300 ರೂಪಾಯಿ ಕೊಟ್ರೆ ಸಾಕು, ಎಕ್ಸಾಮ್ ಹಾಲ್‌ನಲ್ಲಿ ಮೊಬೈಲ್ ಫ್ರೀ - ಚಂದ್ರಾಪುರದಲ್ಲಿ ಪರೀಕ್ಷಾ ಅಕ್ರಮ ವಿಡಿಯೋ ವೈರಲ್!!

ಪರೀಕ್ಷೆ ಅಂದ್ರೆ ಅಲ್ಲಿ ಕಟ್ಟುನಿಟ್ಟಿನ ನಿಯಮ ಇರಬೇಕು, ವಿದ್ಯಾರ್ಥಿಗಳು ಓದಿ ಬರೆಯಬೇಕು ಅನ್ನೋದು ಎಲ್ಲರ ನಂಬಿಕೆ. ಆದರೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಮೂಲ ತಾಲೂಕಿನ 'ಸರ್ವೋದಯ ಕಾಲೇಜಿ'ನಲ್ಲಿ ನಡೆದ ಘಟನೆ ಕೇಳಿದ್ರೆ ನೀವು ಅಕ್ಷರಶಃ ಶಾಕ್ ಆಗ್ತೀರಾ! ಕೇವಲ 300 ರೂಪಾಯಿಗೋಸ್ಕರ ಪರೀಕ್ಷೆಯ ಪಾವಿತ್ರ್ಯವನ್ನೇ ಗಾಳಿಗೆ ತೂರಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.

300 ರೂಪಾಯಿಗೆ ಪರೀಕ್ಷಾ ಅಕ್ರಮ – ಚಂದ್ರಾಪುರದಲ್ಲಿ ವಿದ್ಯಾರ್ಥಿಗಳ ಆಕ್ರೋಶ!! | Photo Credit: https://x.com/IndianTechGuide
300 ರೂಪಾಯಿಗೆ ಪರೀಕ್ಷಾ ಅಕ್ರಮ – ಚಂದ್ರಾಪುರದಲ್ಲಿ ವಿದ್ಯಾರ್ಥಿಗಳ ಆಕ್ರೋಶ!! | Photo Credit: https://x.com/IndianTechGuide

300 ರೂಪಾಯಿಗೆ ಮೊಬೈಲ್ ಒಪ್ಪಂದ!

ಇಲ್ಲಿ 'ಬಿ.ಎ. ಸಿವಿಲ್ ಸರ್ವಿಸಸ್' ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಸಿಬ್ಬಂದಿಯೇ ಮೊಬೈಲ್ ಬಳಸಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಒಂದು ಕಂಡೀಶನ್! ಮೊಬೈಲ್ ಒಳಗೆ ತರಬೇಕಾದ್ರೆ ತಲಾ 300 ರೂಪಾಯಿ ಹಣ ನೀಡಬೇಕು. ಹೀಗೆ ಹಣ ಕೊಟ್ಟ ವಿದ್ಯಾರ್ಥಿಗಳು ಆರಾಮವಾಗಿ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಹಿಡಿದು ಹೋಗಿದ್ದಾರೆ ಮತ್ತು ಗೂಗಲ್ ನೋಡಿ ಉತ್ತರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ವೈರಲ್ ಆಯ್ತು ವಿಡಿಯೋ, ಶುರುವಾಯ್ತು ಪ್ರತಿಭಟನೆ!

ಪರೀಕ್ಷಾ ಹಾಲ್‌ನಲ್ಲಿ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಫೋನ್ ಬಳಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ಕಂಡ ಬೇರೆ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿನ ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದಾರೆ. "ನಾವು ಕಷ್ಟಪಟ್ಟು ಓದಿ ಪರೀಕ್ಷೆ ಬರೆಯುತ್ತಿದ್ದರೆ, ಇಲ್ಲಿ ಹಣ ಕೊಟ್ಟವರು ಮೊಬೈಲ್ ನೋಡಿ ಕಾಪಿ ಹೊಡೆಯುತ್ತಿದ್ದಾರೆ. ಇದು ಎಂತಾ ನ್ಯಾಯ?" ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾಲೇಜಿನಲ್ಲಿ ಸೌಲಭ್ಯಗಳ ಕೊರತೆ

ಬರೀ ಅಕ್ರಮವಷ್ಟೇ ಅಲ್ಲ, ಕಾಲೇಜಿನ ಮೂಲಸೌಕರ್ಯದ ಬಗ್ಗೆಯೂ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಸುಮಾರು 400 ವಿದ್ಯಾರ್ಥಿಗಳು ಇರುವ ಹಾಲ್‌ನಲ್ಲಿ ಸರಿಯಾದ ಗಾಳಿ, ಬೆಳಕಿನ ವ್ಯವಸ್ಥೆ ಇರಲಿಲ್ಲವಂತೆ. ತುಂಬಾನೇ ಕಿಷ್ಕಿಂಧೆಯಂತಹ ವಾತಾವರಣದಲ್ಲಿ ಪರೀಕ್ಷೆ ನಡೆಸಲಾಗಿದೆ. ಸರಿಯಾದ ಸೌಲಭ್ಯ ಕೊಡದಿದ್ದರೂ ಅಕ್ರಮಕ್ಕೆ ಮಾತ್ರ ಕಾಲೇಜು ಸಾಥ್ ನೀಡಿದೆ ಅನ್ನೋದು ಪ್ರತಿಭಟನಾಕಾರರ ದೊಡ್ಡ ಆರೋಪ.

ತನಿಖೆಗೆ ಆಗ್ರಹ

ಈಗ ಈ ಅಕ್ರಮದ ವಿಡಿಯೋಗಳು ಜಿಲ್ಲಾಡಳಿತದವರೆಗೂ ತಲುಪಿವೆ. ಈ ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದ್ದು, ಈ ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಕಾಲೇಜು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಪಟ್ಟು ಹಿಡಿದಿವೆ. ಪರೀಕ್ಷೆಯ ಹಿತದೃಷ್ಟಿಯಿಂದ ಈ ಎಕ್ಸಾಮ್ ಅನ್ನು ರದ್ದುಗೊಳಿಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.

ಶಿಕ್ಷಣ ಸಂಸ್ಥೆಗಳೇ ಹೀಗೆ ಅಡ್ಡದಾರಿ ಹಿಡಿದರೆ ಇನ್ನು ಓದುವ ವಿದ್ಯಾರ್ಥಿಗಳ ಭವಿಷ್ಯ ಏನಾಗಬೇಕು? ಸಿವಿಲ್ ಸರ್ವಿಸ್‌ನಂತಹ ಮಹತ್ವದ ಕೋರ್ಸ್‌ನಲ್ಲೇ ಇಂತಹ ಅಕ್ರಮ ನಡೆದರೆ ನೈತಿಕತೆ ಎಲ್ಲಿ ಉಳಿಯುತ್ತದೆ? ಸದ್ಯಕ್ಕಂತೂ ಈ 300 ರೂಪಾಯಿ 'ಮೊಬೈಲ್ ಡೀಲ್' ಮಹಾರಾಷ್ಟ್ರಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. 

Latest News