ಸಿ.ಜೆ. ರಾಯ್ ಜೀವಹಾನಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ರಾಯ್ ಅವರ ಡೈರಿಯಲ್ಲಿ ಅಂತದ್ದೇನಿತ್ತು?

ಬೆಂಗಳೂರು ಉದ್ಯಮಿ ಸಿ.ಜೆ. ರಾಯ್ ಆತ್ಮ*ತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ ಎಂದು ತಿಳಿದುಬಂದಿದೆ. ಅವರ ಕಚೇರಿಯಲ್ಲಿ ಪತ್ತೆಯಾದ ಡೈರಿಯೊಂದು ಈಗ ತನಿಖಾಧಿಕಾರಿಗಳ ಕೈಯಲ್ಲಿ ಇದೆ ಎನ್ನಲಾಗುತ್ತಿದೆ. ಈ ಡೈರಿಯಲ್ಲಿ ಹಲವು ನಟಿಯರು, ಮಾಡೆಲ್‌ಗಳು ಹಾಗೂ ರಾಜಕಾರಣಿಗಳ ಹೆಸರು ಉಲ್ಲೇಖವಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಹುಟ್ಟಿಸಿದೆ.

ಸಿ.ಜೆ. ರಾಯ್ ಡೈರಿಯಲ್ಲಿ ಉಲ್ಲೇಖ
ಸಿ.ಜೆ. ರಾಯ್ ಡೈರಿಯಲ್ಲಿ ಉಲ್ಲೇಖ

ಡೈರಿಯ ಪತ್ತೆ

ಶುಕ್ರವಾರ ರಾತ್ರಿ ಪೊಲೀಸರು ಸಿ.ಜೆ. ರಾಯ್ ಅವರ ಕಚೇರಿಯಿಂದ ಡೈರಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಉದ್ಯಮಿ ತಮ್ಮ ಕಂಪನಿಯ ಕಾರ್ಯಕ್ರಮಗಳಿಗೆ ಪ್ರಮುಖರನ್ನು ಆಹ್ವಾನಿಸುತ್ತಿದ್ದರು. ಆದರೆ ಡೈರಿಯಲ್ಲಿ ಕೆಲವರ ಹೆಸರುಗಳನ್ನು ಏಕೆ ಬರೆದಿದ್ದರು? ಬರೀ ಈವೆಂಟ್ ವಿಚಾರಕ್ಕೆ ಮಾತ್ರವಾ ಅಥವಾ ಬೇರೆ ಕಾರಣವಿದೆಯಾ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆತ್ಮ*ತ್ಯೆಯ ಅನುಮಾನ

ಐಟಿ ಅಧಿಕಾರಿಗಳ ದಾಳಿ ಸಂದರ್ಭದಲ್ಲೇ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಆತ್ಮ*ತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವ್ಯಾಪಾರದಲ್ಲಿ ಯಾವುದೇ ತೊಂದರೆ ಇರಲಿಲ್ಲ, ಸಾಲಬಾಧೆಯೂ ಇರಲಿಲ್ಲ. ಆದರೆ ಐಟಿ ಅಧಿಕಾರಿಗಳ ಕಿರುಕುಳವಿತ್ತು ಎಂದು ಅವರ ಸಹೋದರ ಬಾಬು ಸಿ. ಜೋಸೆಫ್ ಹೇಳಿದ್ದಾರೆ. ಜನವರಿ 27ರಂದು ದುಬೈಯಿಂದ ಬೆಂಗಳೂರಿಗೆ ಬಂದಿದ್ದ ಅವರು ಮರುದಿನ ಐಟಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಮೂರು ದಿನಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿತ್ತು. ಆದರೆ ದಿಢೀರ್ ಆತ್ಮ*ತ್ಯೆ ಎಲ್ಲರನ್ನೂ ಆಘಾತಗೊಳಿಸಿದೆ.

ಹೂಡಿಕೆ ಮತ್ತು ಒತ್ತಡ

ಕಾನ್ಫಿಡೆಂಟ್ ಗ್ರೂಪ್‌ನಲ್ಲಿ ಹಲವು ರಾಜಕಾರಣಿಗಳು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ರಿಯಲ್ ಎಸ್ಟೇಟ್ ನಿರೀಕ್ಷಿತ ಲಾಭ ತರಲಿಲ್ಲ. ಇದರಿಂದ ಬೇರೆ ವ್ಯವಹಾರ ಮಾಡಲು ಚಿಂತನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಹೂಡಿಕೆ ಮಾಡಿದ್ದ ರಾಜಕಾರಣಿಗಳು ತಮ್ಮ ಪಾಲಿನ ಹಣ ವಾಪಸ್ ಕೊಡುವಂತೆ ಒತ್ತಡ ಹಾಕಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ತನಿಖೆಯ ಮುಂದಿನ ಹಂತ

ಸಿ.ಜೆ. ರಾಯ್ ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಮೂರು ತಿಂಗಳ ಕಾಲ್ ಡಿಟೇಲ್ಸ್ ಪಡೆಯಲು ಮುಂದಾಗಿದ್ದಾರೆ. ಕೋರ್ಟ್ ಅನುಮತಿ ಪಡೆದು ಅವರ ಮೊಬೈಲ್ ಅನ್ನು ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸುವ ಯೋಜನೆ ಇದೆ. ಐಟಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಕುಟುಂಬದವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಡೈರಿಯಲ್ಲಿ ಉಲ್ಲೇಖವಾದ ಹೆಸರುಗಳು, ರಾಜಕಾರಣಿಗಳ ಹೂಡಿಕೆ, ಐಟಿ ಇಲಾಖೆಯ ಕಿರುಕುಳ – ಎಲ್ಲವೂ ಸೇರಿ ಸಿ.ಜೆ. ರಾಯ್ ಆತ್ಮ*ತ್ಯೆ ಪ್ರಕರಣಕ್ಕೆ ಗಂಭೀರ ತಿರುವು ನೀಡಿವೆ. ಮುಂದಿನ ದಿನಗಳಲ್ಲಿ ತನಿಖೆ ಯಾವ ದಿಕ್ಕು ತಾಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 

Latest News