ಬಿಹಾರದಲ್ಲಿ ಮದುವೆಯ ಸಿದ್ಧತೆಗಳು ಅದ್ದೂರಿಯಾಗಿ ನಡೆದಿದ್ದವು. ವರ ಮತ್ತು ಆತನ ಸಂಬಂಧಿಕರು ಮೆರವಣಿಗೆಯೊಂದಿಗೆ ಮದುವೆ ಮಂಟಪದ ಕಡೆಗೆ ಸಾಗುತ್ತಿದ್ದರು. ಆದರೆ, ವಿಧಿ ಬೇರೆಯದೇ ಸಂಚು ರೂಪಿಸಿತ್ತು. ಮದುವೆ ಸ್ಥಳಕ್ಕೆ ತಲುಪುವ ಮೊದಲೇ ವರ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಯಿತು. ಈ ದುರಂತದಲ್ಲಿ ವರ ಸ್ಥಳದಲ್ಲೇ ಪ್ರಾಣ ಬಿಟ್ಟನು! ಮದುವೆಯ ಸಡಗರವಿರಬೇಕಾದ ಮನೆಯಲ್ಲಿ ಕ್ಷಣಾರ್ಧದಲ್ಲಿ ಮಸಣದ ಮೌನ ಆವರಿಸಿತು!
ವರನ ಸಾವಿನಿಂದ ಎರಡೂ ಕುಟುಂಬಗಳು ಕಂಗಾಲಾಗಿದ್ದರೂ, ಮದುವೆ ಮನೆಯ ಹಿರಿಯರು ಮಾತ್ರ ಒಂದು ಕಠಿಣ ಹಾಗೂ ವಿಚಿತ್ರ ನಿರ್ಧಾರ ತಗೊಂಡರು. ಮದುವೆ ಅರ್ಧಕ್ಕೆ ನಿಂತರೆ ಸಮಾಜ ಆ ಮದುಮಗಳನ್ನು 'ಅಪಶಕುನದವಳು' ಎಂದು ಕರೆಯಬಹುದು ಎಂಬ ಭಯ ಅವರಲ್ಲಿತ್ತು. ಹಿರಿಯರು ಈ ನಿರ್ಧಾರ ತೆಗೆದುಕೊಳ್ಳಲು ಎರಡು ಪ್ರಮುಖ ಕಾರಣಗಳನ್ನು ನೀಡಿದ್ದಾರೆ;
ಮಗಳ ಗೌರವ - ಮದುವೆ ನಿಂತರೆ ಹುಡುಗಿಯ ಭವಿಷ್ಯ ನಾಶವಾಗುತ್ತದೆ ಮತ್ತು ಮೂಢನಂಬಿಕೆಯ ಕಾರಣದಿಂದ ಮುಂದೆ ಯಾರೂ ಅವಳನ್ನು ಮದುವೆಯಾಗುವುದಿಲ್ಲ ಎಂಬ ಆತಂಕ.
ಕನ್ಯಾಶುಲ್ಕ ಮತ್ತು ಮರ್ಯಾದೆ - ಮದುವೆ ರದ್ದಾದರೆ ಕನ್ಯಾಶುಲ್ಕದ (ವರದಕ್ಷಿಣೆ) ಬಗ್ಗೆ ವಾದವಿವಾದಗಳು ಉಂಟಾಗಬಹುದು ಮತ್ತು ಕುಟುಂಬದ ಗೌರವ ಹಾದಿಬೀದಿಗೆ ಬರಬಹುದು ಎಂಬ ಭಯ.
ಈ ಕಾರಣಗಳಿಗಾಗಿ, ವರನ ಸಾವಿನ ದುಃಖದ ನಡುವೆಯೇ ಆತನ ಕಿರಿಯ ಸಹೋದರನನ್ನು ವರನನ್ನಾಗಿ ಮಾಡಲು ಹಿರಿಯರು ನಿರ್ಧರಿಸಿದರು.
ಹಿರಿಯರ ಒತ್ತಾಯಕ್ಕೆ ಮಣಿದು ಅಣ್ಣನ ಸಾವಿನ ನೋವಿನಲ್ಲೇ ಕಿರಿಯ ತಮ್ಮ ಮದುಮಗನಾಗಿ ನಿಲ್ಲಬೇಕಾಯಿತು. ಇತ್ತೀಚೆಗೆ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋದಲ್ಲಿ ಹಾರ ಬದಲಾಯಿಸುವಾಗ ವಧು ಮತ್ತು ವರನ ಕಿರಿಯ ಸಹೋದರ ಇಬ್ಬರೂ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಂಡುಬಂದಿದೆ. ಇದು ಪ್ರೀತಿಯ ಅಥವಾ ಸಂತೋಷದ ಮದುವೆಯಾಗಿರಲಿಲ್ಲ, ಬದಲಾಗಿ ಸಮಾಜದ ಒತ್ತಡಕ್ಕೆ ಸಿಲುಕಿ ನಡೆದ ಅನಿವಾರ್ಯ ಮದುವೆಯಾಗಿತ್ತು.
ಈ ಘಟನೆ ಈಗ ದೇಶಾದ್ಯಂತ ದೊಡ್ಡ ಚರ್ಚೆಯನ್ನು ಪ್ರಾರಂಭಿಸಿದೆ. ಸಮಾಜದಲ್ಲಿ ಗೌರವ ಅನ್ನೋದು ಮುಖ್ಯವೇ, ಆದರೆ ಅದು ಮಾನವೀಯತೆ ಮತ್ತು ವೈಯಕ್ತಿಕ ಒಪ್ಪಿಗೆಗಿಂತಲೂ ಅಮೂಲ್ಯವೇ ಎಂಬ ಪ್ರಶ್ನೆ ಎದ್ದಿದೆ.
ಸಾರ್ವಜನಿಕ ಆಕ್ರೋಶ - ವರ ಸತ್ತ ಕೆಲವೇ ಗಂಟೆಗಳಲ್ಲಿ ಇಂತಹ ಮದುವೆ ನಡೆಸುವುದು ಎಷ್ಟು ಸರಿ? ವಧು ಮತ್ತು ವರನ ಒಪ್ಪಿಗೆಯನ್ನು ಯಾರೂ ಕೇಳಿಲ್ಲ. ಪರಂಪರೆಯ ಹೆಸರಿನಲ್ಲಿ ಯುವಕರ ಜೀವನವನ್ನು ಬಲಿಕೊಡಲಾಗಿದೆ ಎಂದು ಜನರು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಸಾಮಾಜಿಕ ಕಳಕಳಿ - ಈ ಘಟನೆ ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮನೆಮಾಡಿರುವ ಮೂಢನಂಬಿಕೆಗಳು ಮತ್ತು ಸಾಮಾಜಿಕ ಒತ್ತಡಗಳನ್ನ ಎತ್ತಿ ತೋರಿಸಿದೆ.
BIHAR: A GROOM reportedly DIED in a HORRIFIC ROAD ACCIDENT while on the way to his wedding.
— aree_shuklajii (@th_anonymouse) May 6, 2026
Instead of stopping the ceremony and prioritizing the BRIDE’S CONSENT, the families allegedly decided to CONTINUE THE WEDDING.
The bride was then reportedly married to the DECEASED… pic.twitter.com/4cqKsIVEpi
ಕುಟುಂಬದ ಗೌರವ ಉಳಿಸಲು ಒಂದು ಮದುವೆ ನಡೆದಿರಬಹುದು, ಆದರೆ ಅಣ್ಣನ ಸಾವಿನ ನೋವು ಮತ್ತು ಒತ್ತಡದ ನಡುವೆ ಒಂದಾದ ಈ ಹೊಸ ಜೋಡಿಯ ಭವಿಷ್ಯ ಹೇಗಿರುತ್ತೋ ಎಂಬ ಆತಂಕ ಮಾತ್ರ ಎಲ್ಲರಲ್ಲೂ ಉಳಿದಿದೆ. ಸಮಾಜ ಬದಲಾಗಬೇಕಿದೆ, ಸಂಪ್ರದಾಯಗಳು ಮನುಷ್ಯನ ನೆಮ್ಮದಿಯನ್ನು ಕಬಳಿಸುವಂತಿರಬಾರದು!