ಬೆಂಗಳೂರು ನಗರದಲ್ಲಿ ಸಾಫ್ಟ್‌ವೇರ್ ಉದ್ಯೋಗಿ ರಾಜೇಶ್ ಅವರ ಜೀವನದಲ್ಲಿ ಸಂಭವಿಸಿದ ಘಟನೆ ನಿಜಕ್ಕೂ ಮನ ಕಲಕುವಂತಿದೆ. ಕೇವಲ ಒಂದು ಬೈಕ್ ಕಳ್ಳತನವಲ್ಲ, ಅದು ಒಬ್ಬ ಯುವಕನ ಕನಸು, ಶ್ರಮ ಮತ್ತು ಭಾವನೆಗಳನ್ನೇ ಕಸಿದುಕೊಂಡ ದುರಂತವಾಗಿದೆ ಎಂದು ಹೇಳಬಹುದು. ಹೌದು “ಬೈಕ್ ಇಲ್ಲದೆ ನಿದ್ದೆ ಬರ್ತಿಲ್ಲ” ಎಂದು ಕಣ್ಣೀರು ಹಾಕಿದ ರಾಜೇಶ್ ಅವರ ಅಳಲು, ಹೃದಯ ಕೆದಕುವ ಘಟನೆ ಹೊರ ಬಿದ್ದಿದೆ.
ಹೌದು ರಾಜೇಶ್ ಅವರು ತಮ್ಮ ಇಷ್ಟದ 2022 ಮಾಡೆಲ್ ಡ್ಯೂಕ್ ಬೈಕ್ ಖರೀದಿಸಲು ನಾಲ್ಕು ಲಕ್ಷ ರೂಪಾಯಿ ಖರ್ಚುಮಾಡಿದ್ದರು. ಫೈನಾನ್ಸ್ ಮೂಲಕ ಸಾಲ ಮಾಡಿ, ತಮ್ಮ ಕನಸನ್ನು ಸಾಕಾರಗೊಳಿಸಿದ್ದರು. “ಹುಡುಗಿಗಿಂತ ಹೆಚ್ಚಾಗಿ ನೋಡ್ಕೊತ್ತಿದ್ದೆ” ಎಂದು ಹೇಳುವ ರಾಜೇಶ್, ಬೈಕ್‌ನ್ನು ತಮ್ಮ ಜೀವನದ ಭಾಗವನ್ನೇ ಮಾಡಿಕೊಂಡಿದ್ದರು. ಆದರೆ ಜನವರಿ 8ರ ಬೆಳಗ್ಗೆ, ಜಿಮ್‌ಗೆ ಹೊರಡುವಾಗ ಬೈಕ್ ಕಾಣದೆ ಹೋದ ಕ್ಷಣ, ಅವರ ಕನಸು ಚೂರಾಗಿಬಿಟ್ಟಿತು. ಮನೆ ಮುಂದಿದ್ದ ಕ್ಯಾಮರಾ ನಂಬಿಕೆ ಮೇಲೆ ಬೈಕ್ ನಿಲ್ಲಿಸುತ್ತಿದ್ದ ರಾಜೇಶ್, ಆ ಕ್ಯಾಮರಾ ವರ್ಷಗಳಿಂದ ಡೆಡ್ ಆಗಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ.
ಮನೆ ಮುಂದಿದ್ದ ಕ್ಯಾಮರಾ ನೋಡಿ ಬೈಕ್ ನೀಲ್ಸ್ತಿದ್ದೆ, ಅದು ಡೆಡ್ ಆಗೋಗಿದೆ ಎಂದು ಅಳುವ ರಾಜೇಶ್, ತಮ್ಮ ನಿರ್ಲಕ್ಷ್ಯವೇ ದೊಡ್ಡ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹೌದು ಬೈಕ್ ಕಳ್ಳತನವಾದ ತಕ್ಷಣವೇ ಗಂಗಮ್ಮ ಗುಡಿ ಪೊಲೀಸ್ ಠಾಣೆಗೆ ದೂರು ಕೊಟ್ಟ ರಾಜೇಶ್, ಪ್ರತಿದಿನ ಠಾಣೆಗೆ ಅಲೆದಾಡುತ್ತಿದ್ದಾರೆ. “ಪೊಲೀಸರು ಏನ್ ಮಾಡ್ತಿದ್ದಾರೆ ಗೊತ್ತಿಲ್ಲ” ಎಂಬ ಅಸಹಾಯಕತೆ, ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಕೆಲಸಕ್ಕೆ ಹೋಗಲು ಮನಸ್ಸೇ ಇಲ್ಲದಂತಾಗಿದೆ. “ನನಗೆ ಆದ ನೋವು ಯಾರಿಗೂ ಆಗ್ಬಾರ್ದು” ಎಂದು ಅವರು ಹೇಳಿದಾಗ, ಅವರ ಅಳಲು ಜನರ ಹೃದಯವನ್ನು ಮುಟ್ಟುತ್ತದೆ.
ರಾಜೇಶ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, “ಟ್ರ್ಯಾಕರ್ ಹಾಕದೆ ತಪ್ಪು ಮಾಡಿಬಿಟ್ಟೆ.. ನೀವು ಆ ಕೆಲಸ ಮಾಡಬೇಡಿ” ಎಂದು ಎಚ್ಚರಿಸಿದ್ದಾರೆ. ಬೈಕ್ ಕಳ್ಳತನ ಮಾತ್ರವಲ್ಲ, ಪೆಟ್ರೋಲ್ ಕಳ್ಳತನ ಕೂಡ ನಡೆಯುತ್ತಿದೆ ಎಂಬುದನ್ನು ಅವರು ತಿಳಿಸಿದರು. ಇದು ಕೇವಲ ಅವರ ನೋವಲ್ಲ, ನಮ್ಮ ಸಮಾಜದಲ್ಲಿ ಹೆಚ್ಚುತ್ತಿರುವ ಅಸುರಕ್ಷಿತ ಪರಿಸ್ಥಿತಿಯ ಪ್ರತಿಬಿಂಬ. ರಾಜೇಶ್ ಅವರ ಅಳಲು, ಕೇವಲ ಒಂದು ಬೈಕ್ ಕಳ್ಳತನದ ಕಥೆಯಲ್ಲ. ಅದು ಒಬ್ಬ ಯುವಕನ ಕನಸು, ಶ್ರಮ ಮತ್ತು ಭಾವನೆಗಳನ್ನೇ ಕಸಿದುಕೊಂಡ ಘಟನೆ.
ಬೈಕ್ ಇಲ್ಲದೆ ಜೀವನ ಖಾಲಿಯಾಗಿದೆ ಎಂದು ಅಳುವ ರಾಜೇಶ್, ತಮ್ಮ ನೋವಿನ ಮೂಲಕ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಹೌದು ಟೆಕ್ಕಿ ರಾಜೇಶ್ ಅವರ ಕಥೆ, “ನಮ್ಮ ಕನಸುಗಳನ್ನು ಕಾಪಾಡಿಕೊಳ್ಳಲು ಎಚ್ಚರಿಕೆ ಅಗತ್ಯ” ಎಂಬ ಪಾಠವನ್ನು ನೆನಪಿಸುತ್ತದೆ. ಬೈಕ್ ಕಳ್ಳತನದ ನೋವು, ಅವರ ಜೀವನದಲ್ಲಿ ಖಾಲಿತನವನ್ನು ಬಿಟ್ಟಿದೆ. ಆದರೆ ಅವರ ಅಳಲು, ಇತರರಿಗೆ ಎಚ್ಚರಿಕೆಯ ಗಂಟೆಯಾಗಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಸುತ್ತದೆ.