ಚಿಕ್ಕಮಗಳೂರಿನಲ್ಲಿ ಭೀಕರ ಅಪಘಾತ - ಕಾಫಿ ತೋಟಕ್ಕೆ ನುಗ್ಗಿದ ಫಾರ್ಚುನರ್!!

ಚಿಕ್ಕಮಗಳೂರು: ಪ್ರಕೃತಿ ಸೌಂದರ್ಯ ಸವಿಯಲು ಅಂತ ಬೆಂಗಳೂರಿನಿಂದ ಕಾಫಿ ನಾಡು ಚಿಕ್ಕಮಗಳೂರಿಗೆ ಬಂದಿದ್ದ ಪ್ರವಾಸಿಗರ ತಂಡವೊಂದು ಧಾರುಣ ಆಕ್ಸಿಡೆಂಟ್‌ನಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಕೈಮರ ಚೆಕ್‌ಪೋಸ್ಟ್ ಸಮೀಪ ಮುಂಜಾನೆ ವೇಳೆ ಸಿನಿಮೀಯ ಶೈಲಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬೃಹತ್ ಫಾರ್ಚುನರ್ ಕಾರೊಂದು ಮುಖ್ಯ ರಸ್ತೆಯಿಂದ ನುಗ್ಗಿ, ಪಕ್ಕದಲ್ಲೇ ಇದ್ದ ಆಳವಾದ ಕಾಫಿ ತೋಟದೊಳಗೆ ಉರುಳಿ ಬಿದ್ದಿದೆ.

ನಜ್ಜುಗುಜ್ಜಾದ ಕಾರು, ಆದ್ರೂ ಯಾರಿಗೂ ಗಾಯವಾಗಿಲ್ಲ
ನಜ್ಜುಗುಜ್ಜಾದ ಕಾರು, ಆದ್ರೂ ಯಾರಿಗೂ ಗಾಯವಾಗಿಲ್ಲ

ಕಾರು ತೋಟದೊಳಗೆ ಬಿದ್ದ ರಭಸಕ್ಕೆ ಸಂಪೂರ್ಣವಾಗಿ ಜಖಂಗೊಂಡಿದ್ದರೂ, ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲಾ ಆರು ಮಂದಿ ಪ್ರವಾಸಿಗರು ಯಾವುದೇ ದೊಡ್ಡ ಪ್ರಾಣಾಪಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.

ಮುಳ್ಳಯ್ಯನಗಿರಿ ಪ್ರವಾಸ ಮುಗಿಸಿ ವಾಪಸ್ ಬರುವಾಗ ಕಾದಿತ್ತಾ ಗಂಡಾಂತರ?

ವೀಕೆಂಡ್ ಮೂಡ್‌ನಲ್ಲಿದ್ದ ಬೆಂಗಳೂರಿನ ಈ ಪ್ರವಾಸಿಗರ ತಂಡ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಭೇಟಿ ನೀಡಿತ್ತು. ಮುಂಜಾನೆ ಹೊತ್ತಿನ ಮುಳ್ಳಯ್ಯನಗಿರಿಯ ಭವ್ಯ ನೋಟ ಹಾಗೂ ತಣ್ಣನೆಯ ಹವಾಮಾನವನ್ನು ಆನಂದಿಸಿ, ಬೆಟ್ಟದ ಮೇಲಿಂದ ಕಾರಿನಲ್ಲಿ ಕೆಳಗೆ ಇಳಿದು ಬೆಂಗಳೂರಿಗೆ ವಾಪಸ್ ಪ್ರಯಾಣ ಬೆಳೆಸುತ್ತಿದ್ದರು. ಆದರೆ, ಕೈಮರ ಚೆಕ್‌ಪೋಸ್ಟ್ ಸಮೀಪ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬಿಟ್ಟು ನೇರವಾಗಿ ತಗ್ಗಿನಲ್ಲಿದ್ದ ಕಾಫಿ ತೋಟಕ್ಕೆ ನುಗ್ಗಿದೆ.

ಮುಂಜಾನೆ ವೇಳೆ ಮಂಜು ಮುಸುಕಿದ ವಾತಾವರಣ ಇದ್ದಿದ್ದರಿಂದ ಅಥವಾ ತಿರುವಿನಲ್ಲಿ ಚಾಲಕನಿಗೆ ರಸ್ತೆ ಸರಿಯಾಗಿ ಅಂದಾಜಿಗೆ ಸಿಗದೇ ಇದ್ದಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ರಸ್ತೆಯಿಂದ ಸುಮಾರು ಹಲವು ಅಡಿ ಕೆಳಗಿದ್ದ ತೋಟಕ್ಕೆ ಕಾರು ಉರುಳುತ್ತಿದ್ದಂತೆ ಒಳಗಿದ್ದವರು ಜೋರಾಗಿ ಕಿರುಚಾಡಿದ್ದಾರೆ. ಮರದ ರೆಂಬೆ-ಕೊಂಬೆಗಳಿಗೆ ಬಡಿದು ಕಾರು ತೋಟದ ಮಧ್ಯೆ ನಿಂತಿದೆ.

ದೇವರೆಂತೆ ಧಾವಿಸಿ ಬಂದ ‘ಪ್ರವಾಸಿ ಮಿತ್ರ’ ಸಿಬ್ಬಂದಿ!

ಕಾರು ತೋಟಕ್ಕೆ ಬೀಳುತ್ತಿದ್ದಂತೆ ಜೋರಾದ ಶಬ್ದ ಕೇಳಿ ಆ ಭಾಗದಲ್ಲೇ ಡ್ಯೂಟಿಯಲ್ಲಿದ್ದ 'ಪ್ರವಾಸಿ ಮಿತ್ರ' ಸಿಬ್ಬಂದಿಗಳು ಮತ್ತು ಸ್ಥಳೀಯರು ತಕ್ಷಣವೇ ಆಕ್ಸಿಡೆಂಟ್ ನಡೆದ ಸ್ಪಾಟ್‌ಗೆ ಧಾವಿಸಿ ಬಂದಿದ್ದಾರೆ. ತಡಮಾಡದೆ ರಕ್ಷಣಾ ಕಾರ್ಯಕ್ಕೆ ಮುಂದಾದ ಪ್ರವಾಸಿ ಮಿತ್ರರು, ಸಂಪೂರ್ಣ ಜಜ್ಜುಹೋಗಿದ್ದ ಕಾರಿನ ಡೋರ್‌ಗಳನ್ನು ಹೇಗೋ ಮಾಡಿ ಓಪನ್ ಮಾಡಿದ್ದಾರೆ. ಕಾರಿನ ಒಳಗಿದ್ದ ಪ್ರವಾಸಿಗರನ್ನು ಒಬ್ಬೊಬ್ಬರನ್ನಾಗಿ ಅತ್ಯಂತ ಜಾಗರೂಕತೆಯಿಂದ ಹೊರಗೆ ಕರೆತಂದಿದ್ದಾರೆ.

ಪವಾಡ ಸದೃಶ ರಕ್ಷಣೆ: ಫಾರ್ಚುನರ್ ಕಾರು ಮೇಲ್ನೋಟಕ್ಕೆ ಪೂರ್ತಿಯಾಗಿ ನಜ್ಜುಗುಜ್ಜಾಗಿದ್ದು, ದೊಡ್ಡ ಮಟ್ಟದ ಆಕ್ಸಿಡೆಂಟ್ ಆಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ಸಕಾಲದಲ್ಲಿ ಓಪನ್ ಆಗಿದ್ದರಿಂದ ಮತ್ತು ಕಾರಿನ ಸ್ಟ್ರಾಂಗ್ ಬಾಡಿಯಿಂದಾಗಿ ಒಳಗಿದ್ದ ಯಾರೊಬ್ಬರಿಗೂ ಗಂಭೀರವಾದ ಗಾಯಗಳಾಗಿಲ್ಲ. ಕೇವಲ ಸಣ್ಣಪುಟ್ಟ ಗಾಯಗಳೊಂದಿಗೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ಕೊಡಿಸಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ಭೇಟಿ, ಪರಿಶೀಲನೆ

ಅಪಘಾತದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರು, ಕಾಫಿ ತೋಟದೊಳಗೆ ಬಿದ್ದಿದ್ದ ಕಾರನ್ನು ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಿಸಲು ಕ್ರಮ ಕೈಗೊಂಡಿದ್ದಾರೆ. ಪ್ರವಾಸಿಗರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರಿನ ಗಿರಿ ಶ್ರೇಣಿಗಳ ರಸ್ತೆಗಳು ಕಡಿದಾದ ತಿರುವುಗಳಿಂದ ಕೂಡಿದ್ದು, ಮುಂಜಾನೆ ಮತ್ತು ಸಂಜೆ ವೇಳೆ ಭಾರಿ ಮಂಜು ಇರುವುದರಿಂದ ವಾಹನ ಸವಾರರು ಅತ್ಯಂತ ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಚಲಿಸಬೇಕು ಎಂದು ಪೊಲೀಸರು ಈ ಸಂದರ್ಭದಲ್ಲಿ ಮತ್ತೊಮ್ಮೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ. ಸದ್ಯಕ್ಕೆ ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿರುವುದು ಎಲ್ಲರೂ ನಿಟ್ಟುಸಿರು ಬಿಡುವಂತೆ ಮಾಡಿದೆ.

Latest News