ಡಿಕೆ ಶಿವಕುಮಾರ್ ಘೋಷಿಸಿದ 6ನೇ ಗ್ಯಾರಂಟಿ, ಬೆಂಗಳೂರಿಗರಿಗೆ ಭರ್ಜರಿ ಬಂಪರ್ ಗಿಫ್ಟ್!!

ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವವರಿಗೆ, ಅದರಲ್ಲೂ ಮುಖ್ಯವಾಗಿ 'ಬಿ-ಖಾತಾ' ಸಮಸ್ಯೆಯಿಂದ ತಲೆಕೆಡಿಸಿಕೊಂಡಿದ್ದವರಿಗೆ ರಾಜ್ಯ ಸರ್ಕಾರ ದೊಡ್ಡ ಸುದ್ದಿಯೊಂದನ್ನು ನೀಡಿದೆ. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು (ಮೇ 13) ಸಿಲಿಕಾನ್ ಸಿಟಿ ಮಂದಿಗಾಗಿ ವಿಶೇಷವಾಗಿ '6ನೇ ಗ್ಯಾರಂಟಿ' ಘೋಷಣೆ ಮಾಡಿದ್ದಾರೆ.

ಫ್ರೀ ಗ್ಯಾರಂಟಿ ಆಯ್ತು, ಈಗ ಭೂ ಗ್ಯಾರಂಟಿ ಸರದಿ
ಫ್ರೀ ಗ್ಯಾರಂಟಿ ಆಯ್ತು, ಈಗ ಭೂ ಗ್ಯಾರಂಟಿ ಸರದಿ

ಅಂದಹಾಗೆ, ಈ 6ನೇ ಗ್ಯಾರಂಟಿ ಮತ್ಯಾವುದೂ ಅಲ್ಲ, ಅದುವೇ 'ಭೂ ಗ್ಯಾರಂಟಿ'. ನಗರದ ಲಕ್ಷಾಂತರ ಆಸ್ತಿ ಮಾಲೀಕರಿಗೆ 'ಎ-ಖಾತಾ' ನೀಡುವ ಬೃಹತ್ ಅಭಿಯಾನಕ್ಕೆ ಸರ್ಕಾರ ಚಾಲನೆ ನೀಡಿದೆ.

ನನ್ನ ಖಾತಾ ನನ್ನ ಹಕ್ಕು: ಏನಿದು ಹೊಸ ಪ್ಲಾನ್?

ಬೆಂಗಳೂರಿನಲ್ಲಿ ಸುಮಾರು 7 ಲಕ್ಷ ಆಸ್ತಿಗಳು 'ಬಿ-ಖಾತಾ' ವ್ಯಾಪ್ತಿಯಲ್ಲಿವೆ. ಸರಿಯಾದ ಪ್ಲಾನ್ ಇಲ್ಲದೆ ಮನೆ ಕಟ್ಟಿದವರು ಅಥವಾ ತಾಂತ್ರಿಕ ಕಾರಣಗಳಿಂದ ಬಿ-ಖಾತಾದಲ್ಲೇ ಉಳಿದವರಿಗೆ ಈಗ ಎ-ಖಾತೆ ಪಡೆಯಲು ಸುವರ್ಣ ಅವಕಾಶ ಸಿಕ್ಕಿದೆ. ಮೇ 16ರಿಂದ 'ನನ್ನ ಖಾತಾ ನನ್ನ ಹಕ್ಕು' ಎನ್ನುವ ಓಪನ್ ಹೌಸ್ ಅಭಿಯಾನ ಆರಂಭವಾಗಲಿದೆ.

ಈ ಯೋಜನೆಯ ಪ್ರಮುಖ ಲಾಭಗಳಿವು:

ಎ-ಖಾತಾ ಸೌಲಭ್ಯ: ಬಿ-ಖಾತಾದಲ್ಲಿರುವ ಆಸ್ತಿಗಳನ್ನು ಅಧಿಕೃತವಾಗಿ ಎ-ಖಾತಾಗೆ ಪರಿವರ್ತಿಸಬಹುದು.

ಕಡಿಮೆ ದರ: ಬಿ-ಖಾತೆಯಿಂದ ಎ-ಖಾತೆಗೆ ಮಾಡಿಕೊಳ್ಳುವಾಗ ಗೈಡೆನ್ಸ್ ವ್ಯಾಲ್ಯೂ ಶುಲ್ಕವನ್ನು ಶೇ. 5 ರಿಂದ ಶೇ. 2ಕ್ಕೆ ಇಳಿಕೆ ಮಾಡಲಾಗಿದೆ. ಇದು ಸಾಮಾನ್ಯ ಜನರಿಗೆ ಆರ್ಥಿಕವಾಗಿ ದೊಡ್ಡ ರಿಲೀಫ್ ನೀಡಲಿದೆ.

ಮನೆಗೇ ಬರುತ್ತೆ ಸರ್ಟಿಫಿಕೇಟ್: ನೀವು ಸರಿಯಾದ ದಾಖಲೆಗಳನ್ನು ನೀಡಿದರೆ, ಆಸ್ತಿ ಪ್ರಮಾಣಪತ್ರವು ನೇರವಾಗಿ ನಿಮ್ಮ ಮನೆ ಬಾಗಿಲಿಗೇ ಬರಲಿದೆ.

ಸೌಲಭ್ಯಗಳ ಸುರಿಮಳೆ: ಇಲ್ಲಿಯವರೆಗೆ ಓಸಿ (OC) ಇಲ್ಲದೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯಲು ಪರದಾಡುತ್ತಿದ್ದವರಿಗೆ ಇನ್ಮುಂದೆ ಯಾವುದೇ ಅಡೆತಡೆ ಇರುವುದಿಲ್ಲ.

ಅಭಿಯಾನ ಎಲ್ಲಿ ಮತ್ತು ಯಾವಾಗ?

ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಕಡೆಗಳಲ್ಲಿ ಈ ಅಭಿಯಾನ ನಡೆಯಲಿದೆ. ವಿಶೇಷವಾಗಿ ಶಾಲೆಗಳ ಆವರಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮೇ 16ರ ನಂತರ ಪ್ರತಿ ಶನಿವಾರ ಅಧಿಕಾರಿಗಳು ಲಭ್ಯವಿರುತ್ತಾರೆ. ವಿಶೇಷ ಸೂಚನೆಯೆಂದರೆ, ಈ ಕೆಲಸಕ್ಕಾಗಿ ಅಧಿಕಾರಿಗಳು ರಜೆ ಇದ್ದರೂ ಕೆಲಸ ಮಾಡಬೇಕು ಎಂದು ಡಿಕೆಶಿ ಖಡಕ್ ಸೂಚನೆ ನೀಡಿದ್ದಾರೆ. ಆಸ್ತಿ ಮಾಲೀಕರಿಗೆ ತಮ್ಮ ದಾಖಲೆ ಸರಿಪಡಿಸಿಕೊಳ್ಳಲು ಮುಂದಿನ 100 ದಿನಗಳ ಕಾಲಾವಕಾಶ ನೀಡಲಾಗಿದೆ.

ಗ್ರೀನ್ ಬೆಂಗಳೂರು ಮತ್ತು ಕೆಂಪೇಗೌಡ ಜಯಂತಿ

ಬರಿ ಆಸ್ತಿ ಅಷ್ಟೇ ಅಲ್ಲ, ಬೆಂಗಳೂರಿನ ಪರಿಸರ ಕಾಪಾಡಲು ಕೂಡ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಬಿಡಿಎ (BDA) ಸ್ಥಾಪನೆಯಾಗಿ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜೂನ್ 27ರ ಕೆಂಪೇಗೌಡ ಜಯಂತಿಯಂದು 'ಗ್ರೀನ್ ಬೆಂಗಳೂರು' ಕಾರ್ಯಕ್ರಮ ನಡೆಯಲಿದೆ. ಅಂದು ನಗರದಾದ್ಯಂತ ಬರೊಬ್ಬರಿ 15 ಲಕ್ಷ ಸಸಿಗಳನ್ನು ನೆಡಲು ನಿರ್ಧರಿಸಲಾಗಿದೆ.

ಬಿಸಿನೆಸ್ ಕಾರಿಡಾರ್‌ಗೆ ಗ್ರೀನ್ ಸಿಗ್ನಲ್

ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆಯವರೆಗೆ ಸುಮಾರು 33 ಕಿಲೋಮೀಟರ್ ಉದ್ದದ ಬಿಸಿನೆಸ್ ಕಾರಿಡಾರ್ ನಿರ್ಮಿಸಲಾಗುವುದು. ಇಲ್ಲಿ ಭೂಮಿ ನೀಡುವ ಮಾಲೀಕರಿಗೆ 5 ವಿವಿಧ ರೂಪದ ಪರಿಹಾರಗಳನ್ನು ನೀಡಲು ಸರ್ಕಾರ ಸಿದ್ಧವಿದೆ. "ಯಾವುದೇ ಕಾರಣಕ್ಕೂ ಈ ಜಮೀನನ್ನು ಡಿನೋಟಿಫೈ ಮಾಡುವುದಿಲ್ಲ" ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಇ-ಖಾತಾ ಮತ್ತು ನಂಬಿಕೆ ನಕ್ಷೆಯಂತಹ ಡಿಜಿಟಲ್ ಕ್ರಾಂತಿ ಬೆಂಗಳೂರಿನಲ್ಲಿ ಶುರುವಾಗಿದೆ. ಅದರ ಬೆನ್ನಲ್ಲೇ ಬಂದಿರುವ ಈ 'ಭೂ ಗ್ಯಾರಂಟಿ' ಮಧ್ಯಮ ವರ್ಗದ ಜನರಿಗೆ ವರದಾನವಾಗಲಿದೆ. ನಿಮ್ಮ ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಇದು ಸರಿಯಾದ ಸಮಯ. ನಿಮ್ಮ ಏರಿಯಾದಲ್ಲಿ ನಡೆಯುವ ಶಿಬಿರಕ್ಕೆ ಭೇಟಿ ನೀಡಿ, ಈ ಸೌಲಭ್ಯದ ಲಾಭ ಪಡೆಯಿರಿ.

Latest News