ಇನ್ಸ್ಟಂಟ್ ಕರ್ಮ ಅಂದ್ರೆ ಪುಸ್ತಕದ ಮಾತಲ್ಲ, ನಿಜ ಜೀವನದಲ್ಲೇ ನಡೆಯೋ ಘಟನೆ ಇದಾಗಿದೆ. ಯಾರಿಗಾದರೂ ಕೆಟ್ಟದ್ದು ಮಾಡೋಕೆ ಹೋಗಿದ್ರೆ, ಅದೇ ಕೆಟ್ಟದ್ದು ನಮ್ಮನ್ನೇ ಸುಡುತ್ತೆ ಅನ್ನೋದಕ್ಕೆ ಈ ಕಥೆ ಜೀವಂತ ಉದಾಹರಣೆ. ಬೆಂಗಳೂರಿನಲ್ಲಿ ನಡೆದ ಈ ಘಟನೆ ಕೇಳಿದ್ರೆ ಯಾರಾದರೂ ಬೆಚ್ಚಿಬೀಳೋದು ಖಂಡಿತ. ಒಡಹುಟ್ಟಿದ ಅಣ್ಣನ ಮೇಲಿನ ದ್ವೇಷ, ಕೋಪ ಮತ್ತು ಆರ್ಥಿಕ ಒತ್ತಡ ಇವೆಲ್ಲವೂ ಈತನ ನಿರ್ಧಾರಕ್ಕೆ ಈ ದಾರಿ ಮಾಡಿ ಕೊಟ್ಟಿವೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯ ಹೆಸರು ಮುನಿರಾಜು. ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟಿದ್ದ ಅವನು ತನ್ನ ಅಣ್ಣನೊಂದಿಗೆ ಹಣಕಾಸು ವಿಚಾರವಾಗಿ ಆಗಾಗ ಜಗಳ ಮಾಡಿಕೊಂಡಿದ್ದನೆಂದು ಹೇಳಲಾಗುತ್ತಿದೆ. ಈ ಜಗಳದ ಅಂತ್ಯ ಎಷ್ಟು ಅಪಾಯಕರವಾಗಬಹುದು ಅನ್ನೋದನ್ನು ಯಾರೂ ಊಹಿಸಿರಲಿಲ್ಲ. ಕೋಪದ ಭರದಲ್ಲಿ ಮುನಿರಾಜು ತನ್ನ ಅಣ್ಣನ ಮನೆಗೆ ಬೆಂಕಿ ಹಚ್ಚಲು ತೀರ್ಮಾನಿಸಿದ್ದಾನೆ. ಯಾರಿಗೂ ತಿಳಿಯದಂತೆ, ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದಾನೆ. ಆದರೆ ಅವನ ಲೆಕ್ಕಾಚಾರ ತಪ್ಪಾಗಿತ್ತು.
ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದಂತೆ, ಬೆಂಕಿಯ ಜ್ವಾಲೆಗಳು ತೀವ್ರವಾಗಿ ಹಿಂತಿರುಗಿ ಅವನ ಮೇಲೆಯೇ ಎರಗಿವೆ. ಕ್ಷಣಾರ್ಧದಲ್ಲಿ ಮುನಿರಾಜುವಿನ ಮುಖ ಮತ್ತು ದೇಹದ ಭಾಗಗಳು ಸುಟ್ಟು ಹೋಗಿವೆ. ಸಹೋದರನ ಮನೆಗೆ ಹಾನಿ ಮಾಡುವ ಉದ್ದೇಶದಿಂದ ಬಂದ ವ್ಯಕ್ತಿ, ಕೊನೆಗೆ ತನ್ನದೇ ಜೀವಕ್ಕೆ ಅಪಾಯ ತಂದಿಕೊಂಡಿದ್ದಾನೆ. ಗಾಯಗೊಂಡ ಮುನಿರಾಜುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವನ ಮುಖಕ್ಕೆ ಗಂಭೀರ ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ತಿಳಿದು ಸ್ಥಳೀಯರು ಶಾಕ್ ಆಗಿದ್ದಾರೆ. “ಅಣ್ಣ-ತಮ್ಮಂದಿರ ನಡುವೆ ಜಗಳ ಸಾಮಾನ್ಯ. ಆದರೆ ಇಂಥಾ ಹಂತಕ್ಕೆ ಹೋಗೋದು ದುರಂತ” ಎಂದು ಸ್ಥಳೀಯರು ಪ್ರತಿಕ್ರಿಯೆ ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ತನಿಖೆ ಮುಂದುವರೆಸಿದ್ದಾರೆ. ಆರ್ಥಿಕ ಒತ್ತಡ, ಕೋಪ ಮತ್ತು ಕ್ಷಣಿಕ ನಿರ್ಧಾರಗಳು ಯಾವ ಮಟ್ಟಿಗೆ ಜೀವನವನ್ನೇ ಹಾಳು ಮಾಡಬಹುದು ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆ.
ಈ ಘಟನೆ ನಮಗೆ ಒಂದು ಪಾಠ ಕಲಿಸುತ್ತದೆ: ಕೆಟ್ಟ ಉದ್ದೇಶದಿಂದ ಮಾಡಿದ ಕೆಲಸ ಯಾವತ್ತೂ ಒಳ್ಳೆಯದಕ್ಕೆ ತಲುಪಲ್ಲ. ಇನ್ನೊಬ್ಬರಿಗೆ ಹಾನಿ ಮಾಡಬೇಕು ಅನ್ನೋ ಯೋಚನೆಯೇ ಕೊನೆಗೆ ನಮ್ಮನ್ನೇ ಸುಡುವ ಬೆಂಕಿಯಾಗುತ್ತದೆ. ಇನ್ಸ್ಟಂಟ್ ಕರ್ಮ ಅಂದ್ರೆ ಇದೆ ನೋಡಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚನೆ ಮಾಡಿ. ಒಂದು ಕ್ಷಣದ ತಪ್ಪು ನಿರ್ಧಾರ, ಇಡೀ ಜೀವನವನ್ನೇ ಬದಲಿಸಬಹುದು.