ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅಫಿಶಿಯಲ್ ಆಗಿ ಪರ್ಮಿಷನ್ ಕೊಟ್ಟಿದ್ದೇ ತಡ, ಕರ್ನಾಟಕದ ರಾಜಕೀಯ ಅಖಾಡದಲ್ಲಿ ಈಗ ದೊಡ್ಡ ಯುದ್ಧವೇ ಶುರುವಾಗಿದೆ. ಬಿಜೆಪಿ ನಾಯಕರು ಮತ್ತು ಹಿಂದೂ ಪರ ಸಂಘಟನೆಗಳು ಈ ನಿರ್ಧಾರದ ವಿರುದ್ಧ ಕೆಂಡಕಾರುತ್ತಿದ್ದಾರೆ. "ಇದು ಶಿಕ್ಷಣಕ್ಕೆ ಕೊಟ್ಟ ಪ್ರೋತ್ಸಾಹ ಅಲ್ಲ, ಮುಸ್ಲಿಂ ಮತಗಳಿಗಾಗಿ ಮಾಡಿದ ಓಲೈಕೆ ರಾಜಕಾರಣ" ಅಂತ ನಾಯಕರು ಕಿಡಿಕಾರಿದ್ದಾರೆ.
1. ಪ್ರಮೋದ್ ಮುತಾಲಿಕ್ ಆಕ್ರೋಶ: "ನಾಳೆ ರಾಜ್ಯಾದ್ಯಂತ ಆದೇಶ ಪ್ರತಿ ಹಳಿದು ಹಾಕ್ತೇವೆ!"
ಹುಬ್ಬಳ್ಳಿಯಲ್ಲಿ ಗುಡುಗಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಸರ್ಕಾರದ ಈ ಅಧಿಸೂಚನೆ ವಿರುದ್ಧ ಬೀದಿಗಿಳಿಯೋದಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಪಿಐಎಲ್ ಪ್ಲಾನ್: "ಈ ಬಗ್ಗೆ ನಾವು ಸುಮ್ಮನೆ ಕೂರಲ್ಲ. ವಕೀಲರ ಜೊತೆ ಚರ್ಚೆ ಮಾಡಿ ಹೈಕೋರ್ಟ್‌ನಲ್ಲಿ ಪಿಐಎಲ್ (PIL) ಹಾಕೋದಕ್ಕೆ ಸಿದ್ಧತೆ ಮಾಡ್ತಿದ್ದೇವೆ," ಅಂದಿದ್ದಾರೆ.
ಇಂದಿರಾ ಗಾಂಧಿಯವರ ರೂಲ್ಸ್ ಏನಾಯ್ತು?: "ಸಮವಸ್ತ್ರ ನಿಯಮ ತಂದಿದ್ದೇ ಇಂದಿರಾ ಗಾಂಧಿಯವರು. ಯಾಕಂದ್ರೆ ಮಕ್ಕಳಲ್ಲಿ ಬಡವ-ಶ್ರೀಮಂತ, ಮೇಲು-ಕೀಳು ಅನ್ನೋ ಭೇದ ಇರಬಾರದು ಅಂತ. ಆದ್ರೆ ಈ ಕಾಂಗ್ರೆಸ್ ಸರ್ಕಾರಕ್ಕೆ ಮಕ್ಕಳಲ್ಲಿ ಒಡಕು ಮೂಡಿಸೋದೇ ಕೆಲಸವಾಗಿದೆ. ಹಿಜಾಬ್ ಹಾಕಿದ್ರೆ ಅವರು ಮುಸ್ಲಿಂ ಅಂತ ಗೊತ್ತಾಗುತ್ತೆ, ಆಗ ಸಮಾನತೆ ಎಲ್ಲಿದೆ?" ಅಂತ ಪ್ರಶ್ನಿಸಿದ್ದಾರೆ.
ಜನಿವಾರ-ಶಿವದಾರದ ಲೆಕ್ಕಾಚಾರ: "ಜನಿವಾರ, ಶಿವದಾರ ಶರ್ಟ್ ಒಳಗಡೆ ಇರುತ್ತೆ, ಅದು ಯಾರಿಗೂ ಕಾಣಿಸೋದಿಲ್ಲ. ಆದ್ರೆ ಹಿಜಾಬ್ ಅನ್ನೋದು ಧರ್ಮದ ಗುರುತು. ಸರ್ಕಾರ ಕಣ್ಣಿಗೆ ಮಣ್ಣು ಹಾಕೋ ಕೆಲಸ ಮಾಡ್ತಿದೆ. ನಾಳೆ ಈ ಆದೇಶದ ಪ್ರತಿಯನ್ನ ಹರಿದು ಹಾಕಿ ಪ್ರತಿಭಟನೆ ಮಾಡ್ತೇವೆ," ಅಂತ ಸವಾಲು ಹಾಕಿದ್ದಾರೆ.
2. ಸಿ.ಟಿ. ರವಿ ಗುಡುಗು: "ತಾಲಿಬಾನಿಗಳು ನಾಳೆ ಬುರ್ಕಾವೇ ಯೂನಿಫಾರಂ ಅಂದ್ರೆ ಒಪ್ತೀರಾ?"
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸಿ.ಟಿ. ರವಿ, ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಮತೀಯ ಚಿಹ್ನೆ ಸಂಸ್ಕೃತಿ ಆಗುತ್ತಾ?: "ಮಕ್ಕಳಲ್ಲಿ ಭೇದಭಾವ ಇರಬಾರದು ಅಂತ 1969ರಲ್ಲೇ ವಸ್ತ್ರಸಂಹಿತೆ ತರಲಾಗಿತ್ತು. ಈಗ ಸರ್ಕಾರ ಮಧ್ಯ ಪ್ರವೇಶಿಸಿ ಮತೀಯ ಚಿಹ್ನೆಗಳಿಗೆ ಅವಕಾಶ ಕೊಡ್ತಿದೆ. ಹಿಜಾಬ್ ಮತೀಯ ಚಿಹ್ನೆಯಾ ಅಥವಾ ಸಂಸ್ಕೃತಿಯಾ? ಸರ್ಕಾರ ಮೊದಲು ಇದನ್ನ ಕ್ಲಿಯರ್ ಮಾಡಲಿ," ಅಂದಿದ್ದಾರೆ.
ಕೇಸರಿ ಮೇಲೆ ದ್ವೇಷ ಯಾಕೆ?: "ಕೇಸರಿ ಧಾರ್ಮಿಕ ಚಿಹ್ನೆ ಅಲ್ಲ ಅಂತ ಹೇಳೋಕೆ ಇವರು ಧಾರ್ಮಿಕ ಪಂಡಿತರಾ? ನಮ್ಮ ಮಠಾಧೀಶರು ಹಾಕೋದೇ ಕೇಸರಿ. ನಾಳೆ ಮಕ್ಕಳು ಶಬರಿಮಲೆ, ದತ್ತಮಾಲೆ ಹಾಕ್ಕೊಂಡು ಬಂದ್ರೆ ಹೊರಗಡೆ ಇಡ್ತೀರಾ? ಹಿಜಾಬ್‌ಗೆ ಅವಕಾಶ ಕೊಟ್ಟು ಕೇಸರಿಗೆ ಕೊಡಲ್ಲ ಅಂದ್ರೆ ನಿಮ್ಮ ದ್ವೇಷ ಎದ್ದು ಕಾಣ್ತಿದೆ," ಅಂತ ವಾಗ್ದಾಳಿ ನಡೆಸಿದ್ದಾರೆ.
ತಾಲಿಬಾನ್ ಕಲ್ಚರ್?: "ಸರ್ಕಾರ ಮತೀಯವಾದಿಗಳ ಒತ್ತಡಕ್ಕೆ ಮಣಿದಿದೆ. ನಾಳೆ ಯಾರಾದ್ರೂ ತಾಲಿಬಾನಿಗಳು ಬಂದು ಬುರ್ಕಾವೇ ನಮ್ಮ ಯೂನಿಫಾರಂ ಅಂದ್ರೆ ಸರ್ಕಾರ ಒಪ್ಪುತ್ತಾ? ಮಕ್ಕಳ ಮನಸ್ಸಲ್ಲಿ ವಿಷ ಬಿಜ ಬಿತ್ತೋದನ್ನ ನಿಲ್ಲಿಸಿ," ಅಂತ ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ @Siddaramaiah ನೇತೃತ್ವದ @INCKarnataka ಸರ್ಕಾರ ಅಲ್ಪಸಂಖ್ಯಾತ ಓಲೈಕೆ ಮತ್ತು ಹಿಂದೂ ವಿರೋಧಿ ಕ್ರಮವೇ ತನ್ನ ಧ್ಯೇಯ ಎಂದು ಭಾವಿಸಿದಂತಿದೆ. ದಾವಣಗೆರೆ ಉಪಚುನಾವಣೆಯ ವೇಳೆ ಉಂಟಾದ ಮುಸ್ಲಿಮರ ಕಾಂಗ್ರೆಸ್ ವಿರೋಧಿ ಆಕ್ರೋಶವನ್ನು ತಗ್ಗಿಸಲು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಶಾಲಾ ಕಾಲೇಜುಗಳ ಹಿಜಾಬ್ ನಿಷೇಧವನ್ನು…
— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) May 13, 2026
3. ಮಾಜಿ ಸಚಿವ ಸುನಿಲ್ ಕುಮಾರ್ ಅಟ್ಯಾಕ್: "ಇದು ಸುಪ್ರೀಂ ಕೋರ್ಟ್‌ಗೆ ಮಾಡಿದ ಅವಮಾನ"
ಉಡುಪಿಯ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ಟ್ವೀಟ್ ಮೂಲಕ ಸರ್ಕಾರದ 'ಮುಸ್ಲಿಂ ಓಲೈಕೆ' ನೀತಿಯನ್ನು ಬೆತ್ತಲೆ ಮಾಡಿದ್ದಾರೆ.
ನ್ಯಾಯಾಂಗ ನಿಂದನೆ: "ಹಿಜಾಬ್ ವಿಚಾರ ಇನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವಾಗಲೇ ಸರ್ಕಾರ ಆದೇಶ ವಾಪಸ್ ಪಡೆದಿರೋದು ಸಂವಿಧಾನ ವಿರೋಧಿ ಮತ್ತು ನ್ಯಾಯಾಂಗ ನಿಂದನೆ," ಅಂತ ಆರೋಪಿಸಿದ್ದಾರೆ.
ಮತ ಬ್ಯಾಂಕ್ ಪಾಲಿಟಿಕ್ಸ್: "ದಾವಣಗೆರೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಸರಿಯಾದ ಏಟು ಕೊಟ್ಟಿದೆ. ಆ ನೋವನ್ನ ಮರೆಯೋಕೆ ಈಗ ಸಿದ್ದರಾಮಯ್ಯ ಸರ್ಕಾರ ಒಂದಾದ ಮೇಲೊಂದರಂತೆ ಮುಸ್ಲಿಂ ತುಷ್ಟೀಕರಣ ಮಾಡ್ತಿದೆ. ಮೊನ್ನೆ ಮುಸ್ಲಿಂ ಕಾಲೋನಿಗಳಿಗೆ ಕೋಟ್ಯಂತರ ಹಣ ಕೊಟ್ರು, ಈಗ ಹಿಜಾಬ್‌ಗೆ ಅವಕಾಶ ಕೊಟ್ಟಿದ್ದಾರೆ," ಅಂತ ಕಾಲೆಳೆದಿದ್ದಾರೆ.
ಸಾಮರಸ್ಯದ ಕೊಲೆ: ಕಾಂಗ್ರೆಸ್ ಸರ್ಕಾರಕ್ಕೆ ಶೈಕ್ಷಣಿಕ ಧೋರಣೆ ಅನ್ನೋದೇ ಇಲ್ಲ. ಮತ ಬ್ಯಾಂಕ್‌ಗಾಗಿ ದೇಶದ ಸಮಗ್ರತೆಯನ್ನೇ ಒತ್ತೆ ಇಡ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಏನಾಯ್ತು ಅನ್ನೋದನ್ನ ಮರೆಯಬೇಡಿ ಅಂತ ಸಖತ್ ವಾರ್ನಿಂಗ್ ಕೊಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಮುಸ್ಲಿಂ ಓಲೈಕೆ ನೀತಿಯನ್ನು ಬಹಿರಂಗವಾಗಿ ಪ್ರಕಟಗೊಳಿಸಿದೆ. 2022ರಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೆ ತಂದಿತ್ತು. ಈ ವಿಚಾರ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇರುವ ಸಂದರ್ಭದಲ್ಲೇ ಸರ್ಕಾರ…
— Sunil Kumar Karkala (@karkalasunil) May 14, 2026
4. ಯಶ್‌ಪಾಲ್ ಸುವರ್ಣ ಕೆಂಡ: "ಕೋರ್ಟ್ ತೀರ್ಪು ಗಾಳಿಗೆ ತೂರಿದ ಸರ್ಕಾರ"
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಕೂಡ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, "ಹಿಜಾಬ್ ವಿವಾದದಿಂದ ಶಿಕ್ಷಣ ಕ್ಷೇತ್ರದಲ್ಲಿ ಮತ್ತೆ ಗೊಂದಲ ಶುರುವಾಗುತ್ತೆ. ಇದು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ತೀರ್ಮಾನ. ಕೂಡಲೇ ಇದನ್ನ ವಾಪಸ್ ಪಡೆಯಬೇಕು," ಅಂತ ಆಗ್ರಹಿಸಿದ್ದಾರೆ.
ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆಯುವ ಮೂಲಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಇಸ್ಲಾಮೀಕರಣಗೊಳಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
— Yashpal Anand Suvarna (@YashpalBJP) May 13, 2026
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಜಾತಿ ಮತ ಬಡವ ಶ್ರೀಮಂತ ಎಂಬ ತಾರತಮ್ಯ ಹೋಗಲಾಡಿಸುವ… pic.twitter.com/ZEU06ipYVK
ಒಂದು ಕಡೆ ಸರ್ಕಾರ "ಬಡ ಮಕ್ಕಳ ಶಿಕ್ಷಣದ ಹಕ್ಕು" ಅಂತ ಹೇಳ್ತಿದ್ರೆ, ಇನ್ನೊಂದೆಡೆ ಇಡೀ ಕೇಸರಿ ಪಡೆ "ಇದು ದೇಶ ಒಡೆಯೋ ಕೆಲಸ" ಅಂತ ಬೀದಿಗಿಳಿದಿದೆ. ಒಟ್ಟಿನಲ್ಲಿ, ಶಾಲೆಗಳಲ್ಲಿ ಸಮವಸ್ತ್ರ ಇರಬೇಕಾ ಅಥವಾ ಧಾರ್ಮಿಕ ಗುರುತುಗಳು ಇರಬೇಕಾ ಅನ್ನೋ ಈ ಹಳೆ ವಿವಾದ ಈಗ ಮತ್ತೆ ಹೊಸ ರೂಪ ಪಡೆದಿದೆ.
ನಾಳೆ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆಯಲಿರೋ ಪ್ರತಿಭಟನೆ ಮತ್ತು ಮುಂದಿನ ದಿನಗಳಲ್ಲಿ ಬಿಜೆಪಿ ಮಾಡಲಿರೋ ಹೋರಾಟ ರಾಜ್ಯದಲ್ಲಿ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ಕಾದು ನೋಡಬೇಕು.