ಬೆಂಗಳೂರು: ಮದುವೆಯಾದ ಹೊಸತರಲ್ಲಿ ಸುಖವಾಗಿರಬೇಕಿದ್ದ ಸಂಸಾರವೊಂದು ಪತಿಯ ಕಿರುಕುಳ ಹಾಗೂ ಹಣದ ದಾಹದಿಂದಾಗಿ ದುರಂತ ಅಂತ್ಯ ಕಂಡಿದೆ. ನಗರದ ನಿವಾಸಿ ಶಾರದಾ (39) ಎಂಬುವವರು ತನ್ನ ಪತಿಯ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ ಹಣ!
ಶಾರದಾ ಮತ್ತು ಮಹೇಶ್ ಎಂಬುವವರು ಕಳೆದ 2025ರ ಜುಲೈ 31ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಮಹೇಶ್‌ನ ಅಸಲಿ ಮುಖ ಬಯಲಾಗಿದೆ. ಶಾರದಾ ತನ್ನ ಬಳಿಯಿದ್ದ ಫಿಕ್ಸ್‌ಡ್ ಡೆಪಾಸಿಟ್‌ನಿಂದ ಸುಮಾರು 2 ಲಕ್ಷ ರೂಪಾಯಿಗಳನ್ನು ಪತಿಗೆ ನೀಡಿದ್ದರು. ಆದರೆ, ಅಷ್ಟಕ್ಕೆ ತೃಪ್ತನಾಗದ ಮಹೇಶ್, ಹಣಕ್ಕಾಗಿ ಪತ್ನಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲು ಶುರು ಮಾಡಿದ್ದ ಎನ್ನಲಾಗಿದೆ.
ಮೃತ ಮಹಿಳೆಯ ಸಹೋದರ ಅರುಣ್ ಅವರ ಪ್ರಕಾರ, ಶಾರದಾ ಒಟ್ಟು 5 ಲಕ್ಷ ರೂಪಾಯಿಗಳವರೆಗೂ ಮಹೇಶ್‌ಗೆ ಹಣ ನೀಡಿದ್ದರು. ಆದರೂ ಕಿರುಕುಳ ಮಾತ್ರ ನಿಂತಿರಲಿಲ್ಲ.
ಸಾಯುವ ಮುನ್ನ ಪತಿಗೆ ಅದೆಷ್ಟು ಕರೆ ಮಾಡಿದರೂ ಉತ್ತರಿಸಲಿಲ್ಲ!
ಶಾರದಾ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಪತಿಗೆ ಹಲವಾರು ಬಾರಿ ಫೋನ್ ಮಾಡಿದ್ದರು. ಅಚ್ಚರಿಯ ವಿಷಯವೆಂದರೆ, ಆ ಸಮಯದಲ್ಲಿ ಪತಿ ಮಹೇಶ್ ಮನೆಯಲ್ಲೇ ಇದ್ದರು! ಆದರೆ ಮತ್ತೊಂದು ರೂಮ್‌ನಲ್ಲಿ ಬಾಗಿಲು ಹಾಕಿಕೊಂಡಿದ್ದ ಆತ, ಪತ್ನಿಯ ಫೋನ್ ಕರೆಗಳಿಗೆ ಸ್ಪಂದಿಸಲಿಲ್ಲ.
ಕೊನೆಗೆ ಶಾರದಾ ಅವರು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಫೋಟೋಗಳನ್ನು ಕಳುಹಿಸಿ ಸೂಚನೆ ನೀಡಿದರೂ, ಆತನ ಮನಸ್ಸು ಕರಗಲಿಲ್ಲ. ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ನೊಂದ ಶಾರದಾ ಫ್ಯಾನ್‌ಗೆ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ.
ಗೃಹ ಸಚಿವರಿಗೆ ಕುಟುಂಬದ ದೂರು
ಈ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಶಾರದಾ ಅವರ ಕುಟುಂಬದವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ. ಸೂಕ್ತ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪತಿ ಮಹೇಶ್‌ನನ್ನು ಬಂಧಿಸಿದ್ದಾರೆ.
ತನಿಖೆ ಚುರುಕು
ಪೊಲೀಸರು ಶಾರದಾ ಅವರು ಬರೆದಿದ್ದ ಡೈರಿಯನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಪತಿ ಮತ್ತು ಆತನ ಕುಟುಂಬ ನೀಡುತ್ತಿದ್ದ ಕಿರುಕುಳದ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಮಹೇಶ್‌ನ ತಾಯಿಯ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದೂರಿನಡಿಯಲ್ಲಿ ಪ್ರಕರಣ ದಾಖಲಾಗಿದೆ.