ್ಟ್ ಆಯ್ತು.
ಇದಕ್ಕೆ ಅಸಲಿ ಕಾರಣವೇನು ಅನ್ನೋದನ್ನು ಕಳೆದ ತಿಂಗಳು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಿಚ್ಚಿಟ್ಟಿದ್ದರು. ಅವರ ಪ್ರಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ತನಗೆ ನಿಗದಿಪಡಿಸಿದ್ದ ಕೋಟಾಗಿಂತಲೂ ಅತಿಯಾಗಿ ಉಚಿತ (Complimentary) ಟಿಕೆಟ್‌ಗಳನ್ನು ಕೇಳಿ ಬಿಸಿಸಿಐ ಮೇಲೆ ಡಿಮ್ಯಾಂಡ್ ಮಾಡಿತ್ತಂತೆ!
ಐಪಿಎಲ್ ಪ್ರೋಟೋಕಾಲ್ ಪ್ರಕಾರ, ಮ್ಯಾಚ್ ಆಯೋಜನೆ ಮಾಡುವ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸ್ಟೇಡಿಯಂನ ಒಟ್ಟು ಸೀಟಿಂಗ್ ಕೆಪಾಸಿಟಿಯ ಶೇಕಡಾ 15 ರಷ್ಟು ಮಾತ್ರ ಫ್ರೀ ಟಿಕೆಟ್ ಕೊಡಲಾಗುತ್ತದೆ. ಆದ್ರೆ ಕೆಎಸ್‌ಸಿಎ ಇದಕ್ಕಿಂತಲೂ ಹೆಚ್ಚಿನ ಟಿಕೆಟ್ ಬೇಕು ಅಂತ ಪಟ್ಟು ಹಿಡಿದಿದ್ದರಿಂದ ಬೇಸತ್ತ ಬಿಸಿಸಿಐ, ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್‌ಗೆ ಶಿಫ್ಟ್ ಮಾಡಿತು ಅಂತ ಸೈಕಿಯಾ ವಿವರಿಸಿದ್ದರು.
ಕಪ್ ಗೆದ್ದು ಇತಿಹಾಸ ಬರೆದ ಬೆಂಗಳೂರು ಹುಡುಗರು
ಏನೇ ಇರಲಿ, ನಮ್ಮ ಬೆಂಗಳೂರು ಹುಡುಗರು ಮೈದಾನ ಬದಲಾದರೂ ತಮ್ಮ ದಮ್ಮು-ತಾಕತ್ತು ಕಡಿಮೆ ಮಾಡಿಕೊಳ್ಳಲಿಲ್ಲ. ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಅವರದ್ದೇ ತವರಿನಲ್ಲಿ ಧೂಳೀಪಟ ಮಾಡಿ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಕಿಂಗ್ ವಿರಾಟ್ ಕೊಹ್ಲಿ ಕೇವಲ 42 ಬಾಲ್‌ಗಳಲ್ಲಿ ಅಜೇಯ 75 ರನ್ ಚಚ್ಚಿ ತಂಡಕ್ಕೆ ಐತಿಹಾಸಿಕ 5 ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಗುಜರಾತ್ ನೀಡಿದ್ದ 156 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಆರ್‌ಸಿಬಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯಿತು. ಈ ಬ್ಯಾಕ್-ಟು-ಬ್ಯಾಕ್ ಗೆಲುವಿನ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತವಾಗಿ ಕಪ್ ಗೆದ್ದಿದ್ದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸಾಧನೆಯ ರೆಕಾರ್ಡ್ ಬುಕ್‌ಗೆ ನಮ್ಮ ಆರ್‌ಸಿಬಿ ಕೂಡ ರಾಜನಂತೆ ಎಂಟ್ರಿ ಕೊಟ್ಟಿದೆ.