Mar 11, 2026 Languages : ಕನ್ನಡ | English

ಮಾಡೋದಾದ್ರೆ ಒಳ್ಳೆ ರಸ್ತೆ ಮಾಡಿ ಎಂದು ಆಕ್ರೋಶ ಹೊರಹಾಕಿದ ಸ್ಥಳೀಯರು - ಕಳಪೆ ಕಾಮಗಾರಿಗೆ ಬಿತ್ತು ಬ್ರೇಕ್!!

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮದಲ್ಲಿ ರಸ್ತೆ ಕಾಮಗಾರಿಯ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ಟಾರ್ ಕಾಣದ ರಸ್ತೆಗೆ ಇದೀಗ ಕಾಂಕ್ರೀಟ್ ಹಾಕುವ ಕೆಲಸ ಆರಂಭವಾಗಿದ್ದರೂ, ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿ ಹಳ್ಳಿಗರು ಕೆಲಸ ನಿಲ್ಲಿಸಿದ್ದಾರೆ. 

ಚಿಕ್ಕಮಗಳೂರು – ಕಳಪೆ ರಸ್ತೆ ಕಾಮಗಾರಿಗೆ ಮಲೆನಾಡಿಗರ ಆಕ್ರೋಶ
ಚಿಕ್ಕಮಗಳೂರು – ಕಳಪೆ ರಸ್ತೆ ಕಾಮಗಾರಿಗೆ ಮಲೆನಾಡಿಗರ ಆಕ್ರೋಶ

ಗ್ರಾಮಸ್ಥರ ಆರೋಪದಂತೆ, ರಸ್ತೆಯ ಎರಡೂ ಎಡ್ಜ್‌ಗಳಲ್ಲಿ ಆರು ಇಂಚು ದಪ್ಪದ ಕಾಂಕ್ರೀಟ್ ಹಾಕಲಾಗುತ್ತಿದ್ದರೆ, ಮಧ್ಯಭಾಗದಲ್ಲಿ ಕೇವಲ ಎರಡೂವರೆ ಇಂಚು ದಪ್ಪ ಮಾತ್ರ ಹಾಕಲಾಗುತ್ತಿದೆ. ಇಂತಹ ಕಾಮಗಾರಿಯಿಂದ ಮಳೆ ನೀರು ಮಧ್ಯಭಾಗದಲ್ಲಿ ಹರಿದು ಗುಂಡಿಗಳು ಬೀಳುವ ಸಾಧ್ಯತೆ ಹೆಚ್ಚಾಗುತ್ತದೆ. “ಮಾಡೋದಾದ್ರೆ ಒಳ್ಳೆ ರಸ್ತೆ ಮಾಡಿ, ಇಲ್ಲ ಬೇಡ” ಎಂದು ಸ್ಥಳೀಯರು ಸ್ಪಷ್ಟವಾಗಿ ಹೇಳಿ ಕೆಲಸ ನಿಲ್ಲಿಸಿದ್ದಾರೆ.  

ಕಾಮಗಾರಿಯ ಸ್ಥಳದಲ್ಲಿ ಕಂಟ್ರಾಕ್ಟರ್ ಅಥವಾ ಇಂಜಿನಿಯರ್ ಯಾರೂ ಹಾಜರಿರಲಿಲ್ಲ. ಕೇವಲ ಕೂಲಿ ಕಾರ್ಮಿಕರಿಂದಲೇ ಕೆಲಸ ನಡೆಯುತ್ತಿತ್ತು. ಇದನ್ನು ಕಂಡ ಹಳ್ಳಿಗರು “ಮೊದಲು ಇಂಜಿನಿಯರ್ ಅಥವಾ ಕಂಟ್ರಾಕ್ಟರ್ ಕರೆದುಕೊಂಡು ಬನ್ನಿ” ಎಂದು ಒತ್ತಾಯಿಸಿ, ರಸ್ತೆ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಿದರು.  

ಸಂಸೆ ಗ್ರಾಮದಿಂದ ಎಳನೀರು, ನೇತ್ರಾವತಿ ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಾಮಗಾರಿಗೆ 80 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಕಳಪೆ ಕಾಮಗಾರಿಯಿಂದ ಜನರಲ್ಲಿ ನಿರಾಸೆ ಮೂಡಿದೆ. “ದಶಕಗಳ ಬಳಿಕ ರಸ್ತೆ ಭಾಗ್ಯ ಸಿಕ್ಕಿದೆ, ಆದರೆ ಕಳಪೆ ಕಾಮಗಾರಿ ಮಾಡಿ ಶಾಸಕರ ಹೆಸರು ಹಾಳು ಮಾಡಬೇಡಿ” ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಸ್ಥಳೀಯರು ಕಳಪೆ ಕಾಮಗಾರಿಯನ್ನು ಪ್ರಶ್ನಿಸಿದರೆ ಕೇಸ್ ಹಾಕುತ್ತಾರೆ ಎಂಬ ಮಾತುಗಳು ಹರಿದಾಡುತ್ತಿದ್ದು, ಇದರಿಂದ ಜನರಲ್ಲಿ ಇನ್ನಷ್ಟು ಅಸಮಾಧಾನ ಮೂಡಿದೆ. ಮಲೆನಾಡಿಗರು “ನಮ್ಮ ಹಳ್ಳಿಗೆ ಒಳ್ಳೆಯ ರಸ್ತೆ ಬೇಕು, ಕಳಪೆ ಕಾಮಗಾರಿ ಬೇಡ” ಎಂಬ ನಿಲುವು ತಾಳಿದ್ದಾರೆ.  

ಒಟ್ಟಾರೆ, ಸಂಸೆ ಗ್ರಾಮದಲ್ಲಿ ನಡೆದ ಈ ಘಟನೆ ಮಲೆನಾಡಿನ ಜನರ ಧ್ವನಿಯನ್ನು ಮತ್ತೊಮ್ಮೆ ಹೊರತಂದಿದೆ. ಗುಣಮಟ್ಟದ ಕಾಮಗಾರಿಯೇ ಜನರ ಹಕ್ಕು, ಅದನ್ನು ಕಳಪೆ ರೀತಿಯಲ್ಲಿ ಮಾಡುವುದನ್ನು ಸ್ಥಳೀಯರು ಒಪ್ಪುವುದಿಲ್ಲ ಎಂಬ ಸಂದೇಶ ಸ್ಪಷ್ಟವಾಗಿದೆ.  

Latest News