ಮೆಟ್ರೊ ದರ ಏರಿಕೆಯ ಬೆನ್ನಲ್ಲೇ ಕಾವೇರಿ ನೀರಿಗೂ ದರ ಏರಿಕೆ ಆಗುತ್ತಾ? ಕೊನೆಗೂ ಸ್ಪಷ್ಟನೆ ನೀಡಿದ ಡಿಕೆಶಿ!!

ರಾಜಧಾನಿಯ ಜನರ ದಿನನಿತ್ಯದ ಬದುಕಿಗೆ ಜೀವನಾಡಿಯಂತಿರುವ ‘ನಮ್ಮ ಮೆಟ್ರೊ’ ದರ ಏರಿಕೆಯ ಚರ್ಚೆ ಇನ್ನೂ ತಣ್ಣಗಾಗಿಲ್ಲ. ಅಷ್ಟರಲ್ಲೇ ಮತ್ತೊಂದು ಬೆಲೆ ಏರಿಕೆಯ ಭೀತಿ ಈಗ ಬೆಂಗಳೂರಿಗರನ್ನು ಕಾಡುತ್ತಿದೆ ಎಂದು ಹೇಳಬಹುದು. ಹೌದು, ನಗರದ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಕಾವೇರಿ ನೀರಿನ ದರ ಪುನಹ ಹೆಚ್ಚಾಗುತ್ತದೆಯೇ ಎಂಬ ಪ್ರಶ್ನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಮೆಟ್ರೊ ದರ ಏರಿಕೆಯ ನಂತರ – ಕಾವೇರಿ ನೀರಿನ ದರ ಏರಿಕೆಯ ಭೀತಿ
ಮೆಟ್ರೊ ದರ ಏರಿಕೆಯ ನಂತರ – ಕಾವೇರಿ ನೀರಿನ ದರ ಏರಿಕೆಯ ಭೀತಿ

ಏಪ್ರಿಲ್ 1 ಹತ್ತಿರ ಬರುತ್ತಿರುವುದರಿಂದ, ಮುಂದಿನ ತಿಂಗಳಿಂದ ನೀರಿನ ಬಿಲ್ ಹೆಚ್ಚಾಗಬಹುದೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಇದಕ್ಕೆ ಕಾರಣ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಿಂದೆ ತೆಗೆದುಕೊಂಡಿದ್ದ ಅದೊಂದು ನಿರ್ಧಾರ. ಕಳೆದ ವರ್ಷ ಮಂಡಳಿಯ ಅಧ್ಯಕ್ಷರು ಪ್ರತಿ ವರ್ಷ ಏಪ್ರಿಲ್ 1ರಿಂದ ನೀರಿನ ದರದಲ್ಲಿ ಶೇ.3ರಷ್ಟು ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಿದ್ದರು. ಆಡಳಿತ ಸುಧಾರಣಾ ಆಯೋಗವೂ ಪ್ರತಿ ವರ್ಷ ದರ ಪರಿಷ್ಕರಣೆ ಮಾಡಬೇಕು ಎಂದು ಶಿಫಾರಸು ಮಾಡಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಗೃಹ ಬಳಕೆದಾರರಿಗೆ ಹಾಗೂ ವಾಣಿಜ್ಯ ಬಳಕೆದಾರರಿಗೆ ನೀರಿನ ದರವನ್ನು ಹೆಚ್ಚಿಸಲಾಗಿತ್ತು. ವಿದ್ಯುತ್ ದರ ಏರಿಕೆ ಮತ್ತು ನಿರ್ವಹಣಾ ವೆಚ್ಚಗಳೇ ಇದಕ್ಕೆ ಕಾರಣ ಎಂದು ಆಗ ತಿಳಿಸಲಾಗಿತ್ತು. ಹೀಗಾಗಿ ಈ ವರ್ಷವೂ ಅದೇ ರೀತಿಯ ದರ ಏರಿಕೆ ಆಗುತ್ತದೆಯೇ ಎಂಬ ಪ್ರಶ್ನೆ ಜನರಲ್ಲಿ ಸಹಜವಾಗಿಯೇ ಮೂಡಿದೆ.

ಈ ಬಗ್ಗೆ ಈಗ ಜಲಮಂಡಳಿ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು, “ಸದ್ಯಕ್ಕೆ ನೀರಿನ ದರ ಏರಿಕೆ ಕುರಿತು ಯಾವುದೇ ಪ್ರಸ್ತಾಪವೂ ಇಲ್ಲ, ಚರ್ಚೆಯೂ ನಡೆದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮೆಟ್ರೊ ದರ ಏರಿಕೆಯಿಂದ ಜನರಲ್ಲಿ ಈಗಾಗಲೇ ಅಸಮಾಧಾನ ಇರುವುದರಿಂದ, ಸರ್ಕಾರ ತಾತ್ಕಾಲಿಕವಾಗಿ ಈ ವಿಚಾರವನ್ನು ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Latest News