Apr 27, 2026 Languages : ಕನ್ನಡ | English

ಚನ್ನಪಟ್ಟಣದ ಹೌಸಿಂಗ್ ಬೋರ್ಡ್‌ಗೆ ನುಗ್ಗಿದ ಒಂಟಿಸಲಗ - ಗಜರಾಜನ ಅಟ್ಟಹಾಸಕ್ಕೆ ಪಾಪದ ಹಸು ಬಲಿ!!

ರಾಮನಗರ ಜಿಲ್ಲೆಯ ಜನರಿಗೆ ಈಗ 'ಗಜಪಡೆ'ಯ ಕಾಟ ನಿದ್ದೆಗೆಡಿಸಿದೆ. ಅದರಲ್ಲೂ ಚನ್ನಪಟ್ಟಣದ ನಿವಾಸಿಗಳು ಬೆಳ್ಳಂಬೆಳಗ್ಗೆ ಎದ್ದು ಹೊರಗೆ ಬರಲು ಭಯಪಡುವಂತಾಗಿದೆ. ನಗರದ ಜನವಸತಿ ಪ್ರದೇಶದಲ್ಲೇ ಒಂಟಿಸಲಗವೊಂದು ಪ್ರತ್ಯಕ್ಷವಾಗಿ ಭೀತಿ ಸೃಷ್ಟಿಸಿದೆ.

ಬೆಳ್ಳಂಬೆಳಗ್ಗೆ ಚನ್ನಪಟ್ಟಣದಲ್ಲಿ ಆನೆ ಭೀತಿ
ಬೆಳ್ಳಂಬೆಳಗ್ಗೆ ಚನ್ನಪಟ್ಟಣದಲ್ಲಿ ಆನೆ ಭೀತಿ

ನಗರದೊಳಗೇ ಬಂತು ಆನೆ!
ಸಾಮಾನ್ಯವಾಗಿ ಕಾಡಾನೆಗಳು ಅಂಚಿನ ಹಳ್ಳಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಈ ಬಾರಿ ಗಜರಾಜ ನೇರವಾಗಿ ಚನ್ನಪಟ್ಟಣ ನಗರದ ಹೌಸಿಂಗ್ ಬೋರ್ಡ್ ಸಮೀಪವೇ ಎಂಟ್ರಿ ಕೊಟ್ಟಿದ್ದಾನೆ. ನಗರದ ರಸ್ತೆಗಳಲ್ಲಿ ಕಾಡಾನೆ ರಾಜಾರೋಷವಾಗಿ ಓಡಾಡುತ್ತಿರುವುದನ್ನು ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ. ಕೈಯಲ್ಲಿ ಮೊಬೈಲ್ ಹಿಡಿದು ವಿಡಿಯೋ ಮಾಡುವುದಿರಲಿ, ಪ್ರಾಣ ಉಳಿಸಿಕೊಳ್ಳಲು ಓಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹಸುವಿನ ಮೇಲೆ ದಾಳಿ - ಸಾವು
ಈ ಒಂಟಿಸಲಗ ಬರಿ ನಗರಕ್ಕೆ ನುಗ್ಗಿ ಸುಮ್ಮನಾಗಿಲ್ಲ. ಹೋಗುವ ದಾರಿಯಲ್ಲಿ ಸಿಕ್ಕ ಹಸುವಿನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ಆನೆಯ ತುಳಿತಕ್ಕೆ ಸಿಲುಕಿ ಪಾಪದ ಹಸು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಹಸು ಕಳೆದುಕೊಂಡ ಮಾಲೀಕರ ಆಕ್ರಂದನ ಒಂದೆಡೆಯಾದರೆ, "ಮುಂದಿನ ಟಾರ್ಗೆಟ್ ನಾವೇನಾ?" ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಅರಣ್ಯ ಇಲಾಖೆ ಫುಲ್ ಅಲರ್ಟ್!
ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಆನೆಯನ್ನು ನಗರ ಪ್ರದೇಶದಿಂದ ದೂರವಿಡಲು ಹರಸಾಹಸ ಪಡುತ್ತಿದ್ದಾರೆ. ಪಕ್ಕದ ತೆಂಗಿನಕಲ್ಲು ಅರಣ್ಯದ ಕಡೆಗೆ ಆನೆಯನ್ನು ಓಡಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಜನರು ಗುಂಪು ಸೇರಬಾರದು ಮತ್ತು ಆನೆಯನ್ನು ಕೆಣಕಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಆನೆ ಉಪಟಳ

ರಾಮನಗರ ಜಿಲ್ಲೆಯಲ್ಲಿ ಆನೆಗಳ ಕಾಟ ದಿನೇದಿನೇ ಮಿತಿಮೀರುತ್ತಿದೆ. ಮೊನ್ನೆಯಷ್ಟೇ ಕನಕಪುರದಲ್ಲಿ ಕಾಡಾನೆಯೊಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಕಾರ್ಮಿಕನನ್ನು ಬಲಿ ಪಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ಚನ್ನಪಟ್ಟಣದಲ್ಲಿ ಇಂತಹದೊಂದು ಘಟನೆ ನಡೆದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಡಾನೆಗಳು ಪದೇ ಪದೇ ನಾಡಿಗೆ ಬರುತ್ತಿದ್ದರೂ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. ಬೆಳೆ ಹಾನಿ ಸಾಲದು ಎಂಬಂತೆ ಈಗ ಜೀವ ಹಾನಿಯಾಗುತ್ತಿರುವುದು ಜಿಲ್ಲೆಯ ಜನರ ನೆಮ್ಮದಿ ಕೆಡಿಸಿದೆ.