ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ವಿಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ, ಈ ವಿಷಯದ ಸುತ್ತ ರಾಜಕೀಯ ವಾಕ್ಸಮರ ಮಾತ್ರ ನಿಂತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರ ಪ್ರತಿಕ್ರಿಯೆಗಳ ಬಳಿಕ ಇದೀಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ. ಮೆಟ್ರೋ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಅವರು ಟ್ವಿಟ್ ಮೂಲಕ ಪ್ರತಿಕ್ರಿಯಿಸಿ, ಬೆಂಗಳೂರು ಮೆಟ್ರೋ (BMRCL) ದರ ಪರಿಷ್ಕರಣೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದು ಹೇಳಿದ್ದಾರೆ. ಮೆಟ್ರೋ ದರ ಏರಿಕೆ ಕುರಿತು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದು ತಪ್ಪು ಮತ್ತು ಅಪಪ್ರಚಾರ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಅವರ ವಿವರಣೆ ಪ್ರಕಾರ, ಮೆಟ್ರೋ ಪ್ರಯಾಣ ದರ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರವೇ ‘ದರ ನಿಗದಿ ಸಮಿತಿ’ (Fare Fixation Committee) ರಚಿಸುತ್ತದೆ. ಈ ಸಮಿತಿಯು ನೀಡುವ ಶಿಫಾರಸುಗಳ ಆಧಾರದಲ್ಲೇ ದರಗಳು ನಿಗದಿಯಾಗುತ್ತವೆ. ಈ ಪ್ರಕ್ರಿಯೆ ಸಂಪೂರ್ಣವಾಗಿ ತಾಂತ್ರಿಕವಾಗಿದ್ದು, ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ.
ದೇಶದ ಎಲ್ಲ ಮೆಟ್ರೋ ಯೋಜನೆಗಳಿಗೂ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು ಮೆಟ್ರೋ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಅದೇ ಮಂಡಳಿ ದರ ನಿಗದಿ ಸಮಿತಿಯನ್ನು ರಚಿಸುತ್ತದೆ. ಈ ಸಮಿತಿಯಲ್ಲಿ ಒಬ್ಬ ಸದಸ್ಯರನ್ನು ರಾಜ್ಯದಿಂದ, ಉಳಿದ ಇಬ್ಬರನ್ನು ಕೇಂದ್ರ ಸರ್ಕಾರವೇ ನೇಮಿಸುತ್ತದೆ. ಖರ್ಚು-ವೆಚ್ಚ, ನಿರ್ವಹಣಾ ವೆಚ್ಚ ಮತ್ತು ಇತರೆ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಸಮಿತಿ ದರ ಏರಿಕೆ ಕುರಿತು ಶಿಫಾರಸು ಮಾಡುತ್ತದೆ.
ದರ ಏರಿಕೆ ಸಮಿತಿ ಸದಸ್ಯರು ಯಾರು?
ಬೆಂಗಳೂರು ಮೆಟ್ರೋ ದರ ನಿಗದಿಗಾಗಿ ರಚಿಸಲಾದ ತ್ರಿಸದಸ್ಯ ಸಮಿತಿಯಲ್ಲಿ
ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್. ಥಾರಣಿ – ಸಮಿತಿಯ ಅಧ್ಯಕ್ಷರು
ಸತೀಂದರ್ ಪಾಲ್ ಸಿಂಗ್ – ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ
ಡಾ. ಇ.ವಿ. ರಮಣರೆಡ್ಡಿ – ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಿವೃತ್ತ ಐಎಎಸ್ ಅಧಿಕಾರಿ)
ಈ ಸಮಿತಿಯ ಶಿಫಾರಸಿನ ಮೇರೆಗೆ ಮಾತ್ರ ದರ ಏರಿಕೆ ಜಾರಿಗೆ ಬರುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇ ಇಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಸಮಿತಿಯ ಶಿಫಾರಸಿನಂತೆ, ವಾರ್ಷಿಕ ಶೇ.5ರಷ್ಟು ದರ ಏರಿಕೆ ಮಾಡಬೇಕೆಂಬ ನಿರ್ಧಾರದ ಆಧಾರದಲ್ಲಿ ಫೆಬ್ರವರಿ 9ರಿಂದ ಬಿಎಂಆರ್‌ಸಿಎಲ್ ಟಿಕೆಟ್ ದರ ಹೆಚ್ಚಳ ಜಾರಿಗೆ ಬರಬೇಕಾಗಿತ್ತು. ಆದರೆ ಸಾರ್ವಜನಿಕರಿಂದ ತೀವ್ರ ವಿರೋಧ ಮತ್ತು ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಈ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಇದೀಗ ಬಿಜೆಪಿ ನಾಯಕರು ಈ ದರ ಏರಿಕೆ ನಿರ್ಧಾರವನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಮೆಟ್ರೋ ದರ ಏರಿಕೆ ವಿಚಾರ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.