Jan 25, 2026 Languages : ಕನ್ನಡ | English

ಹುಬ್ಬಳ್ಳಿ ಮರ್ಯಾದೆ ಜೀವಹರಣದ ನಂತರ ಬೆಚ್ಚಿ ಬಿದ್ದ ಪ್ರೇಮಿಗಳು - ಚಿತ್ರದುರ್ಗದಲ್ಲಿ ಪ್ರೇಮಿಗಳ ಅಳಲು

ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಜೀವಹರಣದ ಘಟನೆ ರಾಜ್ಯದಾದ್ಯಂತ ಭಯದ ವಾತಾವರಣವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲೇ ಚಿತ್ರದುರ್ಗದಲ್ಲಿ ಪ್ರೀತಿಸುತ್ತಿರುವ ಯುವ ಜೋಡಿ, ತಮ್ಮ ಜೀವ ಭದ್ರತೆಗಾಗಿ ಎಸ್ಪಿ ಕಚೇರಿಗೆ ಧಾವಿಸಿ ರಕ್ಷಣೆ ಕೋರಿ ಮನವಿ ಸಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮದುವೆಗೆ ಮುನ್ನವೇ ಪೊಲೀಸ್ ರಕ್ಷಣೆ ಕೇಳಿದ ಪ್ರೇಮಿಗಳು
ಮದುವೆಗೆ ಮುನ್ನವೇ ಪೊಲೀಸ್ ರಕ್ಷಣೆ ಕೇಳಿದ ಪ್ರೇಮಿಗಳು

ಚಿತ್ರದುರ್ಗದ ಆಟೋ ಚಾಲಕ ಮನೋಹರ್ ಮತ್ತು ಪರಶುರಾಮಪುರ ಮೂಲದ ಬಿ ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ದಿವ್ಯ, ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಆದರೆ ದಿವ್ಯ ಅವರ ಮನೆಯವರು ಈ ಸಂಬಂಧವನ್ನು ಒಪ್ಪಿಕೊಳ್ಳದೆ, ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿ ಕಾರಣದಿಂದಾಗಿ ಯುವತಿಯ ಪೋಷಕರು ಪ್ರೇಮ ಸಂಬಂಧವನ್ನು ವಿರೋಧಿಸುತ್ತಿದ್ದು, ಜೀವಹರಣ ಬೆದರಿಕೆ ನೀಡಿರುವ ಆರೋಪವೂ ಕೇಳಿಬಂದಿದೆ.

ಈ ಬೆದರಿಕೆಯಿಂದ ಆತಂಕಗೊಂಡ ಪ್ರೇಮಿಗಳು, ಮದುವೆಗೂ ಮುನ್ನವೇ ಚಿತ್ರದುರ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಅವರನ್ನು ಭೇಟಿ ಮಾಡಿ, “ನಾವು ಮದುವೆ ಆಗುತ್ತೇವೆ, ದಯವಿಟ್ಟು ನಮ್ಮನ್ನು ರಕ್ಷಿಸಿ” ಎಂದು ಮನವಿ ಮಾಡಿದ್ದಾರೆ. SP ಕಚೇರಿಯ ಮೆಟ್ಡಿಲು ಹತ್ತಿ ಪ್ರೇಮಿಗಳು ತಮ್ಮ ಅಳಲನ್ನು ಹಂಚಿಕೊಂಡಿದ್ದು, ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

ಪ್ರೇಮಿಗಳು ತಮ್ಮ ಸಂಬಂಧವನ್ನು ಕಾನೂನುಬದ್ಧವಾಗಿ ಮುಂದುವರಿಸಲು ನಿರ್ಧರಿಸಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸ್ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದಾರೆ. SP ರಂಜಿತ್ ಕುಮಾರ್ ಅವರು ಪ್ರೇಮಿಗಳ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಘಟನೆ ರಾಜ್ಯದಲ್ಲಿ ಜಾತಿ ಆಧಾರಿತ ವಿರೋಧ ಮತ್ತು ಪ್ರೇಮ ಸಂಬಂಧಗಳ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳ ನಡುವೆ ಹೊಸ ಬೆಳಕು ಚೆಲ್ಲುತ್ತಿದೆ. ಪ್ರೇಮಿಗಳು ತಮ್ಮ ಭದ್ರತೆಗೆ ಕಾನೂನು ರಕ್ಷಣೆ ಕೋರುತ್ತಿರುವುದು, ಸಮಾಜದಲ್ಲಿ ಪ್ರೀತಿಯ ಹಕ್ಕು ಮತ್ತು ವ್ಯಕ್ತಿಗತ ಸ್ವಾತಂತ್ರ್ಯದ ಬಗ್ಗೆ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. 

Latest News