ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ನಡೆದ ಸೂಫಿ–ಸಂತರ ಬೃಹತ್ ಸಮಾವೇಶದಲ್ಲಿ ಮುಂಬೈ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಜಿ. ಕೋಲ್ಸೆ ಪಾಟೀಲ್ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಾಟೀಲ್, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರು ಎಂದು ತಿಳಿದುಬಂದಿದೆ. “ಹಿಂದೂ ಅನ್ನುವುದು ಧರ್ಮವೇ ಅಲ್ಲ, ಅದು ಪರ್ಷಿಯನ್ ಪದ, ಅದರ ಅರ್ಥ ಬೈಗುಳ” ಎಂದು ಅವರು ಹೇಳಿದರು. “ಹಿಂದೂ ಧರ್ಮವೇ ಇಲ್ಲ” ಎಂಬ ಮಾತುಗಳಿಂದ ಸಭೆಯಲ್ಲಿ ಕುತೂಹಲ ಹಾಗೂ ಆಕ್ರೋಶ ಮೂಡಿತು.
ಅವರು ಮುಂದುವರಿದು, “ಬ್ರಾಹ್ಮಣರು ತಮ್ಮ ಬುದ್ಧಿಯಿಂದ ಜನರನ್ನು ಗುಲಾಮರನ್ನಾಗಿ ಮಾಡಿ ಹಿಂದೂ ಧರ್ಮವನ್ನು ಸೃಷ್ಟಿಸಿದ್ದಾರೆ. ಆದರೆ ಅದು ಧರ್ಮವಲ್ಲ” ಎಂದು ಅಭಿಪ್ರಾಯಪಟ್ಟರು. “ಈ ಇತಿಹಾಸವನ್ನು ಹೇಳುವ ಕಾರ್ಯ ಈಗಿನ ಸಂತರು ಮತ್ತು ಮೌಲ್ವಿಗಳು ಮಾಡಬೇಕು” ಎಂದು ಹೇಳಿದರು. ಪಾಟೀಲ್ ತಮ್ಮ ಭಾಷಣದಲ್ಲಿ RSS ವಿರುದ್ಧ ತೀವ್ರ ಟೀಕೆ ಮಾಡಿದರು. “ದೇಶದಲ್ಲಿನ ಎಲ್ಲಾ ದಂಗೆಗಳಿಗೆ RSS ಕಾರಣ. ಸಿಖ್ಖರ ದಂಗೆಗೂ RSS ನವರೆ ಕಾರಣ. ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ RSS” ಎಂದು ಅವರು ಆರೋಪಿಸಿದರು. “RSS ಹಾಗೂ ಬ್ರಾಹ್ಮಣರ ವಿರುದ್ಧ ಮಾತನಾಡಲು ಅನೇಕರು ಭಯಪಡುತ್ತಾರೆ. ಆದರೆ ಅವರು ದೇಶದಲ್ಲಿ ಕೇವಲ ಒಂದು ಪರ್ಸೆಂಟ್ ಮಾತ್ರ ಇದ್ದಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಈ ಹೇಳಿಕೆಗಳು ಸಭೆಯಲ್ಲಿ ಹಾಜರಿದ್ದ ಗಣ್ಯರಲ್ಲಿ ನಸುನಕ್ಕು, ಕೆಲವರಲ್ಲಿ ಆಕ್ರೋಶ ಮೂಡಿಸಿದವು. ಹಿಂದೂ ಧರ್ಮ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಮಾತುಗಳಿಂದ ಸಮಾವೇಶದ ನಂತರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.