"ಇದು ನನ್ನ ಲೈಫ್‌ನ 3ನೇ ಇನ್ನಿಂಗ್ಸ್" - ರಾಜಕಾರಣಕ್ಕೆ ಬಂದ ಅಸಲಿ ಕಾರಣ ಬಿಚ್ಚಿಟ್ಟ ಆಂಕರ್ ಜಾಹ್ನವಿ!!

ಕನ್ನಡ ಕಿರುತೆರೆಯ ಫೇಮಸ್ ಆಂಕರ್, ಬಿಗ್‌ಬಾಸ್ ಖ್ಯಾತಿಯ ನಟಿ ಜಾಹ್ನವಿ ಅವರು ಈಗ ದಿಢೀರನೆ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟು ಎಲ್ಲರಿಗೂ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ! ಹೌದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಭಾನುವಾರ ಜಾಹ್ನವಿ ಜೆಡಿಎಸ್ (JDS) ಪಕ್ಷವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ.

ಕಿರುತೆರೆಯಿಂದ ಸೀದಾ ರಾಜಕೀಯಕ್ಕೆ ಬಿಗ್‌ಬಾಸ್ ಜಾಹ್ನವಿ ಎಂಟ್ರಿ | Photo Credit: www.instagram.com
ಕಿರುತೆರೆಯಿಂದ ಸೀದಾ ರಾಜಕೀಯಕ್ಕೆ ಬಿಗ್‌ಬಾಸ್ ಜಾಹ್ನವಿ ಎಂಟ್ರಿ | Photo Credit: www.instagram.com

ನಟಿಯ ಈ ನಿರ್ಧಾರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ತಾವು ರಾಜಕೀಯಕ್ಕೆ ಬಂದಿದ್ದು ಯಾಕೆ? ಜೆಡಿಎಸ್ ಸೇರಲು ಇವರಿಗೆ ಆಹ್ವಾನ ಕೊಟ್ಟಿದ್ದು ಯಾರು? ಎಂಬುದರ ಬಗ್ಗೆ ಜಾಹ್ನವಿ ಈಗ ಮುಕ್ತವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಇದು ನನ್ನ ಲೈಫ್‌ನ ‘ಮೂರನೇ ಇನ್ನಿಂಗ್ಸ್’ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಇದು ನನ್ನ ‘ಮೂರನೇ ಇನ್ನಿಂಗ್ಸ್’ ಎಂದ ಜಾಹ್ನವಿ!

ತಮ್ಮ ಕರಿಯರ್ ಜರ್ನಿಯನ್ನು ನೆನಪಿಸಿಕೊಂಡಿರುವ ಜಾಹ್ನವಿ, ರಾಜಕೀಯವನ್ನು ಮೂರನೇ ಇನ್ನಿಂಗ್ಸ್ ಎಂದು ಕರೆದಿದ್ದಾರೆ. "ನಾನು ಸತತ 12 ವರ್ಷಗಳ ಕಾಲ ಬೇರೆ ಬೇರೆ ಮೀಡಿಯಾಗಳಲ್ಲಿ ನ್ಯೂಸ್ ಆಂಕರ್ ಆಗಿ ಕೆಲಸ ಮಾಡಿದೆ. ಇದು ನನ್ನ ಮೊದಲ ಇನ್ನಿಂಗ್ಸ್. ಆಮೇಲೆ ಕಲರ್ಸ್ ಕನ್ನಡ ವಾಹಿನಿಯ ಮೂಲಕ ನನ್ನ ಎರಡನೇ ಇನ್ನಿಂಗ್ಸ್ ಶುರುವಾಯಿತು. ನಿರೂಪಕಿಯಾಗಿ, ರಿಯಾಲಿಟಿ ಶೋಗಳು ಹಾಗೂ ‘ಬಿಗ್‌ಬಾಸ್’ ಮೂಲಕ ಕನ್ನಡಿಗರ ಮನೆಮಾತಾದೆ. ಈಗ ಜನರ ಆಶೀರ್ವಾದದಿಂದ ರಾಜಕಾರಣಕ್ಕೆ ಕಾಲಿಟ್ಟಿದ್ದು, ಇದು ನನ್ನ ಮೂರನೇ ಇನ್ನಿಂಗ್ಸ್" ಎಂದು ಖುಷಿ ಹಂಚಿಕೊಂಡಿದ್ದಾರೆ.

ಜೆಡಿಎಸ್ ಸೇರಲು ಇನ್ವಿಟೇಷನ್ ಕೊಟ್ಟಿದ್ದು ಯಾರು?

ತಾವು ರಾಜಕೀಯಕ್ಕೆ ಬರಲು ಮತ್ತು ಜೆಡಿಎಸ್ ಸೇರಲು ಕಾರಣವೇನು ಎಂಬುದನ್ನು ಜಾಹ್ನವಿ ಬಿಚ್ಚಿಟ್ಟಿದ್ದಾರೆ. "ನಾನು ಮಾಡುತ್ತಿದ್ದ ಸಣ್ಣಪುಟ್ಟ ಸಮಾಜಮುಖಿ ಕೆಲಸಗಳನ್ನು ಗುರುತಿಸಿ, ಜೆಡಿಎಸ್ ಯುವ ಮುಖಂಡರಾದ ಪುನೀತ್ ಗೌಡ ಅವರು ನನಗೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ನಾನು ಮಾಡಿದ ಪುಟ್ಟ ಸಹಾಯವನ್ನು ದೊಡ್ಡದಾಗಿ ಸ್ವೀಕರಿಸಿದ ನಮ್ಮ ರಾಜ್ಯದ ಜನರೇ ನನ್ನನ್ನು ಇವತ್ತು ಇಲ್ಲಿ ತಂದು ನಿಲ್ಲಿಸಿದ್ದಾರೆ. ಇದರ ಬಗ್ಗೆ ಚೆನ್ನಾಗಿ ಯೋಚನೆ ಮಾಡಿ, ಕೊನೆಗೆ ಕುಮಾರಣ್ಣನವರ (ಎಚ್.ಡಿ. ಕುಮಾರಸ್ವಾಮಿ) ಲೀಡರ್‌ಶಿಪ್ ಇಷ್ಟವಾಗಿ ಜೆಡಿಎಸ್ ಸೇರಿದ್ದೇನೆ" ಎಂದಿದ್ದಾರೆ.

ಹಳೆಯ ರಾಜಕೀಯ ಸಂಸ್ಕೃತಿ ಕಿತ್ತೊಗೆಯುವೆ!

ಇವತ್ತಿನ ರಾಜಕೀಯ ಸಿಸ್ಟಮ್ ಬಗ್ಗೆ ಜಾಹ್ನವಿ ಭಾರಿ ಅಸಮಾಧಾನ ಹೊರಹಾಕಿದ್ದಾರೆ. "ಸಮಾಜಸೇವೆಯೇ ನನ್ನ ಮೇನ್ ಗೋಲ್. ಎಲೆಕ್ಷನ್ ಟೈಮ್‌ನಲ್ಲಿ 500, 1000 ಅಥವಾ 2000 ರೂಪಾಯಿ ಇಸ್ಕೊಂಡು ನಮ್ಮ ಪವರ್‌ಫುಲ್ ವೋಟುಗಳನ್ನು ಮಾರಿಕೊಳ್ಳುವುದು, ಆಮೇಲೆ ರಾಜಕಾರಣಿಗಳ ಮುಂದೆ ಗುಲಾಮರ ತರಹ ಕೈಕಟ್ಟಿ ನಿಲ್ಲುವುದು - ಈ ಕೆಟ್ಟ ಹಳೆಯ ರಾಜಕೀಯ ಸಂಸ್ಕೃತಿಯನ್ನು ಮೊದಲು ಕಿತ್ತೊಗೆಯಬೇಕಿದೆ. ಜನರ ಸೇವಕಿಯಾಗಿ ದುಡಿದು, ನಮ್ಮ ರಾಜ್ಯದ ಡೆವಲಪ್‌ಮೆಂಟ್‌ಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಮತ್ತು ಪಾಲಿಟಿಕ್ಸ್‌ನಲ್ಲಿ ಒಂದು ಹೊಸ ಬದಲಾವಣೆ ತರುವುದು ನನ್ನ ಆಸೆ" ಎಂದು ತಮ್ಮ ದಿಟ್ಟ ನಿಲುವನ್ನು ತಿಳಿಸಿದ್ದಾರೆ.

ಎಲೆಕ್ಷನ್‌ಗೆ ನಿಲ್ತಾರಾ ಜಾಹ್ನವಿ?

"ನನಗೆ ಅಧಿಕಾರದ ಆಸೆ ಇಲ್ಲ ಅಂತ ನಾನು ಸುಳ್ಳು ಹೇಳಲ್ಲ. ಯಾಕಂದ್ರೆ ಪವರ್ ಕೈಲಿದ್ದರೆ ಜನರಿಗೆ ಇನ್ನೂ ಜಾಸ್ತಿ ಹೆಲ್ಪ್ ಮಾಡಬಹುದು. ಮುಂದೆ ಪಕ್ಷ ಅವಕಾಶ ಕೊಟ್ಟರೆ ಜಿಬಿಎಂಪಿ (ಬಿಬಿಎಂಪಿ) ಎಲೆಕ್ಷನ್ ಆಗಲಿ ಅಥವಾ ಶಾಸಕ (MLA) ಸ್ಥಾನಕ್ಕಾಗಲಿ ಸ್ಪರ್ಧೆ ಮಾಡಲು ನಾನು ರೆಡಿಯಾಗಿದ್ದೇನೆ" ಎಂದು ಜಾಹ್ನವಿ ತಮ್ಮ ಮುಂದಿನ ಪ್ಲಾನ್ ಬಿಚ್ಚಿಟ್ಟಿದ್ದಾರೆ.

ಒಟ್ಟಿನಲ್ಲಿ, ಗ್ಲಾಮರ್ ಲೋಕದಿಂದ ಈಗ ಸೀದಾ ಜನಸೇವೆಗೆ ಇಳಿದಿರುವ ಜಾಹ್ನವಿ ಅವರ ಈ ಹೊಸ ಪಯಣಕ್ಕೆ ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳ್ತಿದ್ದಾರೆ. ಟಿವಿ ಪರದೆ ಮೇಲೆ ಧೂಳೆಬ್ಬಿಸಿದ ಈ ಆಂಕರ್, ರಾಜಕೀಯದ ಈ ಮೂರನೇ ಇನ್ನಿಂಗ್ಸ್‌ನಲ್ಲಿ ಎಷ್ಟರಮಟ್ಟಿಗೆ ಸಕ್ಸಸ್ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ!

Latest News