ರಾಜಧಾನಿ ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗಳ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಹೌದು 15ಕ್ಕೂ ಹೆಚ್ಚು ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿ ಇರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯಲ್ಲಿ ತೊಂದರೆಗಳು ಎದುರಾಗುತ್ತಿವೆ ಎನ್ನುವ ಮಾತುಗಳು ಕೇಳಿ ಬಂದಿದ್ದು ಅನೇಕ ದಿನಗಳಿಂದ, ತಿಂಗಳಿಂದಲೂ ಈ ಹುದ್ದೆಗಳು ಖಾಲಿ ಉಳಿದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಹೌದು ಅಮಾನತು, ಕಡ್ಡಾಯ ರಜೆ, ನಿವೃತ್ತಿ ಹಾಗೂ ಭಡ್ತಿಗಳ ಕಾರಣದಿಂದ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯಾಗಿವೆ. ಶಿವಾಜಿನಗರ, ಸಂಪಿಗೇಹಳ್ಳಿ, ಯಶವಂತಪುರ, ಮಲ್ಲೇಶ್ವರ, ಜ್ಞಾನಭಾರತಿ, ಬಾಗಲೂರು, ವಿವೇಕನಗರ, ಬಂಡೆಪಾಳ್ಯ, ಸದಾಶಿವನಗರ, ಡಿಜೆ ಹಳ್ಳಿ, ಕೊತ್ತನೂರು, ಜಾಲಹಳ್ಳಿ ಸೇರಿದಂತೆ ಅನೇಕ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿ ಉಳಿದಿವೆ ಎನ್ನಲಾಗುತ್ತಿದೆ.
ಟ್ರಾಫಿಕ್ ಠಾಣೆಗಳಾದ ಮಾಗಡಿ ರೋಡ್, ಮಡಿವಾಳ ಟ್ರಾಫಿಕ್ ಹಾಗೂ ಎಸಿಪಿ ಕಚೇರಿಗಳಾದ ಶೇಷಾದ್ರಿಪುರಂ, ಮಲ್ಲೇಶ್ವರ, ಕೆಜಿ ಹಳ್ಳಿ ಪ್ರದೇಶಗಳಲ್ಲಿಯೂ ಇದೇ ಸ್ಥಿತಿ ಮುಂದುವರಿದಿದೆ. ಸರ್ಕಾರವು ತಾತ್ಕಾಲಿಕವಾಗಿ ಬೇರೆ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಹೆಚ್ಚುವರಿ ಹೊಣೆ ನೀಡುವ ಮೂಲಕ ಸಮಸ್ಯೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಆದರೆ ಇದರಿಂದ ಬೇರೆ ಠಾಣೆಗಳ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ. ಒಂದೇ ವ್ಯಕ್ತಿ ಎರಡು ಠಾಣೆಗಳ ಉಸ್ತುವಾರಿ ನೋಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ. ಮತ್ತೊಂದೆಡೆ, ಇನ್ಸ್‌ಪೆಕ್ಟರ್ ಹಾಗೂ ಎಸಿಪಿಗಳ ಸಾಮಾನ್ಯ ವರ್ಗಾವಣೆಗೂ ಗ್ರಹಣ ಬಿದ್ದಿದೆ. 2.4 ವರ್ಷಗಳು ತುಂಬಿದರೂ ವರ್ಗಾವಣೆ ಪಟ್ಟಿ ಬಿಡುಗಡೆ ಆಗದೆ ಪೆಂಡಿಂಗ್ ಆಗಿದೆ.
ಮೊದಲು ಒಂದು ವರ್ಷಕ್ಕೊಮ್ಮೆ ಮಾಡಲಾಗುತ್ತಿದ್ದ ವರ್ಗಾವಣೆಯನ್ನು ನಂತರ ಎರಡು ವರ್ಷಕ್ಕೊಮ್ಮೆ ಮಾಡುವಂತೆ ನಿಯಮ ಬದಲಾಯಿಸಲಾಯಿತು. ಆದರೆ ಈಗ 2.4 ವರ್ಷ ಕಳೆದರೂ ವರ್ಗಾವಣೆ ಆಗದಿರುವುದು ಇಲಾಖೆಯೊಳಗೆ ಅಸಮಾಧಾನ ಹುಟ್ಟಿಸಿದೆ. ಪೊಲೀಸರ ಸಾಮಾನ್ಯ ವರ್ಗಾವಣೆ ಲಿಸ್ಟ್ ಬಿಡುಗಡೆಗೆ ಪದೇ ಪದೇ ತೊಡಕು ಎದುರಾಗುತ್ತಿದೆ. ಕೆಲ ರಾಜಕೀಯ ನಾಯಕರ ಮುಸುಕಿನ ಗುದ್ದಾಟ, ತಮ್ಮ ನೆಚ್ಚಿನ ಅಧಿಕಾರಿಗಳನ್ನು ಉಳಿಸಿಕೊಳ್ಳುವ ಪಟ್ಟು, ಹಾಗೂ ಇತರ ಸಮಸ್ಯೆಗಳ ಕಾರಣದಿಂದ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದರಿಂದ ಇಲಾಖೆಯೊಳಗೆ ಅಸಮಾಧಾನದ ಹೊಗೆ ಎದ್ದಿದೆ.
ಸಾಮಾನ್ಯ ವರ್ಗಾವಣೆ ಆಗದಿರುವುದರಿಂದ ಅಧಿಕಾರಿಗಳಲ್ಲಿ ನಿರಾಸೆ ಹೆಚ್ಚಾಗಿದೆ. ಒಂದೇ ಸ್ಥಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುವುದರಿಂದ ಕೆಲಸದ ಉತ್ಸಾಹ ಕುಗ್ಗುತ್ತಿದೆ. ಜನಸಾಮಾನ್ಯರ ಸೇವೆಗೆ ಬದ್ಧವಾಗಿರುವ ಪೊಲೀಸ್ ಇಲಾಖೆಯೊಳಗೆ ಈ ರೀತಿಯ ಅಸಮಾಧಾನವು ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಹೌದು ಈ ಸ್ಥಿತಿ ತಕ್ಷಣ ಸರಿಪಡಿಸಬೇಕಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ವರ್ಗಾವಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವುದು, ಹಾಗೂ ಅಧಿಕಾರಿಗಳ ಅಸಮಾಧಾನವನ್ನು ನಿವಾರಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಇಲ್ಲದಿದ್ದರೆ, ರಾಜಧಾನಿ ಬೆಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯಲ್ಲಿ ಗಂಭೀರ ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಯಾವ ರೀತಿ ಬೆಳವಣಿಗೆಗಳು ಕಾಣುತ್ತವೆ ಎಂದು ಕಾದು ನೋಡಬೇಕಾಗಿದೆ.