Mar 14, 2026 Languages : ಕನ್ನಡ | English

ಬೆಂಗಳೂರಿನಲ್ಲಿ ಘೋರ ದುರಂತ - ಟಿಪ್ಪರ್ ಲಾರಿಗೆ ಬಲಿಯಾದ ವೈದ್ಯಕೀಯ ವಿದ್ಯಾರ್ಥಿನಿ!! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ;

ನಮ್ಮ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ವಾಹನಗಳ ಅಬ್ಬರ ಹೆಚ್ಚಾಗುತ್ತಿದೆ. ಅದರಲ್ಲೂ ಅತಿ ವೇಗವಾಗಿ ಚಲಿಸುವ ಟಿಪ್ಪರ್ ಲಾರಿಗಳು ಅಮಾಯಕರ ಪ್ರಾಣಕ್ಕೆ ಕಂಟಕವಾಗುತ್ತಿವೆ. ಇಂತಹದ್ದೇ ಒಂದು ಮನಕಲಕುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಮುಂಭಾಗದಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಭವಿಷ್ಯದ ವೈದ್ಯೆಯಾಗಬೇಕಿದ್ದ ಕೃತಿಕಾ (21) ಎಂಬ ಯುವತಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಬೆಂಗಳೂರು ಟಿಪ್ಪರ್ ಲಾರಿ ಅಪಘಾತ!!
ಬೆಂಗಳೂರು ಟಿಪ್ಪರ್ ಲಾರಿ ಅಪಘಾತ!!

ಕೃತಿಕಾ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದಳು. ಎಂದಿನಂತೆ ನಿನ್ನೆ ಸಂಜೆ 4.15ರ ಸುಮಾರಿಗೆ ಕಾಲೇಜು ಮುಗಿಸಿ ತನ್ನ ಸ್ನೇಹಿತೆ ಹಂಸ ಎಂಬಾಕೆಯ ಜೊತೆಗೆ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ತೆರಳುತ್ತಿದ್ದಳು. ಹಂಸ ಸ್ಕೂಟರ್ ಚಲಾಯಿಸುತ್ತಿದ್ದರೆ, ಕೃತಿಕಾ ಹಿಂಬದಿ ಕುಳಿತಿದ್ದಳು. ಈ ಸಂದರ್ಭದಲ್ಲಿ ಪಕ್ಕದಲ್ಲೇ ವೇಗವಾಗಿ ಚಲಿಸುತ್ತಿದ್ದ ಟಿಪ್ಪರ್ ಲಾರಿಗೆ ಇವರ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ.

ವಾಹನ ಸ್ಕಿಡ್ ಆದಾಗ ಚಾಲಕಿ ಹಂಸ ಎಡಭಾಗಕ್ಕೆ ಬಿದ್ದಿದ್ದಾಳೆ. ಆದರೆ ಕೃತಿಕಾ ದುರದೃಷ್ಟವಶಾತ್ ಬಲಭಾಗಕ್ಕೆ ಅಂದರೆ ಚಲಿಸುತ್ತಿದ್ದ ಟಿಪ್ಪರ್ ಲಾರಿಯ ಚಕ್ರಗಳ ಕೆಳಕ್ಕೆ ಬಿದ್ದಿದ್ದಾಳೆ. ಟಿಪ್ಪರ್ ಲಾರಿಯ ಭಾರೀ ಗಾತ್ರದ ಚಕ್ರಗಳು ಕೃತಿಕಾ ದೇಹದ ಮೇಲೆ ಹರಿದ ಪರಿಣಾಮ, ಆಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಕಣ್ಣೆದುರೇ ಸಹಪಾಠಿ ಪ್ರಾಣ ಕಳೆದುಕೊಂಡಿದ್ದನ್ನು ಕಂಡು ಕಾಲೇಜಿನ ಇತರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಆಘಾತಕ್ಕೊಳಗಾಗಿದ್ದಾರೆ. ಈ ಅಪಘಾತದಲ್ಲಿ ಹಂಸ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅದೇ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕೃತಿಕಾ ಓರ್ವ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಇನ್ನೂ ಒಂದು ವರ್ಷ ಕಳೆದಿದ್ದರೆ ಆಕೆ ಡಾಕ್ಟರ್ ಆಗಿ ಹೊರಹೊಮ್ಮುತ್ತಿದ್ದಳು. ಮಗಳನ್ನ ವೈದ್ಯೆಯನ್ನಾಗಿ ನೋಡಬೇಕು ಎಂಬ ಪೋಷಕರ ಕನಸು ಈಗ ನುಚ್ಚುನೂರಾಗಿದೆ. ಕಾಲೇಜು ಮುಗಿಸಿ ಮನೆಗೆ ಬರಬೇಕಿದ್ದ ಮಗಳು ಶ*ವವಾಗಿ ಮರಳುತ್ತಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕಾಲೇಜಿನ ಆವರಣದಲ್ಲಿ ಈಗ ಶೋಕ ಸಾಗರ ಆವರಿಸಿದ್ದು, ಸಹಪಾಠಿಗಳು ಕಣ್ಣೀರು ಹಾಕುತ್ತಿದ್ದಾರೆ.

ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿಪ್ಪರ್ ಲಾರಿ ಮತ್ತು ಸ್ಕೂಟರ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಯುತ್ತಿದೆ. ಬೆಂಗಳೂರಿನಂತಹ ಜನನಿಬಿಡ ಪ್ರದೇಶಗಳಲ್ಲಿ, ವಿಶೇಷವಾಗಿ ಶಾಲಾ ಕಾಲೇಜುಗಳ ಮುಂಭಾಗದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ರಸ್ತೆಯಲ್ಲಿ ಸಂಚರಿಸುವಾಗ ದ್ವಿಚಕ್ರ ವಾಹನ ಸವಾರರು ಭಾರೀ ವಾಹನಗಳಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಣ್ಣ ಅಜಾಗರೂಕತೆಯೂ ದೊಡ್ಡ ಮಟ್ಟದ ಅನಾಹುತಕ್ಕೆ ಕಾರಣವಾಗಬಹುದು. ಭವಿಷ್ಯದ ಕನಸುಗಳನ್ನು ಹೊತ್ತಿದ್ದ ಕೃತಿಕಾಳ ಸಾವು ನಮಗೆ ರಸ್ತೆ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಎಚ್ಚರಿಸುತ್ತಿದೆ.

Latest News