ಸಿಎಂ ಕುರ್ಚಿ ಬದಲಾವಣೆಗೂ ಕಾಫಿ ಡೇ ಕಂಪನಿಗೂ ಏನು ಲಿಂಕ್? ಶೇರು ಮಾರುಕಟ್ಟೆಯಲ್ಲಿ ಶೇ. 20ರಷ್ಟು ಜಂಪ್ ಯಾಕೆಂದರೆ!!

ಬೆಂಗಳೂರು: ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆ ಒಂದು ವಿಚಿತ್ರ ಮತ್ತು ರೋಚಕ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಇತ್ತ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಿದ್ದಂತೆ, ಅತ್ತ ಶೇರು ಮಾರುಕಟ್ಟೆಯಲ್ಲಿ ಕೆಫೆ ಕಾಫಿ ಡೇ (CCD) ಕಂಪನಿಯ ಷೇರುಗಳು ರಾಕೆಟ್ ವೇಗದಲ್ಲಿ ಮೇಲಕ್ಕೆ ಚಿಮ್ಮಿವೆ! ಕರ್ನಾಟಕ ರಾಜಕೀಯದ ಈ ಬಿಗ್ ನ್ಯೂಸ್ ಹೊರಬೀಳುತ್ತಿದ್ದಂತೆ ಹೂಡಿಕೆದಾರರು ಮುಗಿಬಿದ್ದು ಸಿಸಿಡಿ ಷೇರುಗಳನ್ನು ಖರೀದಿಸಲು ಆರಂಭಿಸಿದರು. ಇದರ ಪರಿಣಾಮವಾಗಿ ಕ್ಷಣಾರ್ಧದಲ್ಲೇ ಕಂಪನಿಯ ಷೇರುಗಳು ಶೇಕಡಾ 20ರಷ್ಟು ಏರಿಕೆ ಕಂಡು 'ಅಪ್ಪರ್ ಸರ್ಕ್ಯೂಟ್' (Upper Circuit) ತಲುಪಿತು. ಇಷ್ಟೊಂದು ಭಾರೀ ಪ್ರಮಾಣದ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಸಿಸಿಡಿ ಶೇರುಗಳ ವ್ಯಾಪಾರವನ್ನೇ ಕೆಲಕಾಲ ಸ್ಥಗಿತಗೊಳಿಸಬೇಕಾಯಿತು.

ಸಿದ್ದು ರಾಜೀನಾಮೆ ಬೆನ್ನಲ್ಲೇ ಸಿಸಿಡಿ ಶೇರು ಧಮಾಕಾ
ಸಿದ್ದು ರಾಜೀನಾಮೆ ಬೆನ್ನಲ್ಲೇ ಸಿಸಿಡಿ ಶೇರು ಧಮಾಕಾ

ಕಳೆದ ಕೆಲವು ದಿನಗಳಿಂದ ಸಿಸಿಡಿ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಾ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದವು. ಆದರೆ ಕರ್ನಾಟಕದ ಸಿಎಂ ಕುರ್ಚಿ ಬದಲಾವಣೆಯ ಹಠಾತ್ ಸುದ್ದಿ ಈ ಕಾಫಿ ಬ್ರ್ಯಾಂಡ್‌ಗೆ ಹೊಸ ಬೂಸ್ಟರ್ ಡೋಸ್ ನೀಡಿದಂತಾಗಿದೆ.

ಸಿಎಂ ರಾಜೀನಾಮೆಗೂ ಕಾಫಿ ಕಂಪನಿಗೂ ಏನು ಲಿಂಕ್?

ಕರ್ನಾಟಕದ ರಾಜಕೀಯ ಬೆಳವಣಿಗೆಗೂ ಮುಂಬೈ ಶೇರು ಮಾರುಕಟ್ಟೆಗೂ ಏನು ಸಂಬಂಧ ಅಂತ ನೀವೇನಾದರೂ ಯೋಚಿಸುತ್ತಿದ್ದರೆ, ಅದರ ಹಿಂದೆ ಒಂದು ಪಕ್ಕಾ ಕೌಟುಂಬಿಕ ಮತ್ತು ರಾಜಕೀಯ ಲೆಕ್ಕಾಚಾರವಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ ಮುಂದಿನ ಮುಖ್ಯಮಂತ್ರಿಯಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಗದ್ದುಗೆ ಏರಲಿದ್ದಾರೆ ಎಂಬ ಚರ್ಚೆಗಳು ದಟ್ಟವಾಗಿವೆ. ಈ ಸುದ್ದಿಯೇ ಸದ್ಯ ಕಾಫಿ ಡೇ ಕಂಪನಿಗೆ ಹೊಸ ಜೀವನಾಡಿಯಾಗಿ ಕೆಲಸ ಮಾಡಿದೆ.

ಡಿಕೆಶಿ ಸಿಎಂ ಆಗ್ತಾರೆ ಅನ್ನೋ ಊಹಾಪೋಹಗಳು ಬಹಳ ದಿನಗಳಿಂದ ಹರಿದಾಡುತ್ತಿದ್ದರೂ, ಸಿದ್ದರಾಮಯ್ಯ ಅವರ ಅಧಿಕೃತ ರಾಜೀನಾಮೆ ಆ ಊಹಾಪೋಹಗಳಿಗೆ ಬಹುತೇಕ ರೆಕ್ಕೆಪುಕ್ಕ ನೀಡಿದೆ. ಕರ್ನಾಟಕದ ಭವಿಷ್ಯದ ಸಿಎಂ ರೇಸ್‌ನಲ್ಲಿರುವ ಡಿಕೆ ಶಿವಕುಮಾರ್ ಮತ್ತು ಸಿಸಿಡಿ ಮಾಲೀಕರ ಕುಟುಂಬದ ನಡುವೆ ನಿಕಟ ಸಂಬಂಧವಿದೆ.

ಕೌಟುಂಬಿಕ ನಂಟು: ಡಿ.ಕೆ. ಶಿವಕುಮಾರ್ ಅವರ ಹಿರಿಯ ಮಗಳು ಐಶ್ವರ್ಯ ಅವರನ್ನು ಸಿಸಿಡಿ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಅವರ ಮಗ ಅಮೃತ್ಯ ಹೆಗ್ಡೆ ಅವರಿಗೆ ಕೊಟ್ಟು ಮದುವೆ ಮಾಡಲಾಗಿದೆ. ಅಂದರೆ, ಸದ್ಯ ಸಿಸಿಡಿ ಉದ್ಯಮವನ್ನು ಮುನ್ನಡೆಸುತ್ತಿರುವ ವ್ಯಕ್ತಿ ಡಿಕೆಶಿ ಅವರ ಸ್ವಂತ ಅಳಿಯ! ಮಾವ ರಾಜ್ಯದ ಮುಖ್ಯಮಂತ್ರಿಯಾದರೆ ಕಂಪನಿಯ ಹಿತಾಸಕ್ತಿಗಳಿಗೆ ಮತ್ತು ಉದ್ಯಮದ ಬೆಳವಣಿಗೆಗೆ ಹೊಸ ಭರವಸೆ ಸಿಗುತ್ತದೆ ಎಂಬುದು ಹೂಡಿಕೆದಾರರ ಪಕ್ಕಾ ಲೆಕ್ಕಾಚಾರ. ಅದಕ್ಕಾಗಿಯೇ ಶುಕ್ರವಾರ ಬೆಳಗ್ಗೆ 11:35ರ ಸುಮಾರಿಗೆ ಸಿಸಿಡಿ ಶೇರುಗಳು ಭರ್ಜರಿಯಾಗಿ ಶೇ. 20ರಷ್ಟು ಜಂಪ್ ಆಗಿ ₹34.78 ಬೆಲೆಯನ್ನು ತಲುಪಿದವು.

ಸಾಲದ ಸುಳಿಯಿಂದ ಲಾಭದ ಹಳಿಗೆ ಬಂದ ಸಿಸಿಡಿ!

ಕೆಲವು ವರ್ಷಗಳ ಹಿಂದೆ ಸಿಸಿಡಿ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರು ಸಾಲದ ಹೊರೆ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಾಗ ಈ ಪ್ರತಿಷ್ಠಿತ ದೇಶಿ ಕಾಫಿ ಬ್ರ್ಯಾಂಡ್ ಇತಿಹಾಸ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅವರ ಪತ್ನಿ ಮಾಳವಿಕಾ ಹೆಗ್ಡೆ ಮತ್ತು ಕುಟುಂಬಸ್ಥರು ಸತತ ಹೋರಾಟ ನಡೆಸಿ ಕಂಪನಿಯನ್ನು ಮತ್ತೆ ಹಳಿಗೆ ತಂದಿದ್ದಾರೆ. ಸದ್ಯ ಕಂಪನಿಯ ಬಿಸಿನೆಸ್ ರಿಪೋರ್ಟ್ಸ್ ಸಖತ್ ಪಾಸಿಟಿವ್ ಆಗಿ ಬರುತ್ತಿವೆ.

ಮಾರ್ಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದ ವರದಿಯ ಪ್ರಕಾರ, ಸಿಸಿಡಿ ಕಂಪನಿಯು ₹132 ಕೋಟಿಗೂ ಅಧಿಕ ನಿವ್ವಳ ಲಾಭವನ್ನು (Net Profit) ಗಳಿಸಿದೆ. ಇದು ನಿಜಕ್ಕೂ ಒಂದು ದೊಡ್ಡ ಸಾಧನೆ. ಯಾಕೆಂದರೆ, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ಬರೋಬ್ಬರಿ ₹114 ಕೋಟಿ ನಷ್ಟ ಅನುಭವಿಸಿತ್ತು. ನಷ್ಟದ ಸುಳಿಯಿಂದ ಹೊರಬಂದು ಈಗ ನೂರಾರು ಕೋಟಿ ಲಾಭದ ಮುಖ ನೋಡುತ್ತಿರುವುದು ಹೂಡಿಕೆದಾರರಲ್ಲಿ ನಂಬಿಕೆ ಮೂಡಿಸಿದೆ. ಇನ್ನು ಕಳೆದ ಸಂಪೂರ್ಣ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟು ಆದಾಯ ₹280 ಕೋಟಿಗಳಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ. 4.6 ರಷ್ಟು ಹೆಚ್ಚಳ ಕಂಡಿದೆ.

ಹೂಡಿಕೆದಾರರಲ್ಲಿ ಹುಟ್ಟಿದ ಹೊಸ ಭರವಸೆ

ಕಂಪನಿಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವ ಬೆನ್ನಲ್ಲೇ, ಈಗ ಮಾಲೀಕರ ಕುಟುಂಬಕ್ಕೆ ರಾಜಕೀಯವಾಗಿ ಅತ್ಯುನ್ನತ ಅಧಿಕಾರ ಸಿಗುವ ಮುನ್ಸೂಚನೆ ಸಿಕ್ಕಿರುವುದು ಗಾಯದ ಮೇಲೆ ಜೇನು ಸವರಿದಂತಾಗಿದೆ. ಉದ್ಯಮ ರಂಗದಲ್ಲಿ ರಾಜಕೀಯ ಬೆಂಬಲ ಮತ್ತು ಪ್ರಭಾವ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆ ಎಂಬುದಕ್ಕೆ ಶುಕ್ರವಾರದ ಷೇರು ಮಾರುಕಟ್ಟೆಯ ಈ ಏರಿಕೆಯೇ ಸಾಕ್ಷಿ.

ವಿಧಾನಸೌಧದಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆಯ ಹೈಡ್ರಾಮಾ ದೆಹಲಿಯವರೆಗೂ ತಲುಪಿದ್ದು, ಶೀಘ್ರದಲ್ಲೇ ಹೊಸ ನಾಯಕನ ಪಟ್ಟಾಭಿಷೇಕವಾಗಲಿದೆ. ಈ ರಾಜಕೀಯ ಬದಲಾವಣೆಯ ಲಾಭವನ್ನು ಸಿಸಿಡಿ ಕಂಪನಿ ಮುಂದಿನ ದಿನಗಳಲ್ಲಿ ಹೇಗೆ ಪಡೆದುಕೊಳ್ಳುತ್ತದೆ ಮತ್ತು ಶೇರು ಮಾರುಕಟ್ಟೆಯಲ್ಲಿ ಇದರ ಅಬ್ಬರ ಹೀಗೆಯೇ ಮುಂದುವರಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Latest News