ಮುಗಿದ ಸಿದ್ದು ರಾಜಯೋಗ, ಮುಂದಿನ 8 ವರ್ಷ ಡಿಕೆಶಿ ಫುಲ್ ಸ್ಟ್ರಾಂಗ್ - ಇಂಟರೆಸ್ಟಿಂಗ್ ಭವಿಷ್ಯ ನುಡಿದ ದ್ವಾರಕನಾಥ್ ಗುರೂಜಿ!!

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಸದ್ದು ಜೋರಾಗಿರುವ ಬೆನ್ನಲ್ಲೇ, ಈಗ ಜ್ಯೋತಿಷ್ಯ ಲೋಕದ ಭವಿಷ್ಯವಾಣಿಯೊಂದು ಭಾರಿ ಸಂಚಲನ ಮೂಡಿಸಿದೆ. ಹೌದು, "ಸೋಮವಾರದ ಒಳಗಾಗಿ ಡಿ.ಕೆ.ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಎಂಟು ವರ್ಷಗಳ ಕಾಲ ಅವರ ಅಧಿಕಾರವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವೇ ಇಲ್ಲ!" ಹೀಗಂತ ಭರ್ಜರಿ ಭವಿಷ್ಯ ನುಡಿದಿದ್ದಾರೆ ಡಿಕೆಶಿ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ.

ಸಿದ್ದರಾಮಯ್ಯ ಜಾತಕದಲ್ಲಿ ಗುರು, ಶನಿ ಬಲವಿಲ್ಲ | Photo Credit: https://www.kannadaprabha.com/
ಸಿದ್ದರಾಮಯ್ಯ ಜಾತಕದಲ್ಲಿ ಗುರು, ಶನಿ ಬಲವಿಲ್ಲ | Photo Credit: https://www.kannadaprabha.com/

ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆ ಮನಸ್ಸು ಬಿಚ್ಚಿ ಮಾತನಾಡಿರುವ ಗುರೂಜಿ, ಡಿಕೆಶಿ ಜಾತಕದ ಶಕ್ತಿ ಮತ್ತು ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

"ಅವನು ಜೈಲು ಮಂತ್ರಿಯಾಗಿದ್ದಾಗಲೇ ಸಿಎಂ ಆಗ್ತೀಯಾ ಅಂದಿದ್ದೆ!"

ಡಿ.ಕೆ. ಶಿವಕುಮಾರ್ ಅವರೊಂದಿಗಿನ ತಮ್ಮ 35 ವರ್ಷಗಳ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡ ದ್ವಾರಕನಾಥ್ ಗುರೂಜಿ, "ಡಿಕೆಶಿ ನನಗೆ ಕಳೆದ 35 ವರ್ಷಗಳಿಂದ ಗೊತ್ತು. ಹಿಂದೆ ಮಾಜಿ ಸಿಎಂ ಬಂಗಾರಪ್ಪ ಅವರ ಸಂಪುಟದಲ್ಲಿ ಅತ್ಯಂತ ಸಣ್ಣ ವಯಸ್ಸಿಗೆ ಜೈಲು ಮಂತ್ರಿಯಾಗಿದ್ದಾಗಲೇ, 'ನೀನು ಮುಂದೊಂದು ದಿನ ಈ ರಾಜ್ಯಕ್ಕೆ ಮುಖ್ಯಮಂತ್ರಿ ಆಗ್ತೀಯಾ' ಎಂದು ನಾನು ಭವಿಷ್ಯ ಹೇಳಿದ್ದೆ. ಅವನು ಸದಾ ನನ್ನ ಸಂಪರ್ಕದಲ್ಲೇ ಇದ್ದಾನೆ, ನಮ್ಮ ಮನೆಯ ಮಗನಿದ್ದಂತೆ" ಎಂದು ಹಳೆಯ ದಿನಗಳನ್ನು ನೆನೆದಿದ್ದಾರೆ.

ಸಿದ್ದರಾಮಯ್ಯಗೆ ರಾಜಯೋಗ ಮುಗಿದಿದೆ!

ಇದೇ ವೇಳೆ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರ ಜಾತಕದ ಬಗ್ಗೆಯೂ ಗುರೂಜಿ ವಿಶ್ಲೇಷಣೆ ನಡೆಸಿದ್ದಾರೆ. "ಸಿದ್ದರಾಮಯ್ಯ ಅವರದ್ದು ವೃಶ್ಚಿಕ ರಾಶಿ. ಸದ್ಯದ ಗ್ರಹಗತಿಗಳ ಪ್ರಕಾರ ಅವರಿಗೆ ಗುರು ಬಲ ಮತ್ತು ಶನಿ ಬಲ ಎರಡು ಇಲ್ಲ. ಅಂದರೆ ಅವರ ಸಿಎಂ ರಾಜಯೋಗ ಸದ್ಯಕ್ಕೆ ಮುಗಿದಿದೆ. ಆದರೂ, ರಾಜ್ಯಕ್ಕೆ ಅವರ ಮಾರ್ಗದರ್ಶನ ಮತ್ತು ಅನುಭವದ ಅಗತ್ಯ ಇನ್ನೂ ಇದೆ" ಎಂದು ಗುರೂಜಿ ಹೇಳಿದ್ದಾರೆ.

ಡಿಕೆಶಿಗೆ ಈಗ ಸುವರ್ಣ ಕಾಲ!

"ಡಿ.ಕೆ. ಶಿವಕುಮಾರ್ ಅವರಿಗೆ ಈಗ ಗೋಲ್ಡನ್ ಟೈಮ್ ಆರಂಭವಾಗಿದೆ. ಸದ್ಯ ಗುರು ಗ್ರಹವು ಮಿಥುನ ರಾಶಿಯಲ್ಲಿ ಇರುವುದರಿಂದ ಡಿ.ಕೆ.ಗೆ ಭಾರಿ ರಾಜಯೋಗ ತರಲಿದೆ. ಮುಂದಿನ 8 ವರ್ಷ ಅವರದ್ದೇ ಹವಾ" ಎಂದಿದ್ದಾರೆ ರಾಜಗುರುಗಳು.

ಶೃಂಗೇರಿಯಲ್ಲಿ ಪ್ರಾರ್ಥನೆ ಮಾಡುವಾಗಲೇ ಬಂತು ಡಿಕೆಶಿ ಫೋನ್ ಕಾಲ್!

"ಡಿ.ಕೆ. ಶಿವಕುಮಾರ್ ಅನ್ನೋದೇ ಒಂದು ಬ್ರ್ಯಾಂಡ್. ಅವರು ಕೇವಲ ಮುಖ್ಯಮಂತ್ರಿ ಮಾತ್ರವಲ್ಲ, ಭಾರಿ ಬುದ್ಧಿವಂತ, ಜಾಣ ಮತ್ತು ಅಪ್ರತಿಮ ಸಹನೆಯುಳ್ಳವರು" ಎಂದು ಗುರೂಜಿ ಡಿಕೆಶಿಯನ್ನು ಕೊಂಡಾಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಅವನಿಗೆ ಸಿಎಂ ಆಗೋ ಯೋಗ ನ್ಯಾಯವಾಗಿ ಯುಗಾದಿ ಹೊಸ ವರ್ಷದ ಒಳಗೇ ಸಿಗಬೇಕಿತ್ತು. ಆದರೆ ಯಾಕೋ ಸ್ವಲ್ಪ ತಡವಾಯಿತು. ಆ ನಿಧಾನಕ್ಕೆ ದೇವರಿಗೇ ಕಾರಣ ಗೊತ್ತು. ಅದಕ್ಕಾಗಿಯೇ ನಾನು ಅವನ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಹೋಗಿದ್ದೆ. ವಿಶೇಷ ಏನೆಂದರೆ, ನಾನು ಶೃಂಗೇರಿಯಲ್ಲಿ ದೇವಸ್ಥಾನದ ಒಳಗೆ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಖುದ್ದು ಡಿ.ಕೆ. ಶಿವಕುಮಾರ್ ನನಗೆ ಫೋನ್ ಕಾಲ್ ಮಾಡಿದರು! 'ಗುರೂಜಿ, ಕೆಲಸ ಆಗಿದೆ' ಎಂದು ಸಿಹಿ ಸುದ್ದಿ ನೀಡಿದರು" ಎಂದು ಆ ರೋಮಾಂಚನಕಾರಿ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಸೋಮವಾರದ ಒಳಗೆ ಪಟ್ಟಾಭಿಷೇಕ ಫಿಕ್ಸ್!

"ದೇವರ ದಯೆಯಿಂದ ಈಗ ಎಲ್ಲವೂ ಸುಸೂತ್ರವಾಗಿ ಮುಗಿದಿದೆ. ನಾನು ಈಗ ಶೃಂಗೇರಿಯಿಂದ ನೇರವಾಗಿ ಬೆಂಗಳೂರಿಗೆ ಹೋಗಿ ಆತನ ಜೊತೆ ಕುಳಿತು ಮಾತನಾಡುತ್ತೇನೆ. ಸೋಮವಾರದ ಒಳಗೆ ಆತ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ನೂರಕ್ಕೆ ನೂರರಷ್ಟು ಖಚಿತ" ಎಂದು ದ್ವಾರಕನಾಥ್ ಗುರೂಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Latest News