Apr 28, 2026 Languages : ಕನ್ನಡ | English

ಒಂಟಿತನವೋ ಅಥವಾ ಪ್ರೇಮ ವೈಫಲ್ಯವೋ? ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಪೂಜಾ ದತ್ತಾ ಕರಾಳ ರಹಸ್ಯ!!

ಬೆಂಗಳೂರಿನ ಆಡುಗೋಡಿಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪೂಜಾ ದತ್ತಾ ಸಾ*ವು ಕೇವಲ ಒಂದು ಅಪರಾಧದ ಪ್ರಕರಣದಂತೆ ಕಾಣುತ್ತಿಲ್ಲ. ಆಕೆಯ ಮನೆ ಮತ್ತು ಅಲ್ಲಿರುವ ವಸ್ತುಗಳು ಆಕೆ ಎಂತಹ ಪರಿಸ್ಥಿತಿಯಲ್ಲಿದ್ದಳು ಅನ್ನೋದಕ್ಕೆ ಸಾಕ್ಷಿ ನುಡಿಯುತ್ತಿವೆ. ಸದ್ಯ ಪೊಲೀಸರು ಸಿಕ್ಕಿರುವ ದಾಖಲೆಗಳನ್ನು ನೋಡಿ ದಂಗಾಗಿದ್ದಾರೆ.

ಪೂಜಾ ದತ್ತಾ ಮನೆಯೊಳಗೆ ಇತ್ತು ಪೇಪರ್‌ಗಳ ರಾಶಿ
ಪೂಜಾ ದತ್ತಾ ಮನೆಯೊಳಗೆ ಇತ್ತು ಪೇಪರ್‌ಗಳ ರಾಶಿ

ಐದಾರು ಮೂಟೆ ಕಸ, ಸಾವಿರಾರು ಚೀಟಿಗಳು!

ಪೊಲೀಸರು ಪೂಜಾ ವಾಸವಿದ್ದ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಅಕ್ಷರಶಃ ಒಂದು "ಕಸದ ಗುಡಾಣ"ವೇ ಪತ್ತೆಯಾಗಿದೆ. ಒಂದು ರೂಮಿನಲ್ಲಿ ಸುಮಾರು ಐದಾರು ದೊಡ್ಡ ಮೂಟೆಗಳಷ್ಟು ಹರಿದಿರುವ ಪೇಪರ್ ಮತ್ತು ಕಸವನ್ನು ಪೂಜಾ ತುಂಬಿಟ್ಟಿದ್ದಾಳೆ. ಯಾವುದೋ ಅತೀವವಾದ ಮಾನಸಿಕ ಗೊಂದಲ ಅಥವಾ ಖಿನ್ನತೆಯಿಂದ ಆಕೆ ಈ ರೀತಿ ಮಾಡಿರಬಹುದು ಎಂಬ ಶಂಕೆ ಈಗ ಬಲವಾಗಿದೆ. ಆಕೆ ಡ್ರಾಯಿಂಗ್ ಮಾಡಿರುವ ಮತ್ತು ಏನನ್ನೋ ಬರೆದು ಹರಿದು ಹಾಕಿರುವ ಸಾವಿರಾರು ಹಾಳೆಗಳು ಮನೆಯ ತುಂಬೆಲ್ಲಾ ಹರಡಿಕೊಂಡಿವೆ.

ಗೋಡೆಗಳ ಮೇಲೆ ಸಾ*ವಿನ ಸೀಕ್ರೆಟ್?

ಪೂಜಾ ಕೇವಲ ಪೇಪರ್ ಹರಿದು ಹಾಕಿರಲಿಲ್ಲ, ಬದಲಾಗಿ ಮನೆಯ ಗೋಡೆಗಳ ಮೇಲೂ ಹಲವು ಚೀಟಿಗಳನ್ನು ಅಂಟಿಸಿದ್ದಾಳೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದಿರುವ ಈ ಚೀಟಿಗಳಲ್ಲಿ ಏನಿದೆ ಅನ್ನೋದು ಈಗ ತನಿಖೆಯ ಪ್ರಮುಖ ಭಾಗವಾಗಿದೆ. ಪ್ರೇಮಿಯ ಹೆಸರು, ಜೀವನದ ಮೇಲಿನ ಜಿಗುಪ್ಸೆ ಅಥವಾ ಆಕೆ ಅನುಭವಿಸುತ್ತಿದ್ದ ನೋವಿನ ಬಗ್ಗೆ ಆ ಬರಹಗಳಲ್ಲಿ ಇರಬಹುದು ಎನ್ನಲಾಗುತ್ತಿದೆ. ಜೊತೆಗೆ ವಿಭಿನ್ನವಾಗಿ ಚಿತ್ರಗಳನ್ನು ಬಿಡಿಸಿ ಗೋಡೆಗೆ ಅಂಟಿಸಿಕೊಂಡಿರುವುದು ಆಕೆಯ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.

ಯುವತಿಯ ಮೃತದೇಹ ಕೊಳೆತ ಮತ್ತು ಬೆ*ತ್ತಲೆ ಸ್ಥಿತಿಯಲ್ಲಿ ಸಿಕ್ಕಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿಸಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲಸ ಬಿಟ್ಟು ಇಂತಹ ಒಂಟಿತನಕ್ಕೆ ಯಾಕೆ ಶರಣಾದಳು? ಮನೆಯ ತುಂಬಾ ಕಸ ತುಂಬಿಕೊಳ್ಳುವಂತಹ ಸ್ಥಿತಿಗೆ ಆಕೆಯನ್ನು ತಳ್ಳಿದವರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ. ಪ್ರೇಮ ವೈಫಲ್ಯ ಆಕೆಯನ್ನು ಈ ಮಟ್ಟದ ಡಿಪ್ರೆಶನ್‌ಗೆ ತಳ್ಳಿರಬಹುದೇ ಎಂಬ ಅನುಮಾನವನ್ನೂ ಪೊಲೀಸರು ತಳ್ಳಿ ಹಾಕಿಲ್ಲ.

ಆಡುಗೋಡಿ ಪೊಲೀಸರು ಈಗ ಪೂಜಾ ಅಂಟಿಸಿರುವ ಪ್ರತಿ ಚೀಟಿಯನ್ನೂ ಓದಿ ಅದರ ಸಾರಾಂಶವನ್ನು ಕಲೆಹಾಕುತ್ತಿದ್ದಾರೆ. ಆ ಚೀಟಿಗಳಲ್ಲೇ ಸಾವಿನ "ಡೆತ್ ನೋಟ್" ಅಡಗಿದೆಯೇ ಅಥವಾ ಆಕೆ ಯಾರ ಹೆಸರನ್ನಾದರೂ ಬರೆದಿಟ್ಟಿದ್ದಾಳಾ ಎಂದು ಪರಿಶೀಲಿಸುತ್ತಿದ್ದಾರೆ. ಸದ್ಯಕ್ಕೆ ಇದು ಕೇವಲ ಒಂದು ಸಾವಿನ ಪ್ರಕರಣವಾಗಿ ಉಳಿದಿಲ್ಲ, ಒಬ್ಬ ಯುವತಿಯ ಮಾನಸಿಕ ಸಂಘರ್ಷದ ಕರಾಳ ಕಥೆಯಂತೆ ಕಾಣುತ್ತಿದೆ.

Latest News