ಮೇಕೆದಾಟು ಮೇಲೆ ತಮಿಳುನಾಡು ಹೊಸ ಸಿಎಂ ವಿಜಯ್ ಕಣ್ಣು - ಕರ್ನಾಟಕದ ಪ್ಲಾನ್‌ಗೆ ಬ್ರೇಕ್ ಹಾಕಲು ಹೈವೋಲ್ಟೇಜ್ ಮೀಟಿಂಗ್!!

ಕಾವೇರಿ ಜಲವಿವಾದ ಈಗ ಮತ್ತೊಮ್ಮೆ ಜೋರಾಗಿದೆ. ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ತರಲು ವೇಗ ಹೆಚ್ಚಿಸುತ್ತಿದ್ದಂತೆ, ಇತ್ತ ತಮಿಳುನಾಡು ಸರ್ಕಾರ ಕೆರಳಿ ಕೆಂಡವಾಗಿದೆ. ಮೇಕೆದಾಟು ಪ್ರಾಜೆಕ್ಟ್ ವಿರುದ್ಧ ಕಾನೂನು ಹೋರಾಟವನ್ನು ಇನ್ನಷ್ಟು ಬಿಗಿಗೊಳಿಸುವಂತೆ ತಮಿಳುನಾಡಿನ ಹೊಸ ಮುಖ್ಯಮಂತ್ರಿ ವಿಜಯ್ ತಮ್ಮ ಅಧಿಕಾರಿಗಳು ಮತ್ತು ವಕೀಲರ ತಂಡಕ್ಕೆ ಕಡಕ್ ಸೂಚನೆ ನೀಡಿದ್ದಾರೆ.

ಕಾವೇರಿ ಕದನದಲ್ಲಿ ಹೊಸ ಟ್ವಿಸ್ಟ್ | Photo Credit: wikipedia.org
ಕಾವೇರಿ ಕದನದಲ್ಲಿ ಹೊಸ ಟ್ವಿಸ್ಟ್ | Photo Credit: wikipedia.org

ಮೇಕೆದಾಟು ವಿಷಯದಲ್ಲಿ ತಮಿಳುನಾಡು ಸರ್ಕಾರ ಯಾವುದೇ ಆಕ್ಷೇಪ ಎತ್ತುವಂತಿಲ್ಲ ಎಂದು ಇತ್ತೀಚೆಗೆ ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಉಭಯ ರಾಜ್ಯಗಳ ನಾಯಕರ ನಡುವೆ ಈಗ ದೊಡ್ಡ ವಾಗ್ದಾಳಿ ಶುರುವಾಗಿದೆ.

ಡಿಕೆಶಿ ಹೇಳಿಕೆಗೆ ಡಿಎಂಕೆ ನಾಯಕರ ಆಕ್ರೋಶ

ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಭಾನುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಡಿಎಂಕೆ ನಾಯಕ ಕೆ.ಎನ್. ನೆಹರು, "ಡಿಕೆಶಿ ನೀಡಿರುವ ಹೇಳಿಕೆ ಅವರ ದುರಹಂಕಾರದ ಮನೋಭಾವವನ್ನು ತೋರಿಸುತ್ತದೆ. ತಮಿಳುನಾಡಿನಲ್ಲಿ ಸದ್ಯ ಸಮ್ಮಿಶ್ರ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ, ಹೀಗಾಗಿ ಅದು ದುರ್ಬಲವಾಗಿದೆ ಎಂದು ಭಾವಿಸಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸರ್ಕಾರದಲ್ಲಿ ಕಾಂಗ್ರೆಸ್ ಕೂಡ ಭಾಗಿಯಾಗಿರುವುದರಿಂದ ತಮಿಳುನಾಡಿನಿಂದ ಯಾವುದೇ ವಿರೋಧ ಬರುವುದಿಲ್ಲ ಎಂಬ ಭ್ರಮೆಯಲ್ಲಿ ಅವರಿದ್ದಾರೆ" ಎಂದು ನೇರ ಆರೋಪ ಮಾಡಿದ್ದರು.

ಈ ರಾಜಕೀಯ ಕೆಸರೆರಚಾಟದ ಬೆನ್ನಲ್ಲೇ, ತಮಿಳುನಾಡು ಸಿಎಂ ವಿಜಯ್ ಅವರು ಸೋಮವಾರ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಸುಪ್ರೀಂ ಕೋರ್ಟ್ ವಕೀಲರ ಜೊತೆ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ. ಕರ್ನಾಟಕದ ಮೇಕೆದಾಟು ಪ್ರಸ್ತಾವನೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ ಬಳಿಕ, ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡಬಾರದು ಎಂದು ಕಾನೂನು ಹೋರಾಟವನ್ನು ತೀವ್ರಗೊಳಿಸಲು ನಿರ್ದೇಶನ ನೀಡಿದ್ದಾರೆ.

ಏನಿದು ಮೇಕೆದಾಟು ಜಲಯುದ್ಧ?
ಕರ್ನಾಟಕ ಸರ್ಕಾರವು ಕುಡಿಯುವ ನೀರಿನ ಉದ್ದೇಶ ಹಾಗೂ ವಿದ್ಯುತ್ ಉತ್ಪಾದನೆಗಾಗಿ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ದೊಡ್ಡ ಡ್ಯಾಂ ಕಟ್ಟಲು ಪ್ಲಾನ್ ಮಾಡಿದೆ. ಆದರೆ ತಮಿಳುನಾಡು ಈ ಯೋಜನೆಗೆ ಆರಂಭದಿಂದಲೂ ಕ್ಯಾತೆ ತೆಗೆಯುತ್ತಲೇ ಬಂದಿದೆ.

ಕರ್ನಾಟಕದ ವಾದ: ಇದು ಕೇವಲ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಬಳಸುವ ಯೋಜನೆ. ಇದರಿಂದ ತಮಿಳುನಾಡಿಗೆ ಹರಿಯುವ ನೀರಿಗೆ ಯಾವುದೇ ತೊಂದರೆ ಆಗುವುದಿಲ್ಲ.

ತಮಿಳುನಾಡಿನ ಆಕ್ಷೇಪ: ಈ ಡ್ಯಾಂ ಕಟ್ಟಿದರೆ ತಮಗೆ ಬರುವ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದ ತಮಿಳುನಾಡಿನ ಡೆಲ್ಟಾ ಭಾಗದ ರೈತರಿಗೆ ಮತ್ತು ಕೃಷಿಗೆ ಭಾರಿ ದೊಡ್ಡ ಸಮಸ್ಯೆಯಾಗಲಿದೆ.

ಡಿಎಂಕೆ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್!
ಡಿಎಂಕೆ ನಾಯಕರು ಕಾಂಗ್ರೆಸ್ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಅಹಂಕಾರದ ಆರೋಪ ಮಾಡುತ್ತಿದ್ದಂತೆ, ಇತ್ತ ಕಾಂಗ್ರೆಸ್ ಸಂಸದ ಬಿ.ಮಾಣಿಕ್ಯಂ ಠಾಗೋರ್ ಭಾರಿ ಕಿಡಿಕಾರಿದ್ದಾರೆ. "ಮೇಕೆದಾಟು ವಿಚಾರದಲ್ಲಿ ಡಿಎಂಕೆ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಕೇವಲ 20 ದಿನಗಳ ಹಿಂದಷ್ಟೇ ನಾವು ಡಿಎಂಕೆ ಜೊತೆಗೇ ಇದ್ದೆವು, ಆಗ ಅವರಿಗೆ ನಮ್ಮ ಮೇಲೆ ಯಾವುದೇ ಆಕ್ಷೇಪವಿರಲಿಲ್ಲ. ಇದೀಗ ದಿಢೀರ್ ಆಗಿ ಕಾಂಗ್ರೆಸ್ ವಿರುದ್ಧ ಟೀಕೆ ಆರಂಭಿಸಿರುವುದು ಅವರ ರಾಜಕೀಯ ಗಿಮಿಕ್ ಅಷ್ಟೇ" ಎಂದು ಆಕ್ರೋಶ ಹೊರಹಾಕಿದ್ದಾರೆ.

ತಮಿಳುನಾಡು ಕಾಂಗ್ರೆಸ್ ನಿಲುವು:
"ಕರ್ನಾಟಕದ ನಾಯಕರು ಅವರ ರಾಜ್ಯದ ಜನರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ತಮಿಳುನಾಡು ಕಾಂಗ್ರೆಸ್ ಯಾವತ್ತಿಗೂ ನಮ್ಮ ರಾಜ್ಯದ ರೈತರ ಪರವಾಗಿಯೇ ನಿಲ್ಲಲಿದೆ. ಕಾವೇರಿ ನದಿಯ ಮೇಲಿನ ನಮ್ಮ ಹಕ್ಕನ್ನು ರಕ್ಷಿಸಲು ಏನೇನು ಮಾಡಬೇಕೋ ಅದನ್ನೆಲ್ಲಾ ನಾವು ಮಾಡುತ್ತೇವೆ" ಎಂದು ಮಾಣಿಕ್ಯಂ ಠಾಗೋರ್ ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ, ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಒತ್ತಡ ಹೆಚ್ಚಾಗುತ್ತಿದ್ದರೆ, ತಮಿಳುನಾಡಿನಲ್ಲಿ ಹೊಸ ಸಿಎಂ ವಿಜಯ್ ನೇತೃತ್ವದ ಸರ್ಕಾರ ಇದನ್ನು ಕಾನೂನುಬದ್ಧವಾಗಿ ತಡೆಯಲು ಪ್ಲಾನ್ ಮಾಡಿಕೊಳ್ಳುತ್ತಿದೆ. ತಮಿಳುನಾಡು ಸರ್ಕಾರದ ಈ ಕಾನೂನು ಹೋರಾಟದ ನಡೆಗೆ ಕರ್ನಾಟಕ ಸರ್ಕಾರ ಯಾವ ರೀತಿ ಕೌಂಟರ್ ಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Latest News