ಬೆಂಗಳೂರು: ಲಾಡ್ಲೆ ಮಶಾಯಿಕ್ ದರ್ಗಾ ಗಲಾಟೆಗೆ ಸಂಬಂಧಿಸಿದ ಕೇಸ್‌ಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿರುವುದು ಈಗ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. "ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸರ್ಕಾರ ಇಂತಹ ಕೆಳಮಟ್ಟದ ಓಲೈಕೆಗೆ ಇಳಿದಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಚಾರಣೆಯಲ್ಲಿರೋ ಕ್ರಿಮಿನಲ್ ಕೇಸ್ ವಾಪಸ್ ಪಡೆಯೋದು ಅಸಾಂವಿಧಾನಿಕ!
ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಛಲವಾದಿ ನಾರಾಯಣಸ್ವಾಮಿ, "ಇನ್ನೂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಗಂಭೀರ ಕ್ರಿಮಿನಲ್ ಕೇಸ್‌ಗಳನ್ನು ಈ ರೀತಿ ದಿಢೀರ್ ಅಂತ ವಾಪಸ್ ಪಡೆಯುವುದು ಸಂಪೂರ್ಣವಾಗಿ ಅಸಾಂವಿಧಾನಿಕ. ಕ್ರಿಮಿನಲ್ ಕೇಸ್‌ಗಳನ್ನು ರದ್ದು ಮಾಡಲು ಅಥವಾ ವಾಪಸ್ ಪಡೆಯಲು ಸರ್ಕಾರಕ್ಕೆ ಯಾವುದೇ ಕಾನೂನಾತ್ಮಕ ಅಧಿಕಾರ ಇಲ್ಲ. ಹೀಗಿರುವಾಗ ಕೇಸ್ ವಾಪಸ್ ಪಡೀತಾರೆ ಅಂದರೆ ಈ ಸರ್ಕಾರವೇನು ಕೋರ್ಟಾ?" ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಹಿಂದೆ ನಡೆದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ನಿದರ್ಶನ ನಮ್ಮ ಕಣ್ಣೆದುರೇ ಇದೆ, ಆದರೂ ಸರ್ಕಾರ ಬುದ್ಧಿ ಕಲಿತಿಲ್ಲ ಎಂದು ನೆನಪಿಸಿದರು.
ಕನ್ನಡಪರ ಹೋರಾಟಗಾರರ ಮೇಲೆ ಕೇಸ್, ಅಪರಾಧಿಗಳಿಗೆ ಮನ್ನಣೆ!
ಕಾಂಗ್ರೆಸ್ ಸರ್ಕಾರದ ವಿರುದ್ಧ ತಾರತಮ್ಯದ ಆರೋಪ ಮಾಡಿದ ಅವರು, "ಇತ್ತ ಕನ್ನಡಪರ ಸಂಘಟನೆಗಳ ನಾಯಕರು ಏನಾದರೂ ಹೋರಾಟ ಮಾಡಿದರೆ ಅವರ ಮೇಲೆ ಮೊದಲು ಸಣ್ಣ ಕೇಸ್ ಹಾಕಿ, ಆಮೇಲೆ ಅದನ್ನೇ ದೊಡ್ಡ ಕ್ರಿಮಿನಲ್ ಕೇಸ್ ಆಗಿ ಬದಲಾಯಿಸಿ ಕಾಡುತ್ತಾರೆ. ಆದರೆ ಗಲಾಟೆ ಮಾಡಿದವರ ಕೇಸ್‌ಗಳನ್ನು ಮಾತ್ರ ವಾಪಸ್ ಪಡೆಯಲು ಇಷ್ಟೊಂದು ಆತುರ ತೋರುತ್ತಿದ್ದಾರೆ. ಇದು ಪಕ್ಕಾ ಓಲೈಕೆ ರಾಜಕಾರಣ ಅಲ್ಲದೆ ಇನ್ನೇನು? ನಾವೆಷ್ಟೇ ವಿರೋಧ ಮಾಡಿ ಹೋರಾಟ ನಡೆಸಿದರೂ ಈ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ದುಂಡಾವರ್ತಿಯನ್ನು ಪ್ರದರ್ಶಿಸುತ್ತಲೇ ಇದೆ. ಇದೊಂದು ರೀತಿ ಸರ್ಕಾರವೇ ಮಾಡುತ್ತಿರುವ ದೊಡ್ಡ ಅಪರಾಧ" ಎಂದು ಆಪಾದಿಸಿದರು.
ಪ್ರಿಯಾಂಕ್ ಖರ್ಗೆ ಒತ್ತಡದ ಕೈವಾಡ ಇದೆ!
ಈ ಕೇಸ್ ವಾಪಸ್ ಪಡೆಯುವ ನಿರ್ಧಾರದ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಅವರ ದೊಡ್ಡ ಒತ್ತಡ ಇದೆ ಎಂದು ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
"ಈ ಹಿಂದೆಯೂ ಕೂಡ ಪ್ರಿಯಾಂಕ್ ಖರ್ಗೆ ಅವರು ತಮ್ಮದೇ ಕ್ಷೇತ್ರದಲ್ಲಿ ಇಂತಹ ಗಂಭೀರ ಪ್ರಕರಣಗಳ ಕೇಸ್‌ಗಳನ್ನು ವಾಪಸ್ ಪಡೆಸಿದ್ದರು. ಈಗಲೂ ಅವರೇ ಸಿಎಂ ಮೇಲೆ ಒತ್ತಡ ಹಾಕಿ ಈ ಕೆಲಸ ಮಾಡಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಇಷ್ಟು ಕೆಳಮಟ್ಟದ ರಾಜಕಾರಣ ಮಾಡಬಾರದಿತ್ತು" ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಬಿಡಲ್ಲ, ಮುಂದಿನ ದಿನಗಳಲ್ಲಿ ಭಾರಿ ಹೋರಾಟ!
ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿರುವ ಛಲವಾದಿ ನಾರಾಯಣಸ್ವಾಮಿ, "ಕಾಂಗ್ರೆಸ್ ಸರ್ಕಾರದ ಈ ಜನವಿರೋಧಿ ಧೋರಣೆಯನ್ನು ಬಿಜೆಪಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸರ್ಕಾರ ತಕ್ಷಣವೇ ತನ್ನ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು. ಒಂದು ವೇಳೆ ಹಠಕ್ಕೆ ಬಿದ್ದು ಕೇಸ್ ಮುಂದುವರಿಸಿದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕಾಂಗ್ರೆಸ್ ಸರ್ಕಾರದ ಈ ಎಲ್ಲಾ ತಪ್ಪು ನಿರ್ಧಾರಗಳನ್ನು ನಾವು ವಾಪಸ್ ಪಡೆಯುತ್ತೇವೆ" ಎಂದು ಖಡಕ್ ಆಗಿ ಹೇಳಿದ್ದಾರೆ.