Feb 16, 2026 Languages : ಕನ್ನಡ | English

'ಕುಂಭಾರನಿಗೆ ವರುಷ ದೊಣ್ಣೆಗೆ ನಿಮಿಷ' ಎಂಬಂತೆ ರಾತ್ರೋರಾತ್ರಿ ಬಾಳೆತೋಟ ಧ್ವಂಸ!! ರೈತ ಕಣ್ಣೀರಿಟ್ಟ ಘಟನೆ!!

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಬಳಕೆರೆ ಗ್ರಾಮದಲ್ಲಿ ದುರುಳರು ರೈತನ ಬಾಳೆ ತೋಟವನ್ನು ಕಡಿದು ಹಾಕಿದ ಘಟನೆ ನಡೆದಿದೆ. ಗ್ರಾಮದ ಮಂಜುನಾಥ್ ಎಂಬ ರೈತನಿಗೆ ಸೇರಿದ ಈ ತೋಟದಲ್ಲಿ 3000 ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಟಿ ಮಾಡಲಾಗಿತ್ತು. ಆದರೆ, ದುಷ್ಕರ್ಮಿಗಳು ರಾತ್ರಿ ವೇಳೆ ತೋಟಕ್ಕೆ ನುಗ್ಗಿ, ಸುಮಾರು 1000 ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಶಪಡಿಸಿದ್ದಾರೆ.

5 ಲಕ್ಷ ಸಾಲ ಮಾಡಿ ಬೆಳೆದ ತೋಟ ನಾಶ – ರೈತನಿಗೆ ಭಾರೀ ನಷ್ಟ
5 ಲಕ್ಷ ಸಾಲ ಮಾಡಿ ಬೆಳೆದ ತೋಟ ನಾಶ – ರೈತನಿಗೆ ಭಾರೀ ನಷ್ಟ

ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈ ತೋಟ, ರೈತನ ಕುಟುಂಬ ನಂಜನಗೂಡಿಗೆ ತೆರಳಿದ್ದ ವೇಳೆ ದುಷ್ಕೃತ್ಯಕ್ಕೆ ಗುರಿಯಾಗಿದೆ. ಮಂಜುನಾಥ್ ಅವರು ಸುಮಾರು 5 ಲಕ್ಷ ರೂಪಾಯಿ ಸಾಲ ಮಾಡಿ ಬಾಳೆ ತೋಟ ಬೆಳೆದಿದ್ದರು. ಹಲವು ತಿಂಗಳುಗಳಿಂದ ಹಗಲು-ರಾತ್ರಿ ಶ್ರಮಪಟ್ಟು ಬೆಳೆದ ಗಿಡಗಳು ಕ್ಷಣಾರ್ಧದಲ್ಲಿ ನಾಶವಾಗಿದ್ದು, ಕುಟುಂಬಕ್ಕೆ ಭಾರೀ ಆರ್ಥಿಕ ಹೊಡೆತವಾಗಿದೆ.

ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ರೈತನ ಪರಿಸ್ಥಿತಿ “ಕುಂಭಾರನಿಗೆ ವರುಷ ದೊಣ್ಣೆಗೆ ನಿಮಿಷ” ಎಂಬಂತಾಗಿದೆ. ಹೊಟ್ಟೆಕಿಚ್ಚಿನಿಂದಲೇ ಈ ದುಷ್ಕೃತ್ಯ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆ ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದ್ದು, ರೈತನ ಪರಿಶ್ರಮವನ್ನು ಹಾಳು ಮಾಡಿದ ದುರುಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

 

ಈ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಒಟ್ಟಿನಲ್ಲಿ, ರೈತನ ಬಾಳೆ ತೋಟ ನಾಶವಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಕೃಷಿ ಕ್ಷೇತ್ರದಲ್ಲಿ ರೈತರ ಪರಿಶ್ರಮವನ್ನು ಹಾಳು ಮಾಡುವ ದುಷ್ಕೃತ್ಯಗಳ ವಿರುದ್ಧ ಕಠಿಣ ಕ್ರಮ ಅಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗಿದೆ.

Latest News