ಕುಮಾರಸ್ವಾಮಿ ಬಹಿರಂಗ ಸವಾಲು ಸ್ವೀಕರಿಸಿದ ಡಿಕೆಶಿ - ಬಿಡದಿ ಟೌನ್‌ಶಿಪ್‌ಗೆ ಮೆಟ್ರೋ ಲಿಂಕ್, ಜೂನ್‌ನಲ್ಲೇ ರೈತರಿಗೆ ಕೋಟಿ ಕೋಟಿ ಪರಿಹಾರ!!

ರಾಜ್ಯ ರಾಜಕಾರಣದಲ್ಲಿ ಈಗ ಮತ್ತೊಂದು ಹೈವೋಲ್ಟೇಜ್‌ ಜಟಾಪಟಿ ಶುರುವಾಗಿದೆ. ಅದು ಬೇರೆ ಏನೂ ಅಲ್ಲ, ಹಳೇ ಮೈಸೂರು ಭಾಗದ ಇಬ್ಬರು ಘಟಾನುಘಟಿ ನಾಯಕರ ನಡುವಿನ ಬಿಡದಿ ಟೌನ್‌ಶಿಪ್‌ ಫೈಟ್! ಈ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HDK) ಅವರು ಹಾಕಿದ್ದ ಬಹಿರಂಗ ಚರ್ಚೆಯ ಪಂಥಾಹ್ವಾನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DKS) ಅವರು ಫುಲ್ ಖಡಕ್ ಆಗಿಯೇ ಸ್ವೀಕರಿಸಿದ್ದಾರೆ. "ಅವರೇ ಜಾಗ ಮತ್ತು ಸಮಯ ನಿಗದಿ ಮಾಡಲಿ, ನಾನು ಚರ್ಚೆಗೆ ಯಾವತ್ತಿದ್ದರೂ ರೆಡಿ" ಅಂತ ಡಿಕೆಶಿ ತಿರುಗೇಟು ನೀಡಿದ್ದಾರೆ.

"ಬಂಡೆಗಿಂತ ಕಬ್ಬಿಣ ಗಟ್ಟಿಯಲ್ವಾ?" ಎಚ್‌ಡಿಕೆ ಪಂಥಾಹ್ವಾನಕ್ಕೆ ತಕ್ಕ ತಿರುಗೇಟು ನೀಡಿ ಹಳೇ ಮೈಸೂರು ಭಾಗದಲ್ಲಿ ಅಬ್ಬರಿಸಿದ ಡಿ.ಕೆ. ಶಿವಕುಮಾರ್‌!

ಬೆಂಗಳೂರಿನ ಕುಮಾರಪಾರ್ಕ್‌ನಲ್ಲಿರೋ ತಮ್ಮ ಸರ್ಕಾರಿ ನಿವಾಸದಲ್ಲಿ ಬಿಡದಿ ಟೌನ್‌ಶಿಪ್‌ ಭಾಗದ ರೈತರ ಜೊತೆ ಮಹತ್ವದ ಸಭೆ ನಡೆಸಿದ ನಂತರ ಡಿಕೆಶಿ ಮಾಧ್ಯಮಗಳ ಮುಂದೆ ಬಂದು ಕುಮಾರಸ್ವಾಮಿ ಫ್ಯಾಮಿಲಿ ವಿರುದ್ಧ ಸಖತ್ ಆಟ ಆಡಿದ್ದಾರೆ.

ರೈತರಿಗೆ ಕೋಟಿ ಕೋಟಿ ಪರಿಹಾರ: ಜೂನ್‌ನಲ್ಲೇ ದುಡ್ಡು ರಿಲೀಸ್!

ಬಿಡದಿ ಟೌನ್‌ಶಿಪ್‌ ಯೋಜನೆಗೆ ಭೂಮಿ ನೀಡಿರುವ ರೈತರಿಗೆ ಡಿ.ಕೆ. ಶಿವಕುಮಾರ್‌ ಅವರು ಬಿಗ್ ಗಿಫ್ಟ್ ಕೊಟ್ಟಿದ್ದಾರೆ. "ಜೂನ್ ಮೊದಲ ವಾರದಿಂದಲೇ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಬಿಡುಗಡೆ ಮಾಡಲು ಎಲ್ಲಾ ಕ್ರಮ ತಗೊಳ್ತೀನಿ" ಅಂತ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಮೂರು-ಮೂರು ಹಳ್ಳಿಗಳನ್ನು ಸೇರಿಸಿ ಪ್ರತ್ಯೇಕವಾಗಿ ಫೈನಲ್ ನೋಟಿಫಿಕೇಷನ್ ಮಾಡೋಕೆ ಸರ್ಕಾರ ತೀರ್ಮಾನಿಸಿದೆ. ಈ ಭಾಗದ ಶೇಕಡಾ 80ರಷ್ಟು ರೈತರು ತಾವಾಗಿಯೇ ಭೂಮಿ ಕೊಡಲು ಒಪ್ಪಿಕೊಂಡಿದ್ದು, ಬೇಗ ಪರಿಹಾರ ಕೊಡಿ ಅಂತ ಕೇಳ್ತಿದ್ದಾರೆ ಅಂತ ಡಿಕೆಶಿ ವಿವರಿಸಿದ್ದಾರೆ.

ಈ ಪ್ರಾಜೆಕ್ಟ್‌ಗಾಗಿ ಸರ್ಕಾರ ಪ್ರತಿ ಎಕರೆಗೆ ಬರೋಬ್ಬರಿ 5 ಕೋಟಿ ರೂಪಾಯಿ ಬಂಡವಾಳ ಹಾಕ್ತಿದೆ. ಅಷ್ಟೇ ಅಲ್ಲ, ಈ ಬಿಡದಿ ಟೌನ್‌ಶಿಪ್‌ಗೆ ಮೆಟ್ರೋ ಕನೆಕ್ಷನ್ ಕೊಡಬಹುದೇ ಅಂತ ಈಗಲೇ ಸರ್ವೇ ಕೂಡ ನಡೀತಿದೆ. ಬೆಂಗಳೂರು-ಮೈಸೂರು ಹೈವೇ, ನೈಸ್ ರಸ್ತೆ ಹಾಗೂ ಕನಕಪುರ ರಸ್ತೆಗಳಿಗೆ ಇದಕ್ಕೆ ಲಿಂಕ್ ಕೊಡಲಾಗುತ್ತೆ. ಜೂನ್ 30ರ ಒಳಗಡೆ ಎಲ್ಲಾ ಅಧಿಸೂಚನೆ ಹೊರಡಿಸಿ, ಜಮೀನು ಕೊಟ್ಟವರಿಗೆ ಪೂರ್ತಿ ದುಡ್ಡು ಸೆಟಲ್ ಮಾಡಲಾಗುವುದು. ಇನ್ನು ಯಾರಾದರೂ ಒಪ್ಪದಿದ್ದರೆ, ಆ ಹಣವನ್ನು ಕೋರ್ಟ್‌ನಲ್ಲಿ ಡಿಪಾಸಿಟ್ ಮಾಡಿ ಕೆಲಸ ಮುಂದುವರಿಸುತ್ತೇವೆ ಅಂತ ಡಿಕೆಶಿ ಕ್ಲಿಯರ್ ಆಗಿ ಹೇಳಿದ್ದಾರೆ.

"ಬಂಡೆಗಿಂತ ಕಬ್ಬಿಣ ಗಟ್ಟಿಯಲ್ಲವೇ?" - ಡಿಕೆಶಿ ಪಂಚ್ ಡೈಲಾಗ್!

ಕುಮಾರಸ್ವಾಮಿ ಅವರ ಚಾಲೆಂಜ್ ಬಗ್ಗೆ ಮಾತನಾಡಿದ ಡಿಕೆಶಿ, ತಮ್ಮದೇ ಸ್ಟೈಲ್‌ನಲ್ಲಿ ಟಾಂಗ್ ಕೊಟ್ಟಿದ್ದಾರೆ. "ನಾನು ಅವರಿಗಿಂತ ದುರ್ಬಲನೇ ಇರಬಹುದು, ಅವರೇ ಶಕ್ತಿವಂತರಾಗಿರಲಿ. ಆದರೆ ಬಂಡೆಗಿಂತ ಕಬ್ಬಿಣ ಗಟ್ಟಿಯಲ್ವಾ? ಆ ಕಬ್ಬಿಣದಿಂದಲೇ ಅಲ್ವಾ ಬಂಡೆ ಒಡೆಯುವುದು!" ಅಂತ ಪರೋಕ್ಷವಾಗಿ ತಾವೇ ಗೆಲ್ಲೋದು ಅನ್ನೋ ಸೌಂಡ್ ಮಾಡಿದ್ದಾರೆ. ಈ ಹಿಂದೆ ಸಾತನೂರಿನಲ್ಲೂ ಇವರ ಚಾಲೆಂಜ್ ಸ್ವೀಕರಿಸಿದ್ದೆ, ಈಗಲೂ ಗೌರವದಿಂದಲೇ ಚರ್ಚೆಗೆ ಬರ್ತೀನಿ, ಯಾವುದೇ ಅಸಂಬದ್ಧ ಮಾತುಗಳನ್ನ ಆಡಲ್ಲ ಅಂದಿದ್ದಾರೆ.

ಇದೇ ವೇಳೆ ಕುಮಾರಸ್ವಾಮಿ ಅವರ ಸವಾಲಿಗೆ ರೈತರೇ ಉತ್ತರ ಕೊಡ್ತಾರೆ ಎಂದ ಡಿಕೆಶಿ, "ಕಬ್ಬಿಣ, ಸ್ಟೀಲ್ ಬೆಲೆ ಟನ್‌ಗೆ 5 ಸಾವಿರ ರೂಪಾಯಿ ಜಾಸ್ತಿಯಾಗಿದೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರಲ್ಲ, ಮೊದಲು ಆ ಬೆಲೆ ಕಡಿಮೆ ಮಾಡಿಸಿ ಬಡವರು ಮನೆ ಕಟ್ಟಿಕೊಳ್ಳೋಕೆ ಸಹಾಯ ಮಾಡಲಿ, ಆಮೇಲೆ ಪಂಥಾಹ್ವಾನಕ್ಕೆ ಬರಲಿ ಅಂತ ರೈತರೇ ಹೇಳ್ತಿದ್ದಾರೆ" ಅಂತ ತಿವಿದಿದ್ದಾರೆ.

ಇದು ನಾನ ತಂದಿದ್ದಲ್ಲ, ಎಚ್‌ಡಿಕೆ ಕಾಲದ ಯೋಜನೆ!

ಅಸಲಿ ವಿಷಯ ಏನಪ್ಪಾ ಅಂದ್ರೆ, ಈ ಬಿಡದಿ ಟೌನ್‌ಶಿಪ್ ಯೋಜನೆಯನ್ನು ತಂದಿದ್ದು ನಾನಲ್ಲ, ಕುಮಾರಸ್ವಾಮಿ ಅವರೇ ಸಿಎಂ ಆಗಿದ್ದಾಗ ನೋಟಿಫಿಕೇಷನ್ ಮಾಡಲಾಗಿತ್ತು ಅಂತ ಡಿಕೆಶಿ ಹಳೇ ಕಥೆ ಬಿಚ್ಚಿಟ್ಟಿದ್ದಾರೆ. "ಅವರ ಕಾಲದಲ್ಲೇ ಜಮೀನಿಗೆ ಪ್ರತಿಯಾಗಿ 8 ಸಾವಿರ ಅಡಿಯಷ್ಟು ಡೆವಲಪ್ಡ್ ಭೂಮಿ ಕೊಡೋಕೆ ತೀರ್ಮಾನಿಸಿ, ಇಡೀ ಪ್ರಾಜೆಕ್ಟ್‌ ಅನ್ನು ಡಿಎಲ್‌ಎಫ್‌ (DLF) ಸಂಸ್ಥೆಗೆ ಕೊಟ್ಟಿದ್ರು. ಆಮೇಲೆ ಆ ಕಂಪನಿ ಇದು ವರ್ಕೌಟ್ ಆಗಲ್ಲ ಅಂತ ದುಡ್ಡು ವಾಪಸ್ ತಗೊಂಡು ಹೋಯ್ತು. ಜಗದೀಶ್ ಶೆಟ್ಟರ್, ಬೊಮ್ಮಾಯಿ ಸಿಎಂ ಆಗಿದ್ದಾಗ ಕೆಐಎಡಿಬಿ 1 ಸಾವಿರ ಎಕರೆ ತಗೊಂಡಾಗ ಇವರು ಯಾಕೆ ಮಾತನಾಡಲಿಲ್ಲ?" ಅಂತ ಪ್ರಶ್ನೆ ಮಾಡಿದ್ದಾರೆ.

ಇನ್ನು ಈ ಯೋಜನೆ ಬೇಡ ಅಂತ ದೇವೇಗೌಡರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಪತ್ರ ಬರೆದಿರೋ ವಿಚಾರಕ್ಕೆ ರಿಯಾಕ್ಟ್ ಮಾಡಿದ ಶಿವಕುಮಾರ್, "ದೇವೇಗೌಡರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಬೇಕು, ನಮ್ಮ ನಾಯಕರಿಗೆ ಬರೆದರೆ ಏನು ಪ್ರಯೋಜನ? ರಿಯಲ್ ಎಸ್ಟೇಟ್ ಮಾಡಿ ಡಿಎಲ್‌ಎಫ್‌ಗೆ ಮಾರಿದವರು ಯಾರು? ಮಗನ ಜೊತೆ ಈಗ ದೇವೇಗೌಡರೂ ಚರ್ಚೆಗೆ ಬರಲಿ" ಅಂತ ಸವಾಲು ಹಾಕಿದ್ದಾರೆ.

'ಆ ಹುಡುಗನಿಗೆ ನಾನು ಉತ್ತರಿಸಲ್ಲ' - ನಿಖಿಲ್‌ಗೆ ಡಿಕೆಶಿ ಟಾಂಗ್!

"ನಿಮಗೆ 136 ಶಾಸಕರಿದ್ದರೂ ಏನು ಮಾಡಿದ್ದೀರಿ?" ಅಂತ ನಿಖಿಲ್ ಕುಮಾರಸ್ವಾಮಿ ಕೇಳಿದ್ದ ಪ್ರಶ್ನೆಗೆ ಡಿಕೆಶಿ ಸಿಕ್ಕಾಪಟ್ಟೆ ಕ್ಯಾಶುವಲ್ ಆಗಿ ಕೌಂಟರ್ ಕೊಟ್ಟಿದ್ದಾರೆ. "ಆ ಹುಡುಗನಿಗೆ ಉತ್ತರ ಕೊಡೋಕೆ ನನಗೆ ಇಷ್ಟ ಇಲ್ಲ. ಅದಕ್ಕೆ ನಮ್ಮ ಲೋಕಲ್ ಲೀಡರ್ಸ್ ಇದ್ದಾರೆ. ರಾಜಕೀಯದಲ್ಲಿ ಆತನ ಸ್ಟೇಟಸ್ ಏನು ಅಂತಲೇ ನನಗೆ ಗೊತ್ತಿಲ್ಲ. ಜೆಡಿಎಸ್ ಪಾರ್ಟಿ ಪ್ರೆಸಿಡೆಂಟ್ ಆದಮೇಲೆ ಬೇಕಿದ್ರೆ ನೋಡೋಣ" ಅಂತ ಸಿಂಗಲ್ ಲೈನಲ್ಲೇ ನಿಖಿಲ್ ಕಾಲೆಳೆದಿದ್ದಾರೆ.

Latest News