Mar 1, 2026 Languages : ಕನ್ನಡ | English

ಧಾರವಾಡದ ಶಾಲೆಯಲ್ಲಿ ಬಯಲಾಯ್ತು ಶಿಕ್ಷಕನ ಅಸಲಿ ಬಣ್ಣ - SSLC ಪೇಪರ್ ಆಮಿಷವೊಡ್ಡಿ 80 ಗ್ರಾಂ ಚಿನ್ನ ದೋಚಿದ ಶಿಕ್ಷಕ!!

ವಿದ್ಯಾದೇಗುಲದ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಗುರುವೇ ಶಿಷ್ಯನಿಗೆ ವಂಚಿಸಿರುವ ಘಟನೆ ಧಾರವಾಡದಲ್ಲಿ ಸಂಚಲನ ಮೂಡಿಸಿದೆ. ಕೆ.ಇ. ಬೋರ್ಡ್ ಆಡಳಿತ ಮಂಡಳಿಯ ವಿದ್ಯಾರಣ್ಯ ಪ್ರೌಢಶಾಲೆಯ ಶಿಕ್ಷಕ ರಾಜಶೇಖರ್ ವಡತೇರ, ಎಸ್ಎಸ್ಎಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಮುಂಚಿತವಾಗಿಯೇ ನೀಡುವುದಾಗಿ ವಿದ್ಯಾರ್ಥಿಯೊಬ್ಬನನ್ನು ನಂಬಿಸಿ, ಅವನಿಂದ ಬರೋಬ್ಬರಿ 80 ಗ್ರಾಂ ಚಿನ್ನದ ಆಭರಣಗಳನ್ನು ಪಡೆದು ವಂಚಿಸಿದ್ದಾನೆ.

ಪರೀಕ್ಷೆಯ ಆಮಿಷಕ್ಕೆ ಚಿನ್ನ ಕಸಿದುಕೊಂಡ ಶಿಕ್ಷಕ – ಪೋಷಕರ ಆಕ್ರೋಶ
ಪರೀಕ್ಷೆಯ ಆಮಿಷಕ್ಕೆ ಚಿನ್ನ ಕಸಿದುಕೊಂಡ ಶಿಕ್ಷಕ – ಪೋಷಕರ ಆಕ್ರೋಶ

ಹತ್ತನೇ ತರಗತಿಯ ವಿದ್ಯಾರ್ಥಿ ಅಭಿಷೇಕ್ ಶಿವಾನಂದ ಕರಕಿ ಎಂಬುವವನಿಗೆ ಪರೀಕ್ಷೆಯಲ್ಲಿ ಪಾಸು ಮಾಡಿಸಿಕೊಡುವ ಆಮಿಷವೊಡ್ಡಿದ ಶಿಕ್ಷಕ ರಾಜಶೇಖರ್, ಅದಕ್ಕಾಗಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಬೆದರಿಸಿದ್ದನು. ಶಿಕ್ಷಕನ ಮಾತನ್ನು ನಂಬಿದ ವಿದ್ಯಾರ್ಥಿಯು ತನ್ನ ಮನೆಯಲ್ಲಿದ್ದ ಸುಮಾರು 5 ತೊಲೆಗೂ ಅಧಿಕ ತೂಕದ ಚಿನ್ನವನ್ನು ಶಿಕ್ಷಕನಿಗೆ ನೀಡಿದ್ದನು. ಆದರೆ ಪರೀಕ್ಷೆಯ ನಂತರ ವಿದ್ಯಾರ್ಥಿ ತನ್ನ ಚಿನ್ನವನ್ನು ಮರಳಿ ಕೇಳಿದಾಗ, ಶಿಕ್ಷಕನು ಅಸಲಿ ಬಣ್ಣವನ್ನು ಬಯಲು ಮಾಡಿದ್ದಾನೆ. ಚಿನ್ನ ವಾಪಸ್ ನೀಡಲು ನಿರಾಕರಿಸಿದ್ದಲ್ಲದೆ, ವಿದ್ಯಾರ್ಥಿಗೆ ಪೂರಕ ಪರೀಕ್ಷೆ ಬರೆಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ವಿದ್ಯಾರ್ಥಿಯ ಆತ್ಮಹತ್ಯೆ ಯತ್ನ ಮತ್ತು ದೂರು

ಮನೆಯವರ ಚಿನ್ನವನ್ನು ಶಿಕ್ಷಕನಿಗೆ ಕೊಟ್ಟು ವಂಚನೆಗೆ ಒಳಗಾದ ನೋವಿನಿಂದ ಮತ್ತು ಮನೆಯವರಿಗೆ ಮುಖ ತೋರಿಸಲು ಸಾಧ್ಯವಾಗದೆ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವಿಷಯ ತಿಳಿದ ಪೋಷಕರು ತಕ್ಷಣವೇ ಶಿಕ್ಷಣ ಇಲಾಖೆಯ ಮೆಟ್ಟಿಲೇರಿದ್ದಾರೆ. ವಿದ್ಯಾರ್ಥಿಯ ತಾಯಿ ಸರೋಜಿನಿ ಅವರು ನೀಡಿದ ದೂರಿನ ಆಧಾರದ ಮೇಲೆ, ಧಾರವಾಡದ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ಈಗ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಶಿಕ್ಷಣ ಇಲಾಖೆಯ ನೋಟಿಸ್

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು ಕೆ.ಇ. ಬೋರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದೆ. ಶಿಕ್ಷಕ ರಾಜಶೇಖರ್ ಅವರ ವರ್ತನೆಯು ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಸದರಿ ಶಿಕ್ಷಕನ ಮೇಲೆ ಕೂಡಲೇ ಆಂತರಿಕ ವಿಚಾರಣೆ ನಡೆಸಿ, ಶಿಸ್ತು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಡಿಡಿಪಿಐ ಆದೇಶಿಸಿದ್ದಾರೆ.

ಮಕ್ಕಳಿಗೆ ಉತ್ತಮ ಹಾದಿ ತೋರಿಸಬೇಕಾದ ಶಿಕ್ಷಕನೇ ಈ ರೀತಿಯ ಕ್ರಿಮಿನಲ್ ಕೃತ್ಯದಲ್ಲಿ ತೊಡಗಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. "ಇಂತಹ ಭ್ರಷ್ಟ ಶಿಕ್ಷಕರಿಂದ ಮಕ್ಕಳ ಭವಿಷ್ಯ ಅಂಧಕಾರಕ್ಕೆ ತಳ್ಳಲ್ಪಡುತ್ತಿದೆ" ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಶಿಕ್ಷಕನನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ, ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕೆಂಬ ಆಗ್ರಹ ಬಲವಾಗಿ ಕೇಳಿಬರುತ್ತಿದೆ.