ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಬಿಗ್ ವೆಲ್ಕಮ್ - ಗುಲಾಬಿ ಹೂವು, ಸಿಹಿ ನೀಡಿ ಹುರಿದುಂಬಿಸಿದ ಶಾಸಕರು!!

ಬೇಸಿಗೆ ರಜೆ ಮುಗಿಸಿ ಇಂದಿನಿಂದ (ಜೂನ್ 1) ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಹೊಸ ಉತ್ಸಾಹದೊಂದಿಗೆ ಪುನರಾರಂಭಗೊಂಡಿವೆ. ಇಷ್ಟು ದಿನಗಳ ಕಾಲ ರಜೆಯ ಮೂಡ್‌ನಲ್ಲಿದ್ದ ಮಕ್ಕಳು ಕೈಯಲ್ಲಿ ಹೊಸ ಪುಸ್ತಕ, ಹೆಗಲಿಗೆ ಬ್ಯಾಗ್ ತಗೊಂಡು ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನಲ್ಲೂ ಇವತ್ತು ಶಾಲಾ ಆರಂಭದ ದಿನ ಭಾರಿ ಸಂಭ್ರಮ ಸೃಷ್ಟಿಸಿತ್ತು.

ಕೈಯಲ್ಲಿ ಗುಲಾಬಿ ಹೂವು, ಬಾಯಿಗೆ ಸಿಹಿ ನೀಡಿ ಬರಮಾಡಿಕೊಂಡ ಜನಪ್ರತಿನಿಧಿಗಳು
ಕೈಯಲ್ಲಿ ಗುಲಾಬಿ ಹೂವು, ಬಾಯಿಗೆ ಸಿಹಿ ನೀಡಿ ಬರಮಾಡಿಕೊಂಡ ಜನಪ್ರತಿನಿಧಿಗಳು

ಶಾಲೆಗೆ ಬಂದ ಪುಟ್ಟ ಪುಟ್ಟ ಮಕ್ಕಳಿಗೆ ಮೊದಲ ದಿನವೇ ಯಾವುದೇ ಭಯ ಆಗಬಾರದು, ಓದುವ ಹುಮ್ಮಸ್ಸು ಹೆಚ್ಚಾಗಬೇಕು ಅನ್ನೋ ಕಾರಣಕ್ಕೆ ಚಿಕ್ಕಮಗಳೂರಿನ ನಗರದ ಬಸವನಹಳ್ಳಿಯ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಜನಪ್ರತಿನಿಧಿಗಳೇ ಖುದ್ದಾಗಿ ನಿಂತು ಅದ್ಧೂರಿ ಸ್ವಾಗತ ಕೋರಿದ್ದಾರೆ.

ಮಕ್ಕಳ ಕೈಗೆ ಗುಲಾಬಿ ಹೂವು, ಬಾಯಿಗೆ ಸಿಹಿ!

ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಇವತ್ತು ಬೆಳ್ಳಂಬೆಳಗ್ಗೆ ಬಸವನಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಶಾಲೆಗೆ ಬಂದ ಪ್ರತಿಯೊಬ್ಬ ಮಗುವಿಗೂ ಗುಲಾಬಿ ಹೂವು ನೀಡಿ, ಮುದ್ದಾಗಿ ನಗುತ್ತಾ ವೆಲ್ಕಮ್ ಮಾಡಿದರು.

ಅಷ್ಟೇ ಅಲ್ಲದೆ, ಹೊಸ ತರಗತಿಗಳಿಗೆ ಕಾಲಿಡುತ್ತಿರುವ ಮಕ್ಕಳಿಗೆ ಶಾಸಕರು ಮತ್ತು ಎಂಎಲ್‌ಸಿ ಭೋಜೇಗೌಡರು ಸ್ವತಃ ಸಿಹಿ (ಪೆಡಾ) ತಿನ್ನಿಸಿ ಶುಭ ಹಾರೈಸಿದರು. ಮೊದಲ ದಿನವೇ ಶಾಸಕರಿಂದ ಇಂತಹದೊಂದು ಪ್ರೀತಿಯ ಸ್ವಾಗತ ಸಿಗುತ್ತದೆ ಎಂದು ಮಕ್ಕಳು ಅಂದುಕೊಂಡಿರಲಿಲ್ಲ. ಜನಪ್ರತಿನಿಧಿಗಳ ಈ ಪ್ರೀತಿಯ ನಡೆ ಕಂಡು ಶಾಲಾ ಮಕ್ಕಳು ಮತ್ತು ಪೋಷಕರು ಫುಲ್ ಖುಷಿಯಾಗಿದ್ದಾರೆ.

ಧೈರ್ಯ ತುಂಬಿದ ಶಾಸಕ ಎಚ್.ಡಿ. ತಮ್ಮಯ್ಯ

ಸಿಹಿ ಹಂಚಿದ ಬಳಿಕ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಶಾಸಕ ಎಚ್.ಡಿ. ತಮ್ಮಯ್ಯ, ಮಕ್ಕಳಿಗೆ ಓದುವ ಬಗ್ಗೆ ಧೈರ್ಯ ತುಂಬಿದರು. "ಯಾರೂ ಕೂಡ ಓದನ್ನು ಕಷ್ಟ ಎಂದು ಅಂದುಕೊಳ್ಳಬಾರದು. ಇಂದಿನಿಂದಲೇ ಶ್ರದ್ಧೆಯಿಂದ ಓದಬೇಕು" ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

"ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಶಾಲೆಯಲ್ಲಿ ಮೂಲಸೌಕರ್ಯ ಇರಲಿ, ಶಿಕ್ಷಕರ ಕೊರತೆ ಇರಲಿ, ಯಾವುದೇ ಕುಂದುಕೊರತೆಗಳು ಆಗದಂತೆ ನಾವು ನೋಡಿಕೊಳ್ಳುತ್ತೇವೆ" ಎಂದು ಶಾಸಕರು ಇದೇ ವೇಳೆ ಪೋಷಕರಿಗೆ ಹಾಗೂ ಶಾಲಾ ಸಿಬ್ಬಂದಿಗೆ ಭರವಸೆ ನೀಡಿದರು.

ಸರ್ಕಾರಿ ಶಾಲೆಗೆ ಹೊಸ ಕಳೆ!

ಸಾಮಾನ್ಯವಾಗಿ ಖಾಸಗಿ ಶಾಲೆಗಳಲ್ಲಿ ಮಾತ್ರ ಇಂತಹ ಅದ್ಧೂರಿ ಸ್ವಾಗತ ಇರುತ್ತದೆ ಎನ್ನುವ ಕಾಲ ಇತ್ತು. ಆದರೆ ಬಸವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಇವತ್ತು ನಡೆದ ಈ ಕಾರ್ಯಕ್ರಮ ಇಡೀ ಜಿಲ್ಲೆಯಲ್ಲೇ ಸಖತ್ ಗಮನ ಸೆಳೆದಿದೆ. ಶಾಲೆಯ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಿಕ್ಷಕರು ಕೂಡ ಹೊಸದಾಗಿ ಬಂದ ಮಕ್ಕಳಿಗೆ ಪ್ರೀತಿಯಿಂದ ಸ್ವಾಗತ ಕೋರಿದರು.

ಸಿಹಿ ಸವಿದು, ಕೈಯಲ್ಲಿ ಗುಲಾಬಿ ಹೂ ಹಿಡಿದು ಹೊಸ ತರಗತಿಯೊಳಗೆ ಕೂತ ಚಿಕ್ಕಮಗಳೂರಿನ ಸರ್ಕಾರಿ ಶಾಲಾ ಮಕ್ಕಳ ಮುಖದಲ್ಲಿ ಇವತ್ತು ನಗು ಎದ್ದು ಕಾಣುತ್ತಿತ್ತು. ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಲ್ಲೂ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Latest News