ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಧಾನಸಭೆಯಲ್ಲಿ ನಡೆದ ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ವಂದನಾ ನಿರ್ಣಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಉತ್ತರ ನೀಡಿದಾಗ, ಅದು ಸಮರ್ಪಕವಾಗಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಎದ್ದು ಮುಗಿಬಿದ್ದಿದ್ದಾರೆ.
ಸಭಾಪತಿಗಳು ಅಸಹಾಯಕತೆ ತೋರಿದರೆಂದು ಆರೋಪಿಸಿದ ನಾರಾಯಣಸ್ವಾಮಿ, “ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಪ್ರಶ್ನೆ ಕೇಳಿದರೆ ನಿಂದಿಸಬೇಡಿ ಎಂದು ಹೇಳುವುದು ಸರಿಯಲ್ಲ. ಪ್ರಧಾನ ಮಂತ್ರಿಗಳನ್ನು ದೇಶದ್ರೋಹಿ ಎಂದು ಕರೆಯುವುದು ಸಂವಿಧಾನಕ್ಕೆ ಅವಮಾನ” ಎಂದು ಹೇಳಿದ್ದಾರೆ.
ಅವರು ಮುಂದುವರಿದು, “ಪ್ರಧಾನಿಗಳಿಗೆ ಅಪಮಾನ ಮಾಡಿದ ನಸೀರ್ ಕ್ಷಮೆ ಕೇಳಲಿಲ್ಲ. ಇದು ಸಂವಿಧಾನಕ್ಕೆ ಗೌರವ ಕೊಡುವ ಮಾತಲ್ಲ. ಸಿಎಂ ಇದ್ದಾಗಲೇ ಇಷ್ಟೇಲ್ಲ ನಡೆದಿದೆ. ನಸೀರ್ ಅವರನ್ನು ಸದನದಿಂದ ಅಮಾನತು ಮಾಡಬೇಕು. ಇಲ್ಲವಾದರೆ ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ಎಚ್ಚರಿಸಿದ್ದಾರೆ.
ವಿರೋಧ ಪಕ್ಷದ ನಾಯಕರು ತಮ್ಮ ಮಾತಿನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ನಾಳೆ ನಾವು ಈ ವಿಚಾರ ಬಿಡುವುದಿಲ್ಲ. ಪ್ರಧಾನಿಗಳಿಗೆ ದೇಶದ್ರೋಹಿ ಎಂದ ನಸೀರ್‌ಗೆ ನಾಚಿಕೆ ಆಗಲ್ವೇ? ನಾವು ಸಿಎಂಗೆ ನಿಂದಿಸುವ ಮಾತು ಆಡಿಲ್ಲ. ನಮ್ಮನ್ನ ಅಮಾನತು ಮಾಡಿದರೂ ಪರವಾಗಿಲ್ಲ, ಆದರೆ ಇವರ ಉದ್ದತತನ ನಿಲ್ಲಬೇಕು. ಅವರನ್ನ ಅಮಾನತು ಮಾಡಿ, ಇಲ್ಲವೆ ನಮ್ಮನ್ನ ಅಮಾನತು ಮಾಡಿ. ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ನಿಲ್ಲದು” ಎಂದು ಘೋಷಿಸಿದ್ದಾರೆ.
ಈ ಘಟನೆ ವಿಧಾನಸಭೆಯ ವಾತಾವರಣವನ್ನು ಗಂಭೀರಗೊಳಿಸಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ತೀವ್ರಗೊಂಡಿದೆ. ವಿರೋಧ ಪಕ್ಷದ ನಾಯಕರು ಸಂವಿಧಾನಕ್ಕೆ ಗೌರವ ನೀಡುವಂತೆ ಒತ್ತಾಯಿಸಿ, ಸದನದಲ್ಲಿ ಶಿಸ್ತನ್ನು ಕಾಪಾಡುವ ಅಗತ್ಯವನ್ನು ನೆನಪಿಸಿದ್ದಾರೆ.