"ಮಾಡು ಇಲ್ಲವೇ ಮಡಿ" ಹೋರಾಟಕ್ಕೆ ಇಳಿದ ಬೇಳೂರು ಗೋಪಾಲಕೃಷ್ಣ - 35 ಶಾಸಕರ ಜೊತೆ ದಿಢೀರ್ ದೆಹಲಿ ಫ್ಲೈಟ್ ಏರಲು ಸಜ್ಜು!!

ಶಿವಮೊಗ್ಗ: ಮಲೆನಾಡಿನ ಗಂಡುಮೆಟ್ಟಿದ ನಾಡು ಶಿವಮೊಗ್ಗದಲ್ಲಿ ಸಾಗರ ಕ್ಷೇತ್ರದ ಕೈ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ರಾಜ್ಯ ರಾಜಕೀಯ ಹಾಗೂ ಸ್ಥಳೀಯ ಇಶ್ಯೂಗಳ ಬಗ್ಗೆ ಹಂಚಿಕೊಂಡಿರುವ ಕೆಲವು ಶಾಕಿಂಗ್ ಮತ್ತು ಖಡಕ್ ಹೇಳಿಕೆಗಳು ಈಗ ಎಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿವೆ. ಕಾಂಗ್ರೆಸ್ ಶಾಸಕರ ದೆಹಲಿ ಪ್ರವಾಸ, ಸಚಿವ ಸಂಪುಟ ಪುನಾರಚನೆ ವಿಳಂಬ ಹಾಗೂ ಬೇಸೂರು ಅಣು ವಿದ್ಯುತ್ ಸ್ಥಾವರ ವಿವಾದದ ಬಗ್ಗೆ ಬೇಳೂರು ಅವರು ನೇರವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ.

ಸಚಿವ ಸ್ಥಾನ ಕೊಡದಿದ್ರೆ ಮುಂದಿನ ತೀರ್ಮಾನ ಉಗ್ರ
ಸಚಿವ ಸ್ಥಾನ ಕೊಡದಿದ್ರೆ ಮುಂದಿನ ತೀರ್ಮಾನ ಉಗ್ರ

ಮುಖ್ಯವಾಗಿ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಅವರು, ಈ ಬಾರಿ ತಮ್ಮ ಹಕ್ಕಿಗಾಗಿ "ಮಾಡು ಇಲ್ಲವೇ ಮಡಿ" ಹೋರಾಟಕ್ಕೆ ರೆಡಿಯಾಗಿದ್ದಾರೆ!

ಈ ಬಾರಿ 'ಮಾಡು ಇಲ್ಲವೇ ಮಡಿ' ಹೋರಾಟ: 2-3 ದಿನದಲ್ಲಿ 35 ಶಾಸಕರು ಡೆಹಲಿಗೆ!

ಕಾಂಗ್ರೆಸ್ ಶಾಸಕರ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, "ಕೇರಳ ಮುಖ್ಯಮಂತ್ರಿ ಆಯ್ಕೆಯಾದ ನಂತರ ದೆಹಲಿಗೆ ಹೋಗಬೇಕು ಅಂತ ಮೊದಲೇ ಡಿಸೈಡ್ ಆಗಿತ್ತು. ಈಗ ಕೇರಳ ಸಿಎಂ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಹಾಗಾಗಿ, ಇನ್ನು ಎರಡರಿಂದ ಮೂರು ದಿನಗಳಲ್ಲಿ ನಾವೆಲ್ಲರೂ ಒಂದು ಮೀಟಿಂಗ್ ಮಾಡಿ, ಸುಮಾರು 30 ರಿಂದ 35 ಜನ ಶಾಸಕರು ಒಟ್ಟಿಗೆ ದೆಹಲಿಗೆ ಹೈಕಮಾಂಡ್ ಭೇಟಿಗೆ ಹೋಗ್ತಿದ್ದೇವೆ. ಈ ತಿಂಗಳ 28 ಅಥವಾ 29 ರೊಳಗೆ ದೆಹಲಿ ತಲುಪಲು ಪ್ಲಾನ್ ಮಾಡಿದ್ದೇವೆ. ಕಳೆದ ಬಾರಿಗಿಂತ ಈ ಸಲ ನಮ್ಮ ಜೊತೆ ಬರುವ ಶಾಸಕರ ಸಂಖ್ಯೆ ಜಾಸ್ತಿ ಇದೆ" ಎಂದಿದ್ದಾರೆ.

"ಈ ಬಾರಿ ನಮ್ಮ ತೀರ್ಮಾನ ತುಂಬಾ ಗಟ್ಟಿಯಾಗಿದೆ. ಯಾಕಂದ್ರೆ ಈಗಿನ ಸಚಿವರು ಅಧಿಕಾರಕ್ಕೆ ಬಂದು ಮೂರು ವರ್ಷ ಮುಗಿದಿದೆ. ಇದುವರೆಗೂ ಯಾರೂ ತಕರಾರು ಎತ್ತದೆ ಸುಮ್ಮನಿದ್ವಿ. ಮೊನ್ನೆ ಸಿಎಂ ಸಿದ್ದರಾಮಯ್ಯ ಕೂಡ ಸಂಪುಟ ವಿಸ್ತರಣೆ ಮಾಡ್ತೀವಿ ಅಂದಿದ್ದಾರೆ. ಅವರು 15 ಜನರನ್ನ ಕೈಬಿಡ್ತೀವಿ ಅಂದಿದ್ದಾರೆ, ಆದ್ರೆ ನಾವು 20 ಕ್ಕೂ ಹೆಚ್ಚು ಹೊಸಬರನ್ನ ತಗೋಳಿ ಅಂತ ಹೇಳಿದ್ದೇವೆ. ಈಗಿರೋ ಸಚಿವರೆಲ್ಲಾ ಮೂರು ವರ್ಷ ಅಧಿಕಾರ ಅನುಭವಿಸಿ ಸಾಕಾಗಿದೆ. ಬಹಳಷ್ಟು ದಿನ ಆಯ್ತು, ಅವರೇ ಸಚಿವರಾಗಿ ಇರಬೇಕು ಅಂತ ಏನೂ ರೂಲ್ಸ್ ಇಲ್ಲ. ಈಗಾಗಲೇ 6 ತಿಂಗಳು ಹೆಚ್ಚುವರಿಯಾಗಿಯೇ ಇದ್ದಾರೆ. ಪಕ್ಷ ಇನ್ನು ಸ್ಟ್ರಾಂಗ್ ಆಗಬೇಕಾದ್ರೆ ಬದಲಾವಣೆ ಆಗಲೇಬೇಕು. ಮುಂದಿನ 15 ದಿನಗಳಲ್ಲಿ ನಮಗೆ ಅವಕಾಶ ಕೊಡಬೇಕು, ಇಲ್ಲಾಂದ್ರೆ ನಾವು ಬಿಡಲ್ಲ. ನಮ್ಮ ಹಕ್ಕನ್ನು ನಾವು ಕೇಳ್ತಿದ್ದೀವೆ ಅಷ್ಟೇ" ಅಂತ ಗುಡುಗಿದ್ದಾರೆ.

ಇದೇ ವೇಳೆ ಸಿಎಂ ಬದಲಾವಣೆ ಮ್ಯಾಟರ್ ಬಗ್ಗೆ ಕೇಳಿದಾಗ, "ಸಿಎಂ ಬದಲಾವಣೆ ಬಗ್ಗೆ ನಮಗೆ ಗೊತ್ತಿಲ್ಲ, ನೀವೇ ಅವರನ್ನ ಕೇಳಬೇಕು. ಅದೆಲ್ಲಾ ರಾಷ್ಟ್ರೀಯ ನಾಯಕರ ಕೈಯಲ್ಲಿದೆ. ನಮಗೆ ಸಚಿವ ಸ್ಥಾನ ಕೊಡಿ ಅಂತ ನಾವು ಕೇಳ್ತೀವಿ, ಒಂದು ವೇಳೆ ಕೊಡದೇ ಹೋದ್ರೆ ನಮ್ಮ ಮುಂದಿನ ತೀರ್ಮಾನಗಳು ಉಗ್ರವಾಗಿರುತ್ತವೆ. ಅದನ್ನ ಮುಂದೆ ಹೇಳ್ತೀನಿ" ಅಂತ ಸರ್ಕಾರಕ್ಕೆ ನೇರ ವಾರ್ನಿಂಗ್ ಕೊಟ್ಟಿದ್ದಾರೆ.

ಬೇಸೂರು ಅಣು ವಿದ್ಯುತ್ ಸ್ಥಾವರ ಬಂದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ!

ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಆತಂಕ ಸೃಷ್ಟಿಸಿರುವ ಬೇಸೂರು ಅಣು ವಿದ್ಯುತ್ ಸ್ಥಾವರ (Nuclear Power Plant) ಹೋರಾಟದ ಬಗ್ಗೆ ಸಾರ್ವಜನಿಕರಿಗೆ ಧೈರ್ಯ ತುಂಬಿದ ಶಾಸಕರು, "ನಮ್ಮ ಭಾಗದ ರೈತರು ಈಗಾಗಲೇ 2-3 ಬಾರಿ ಇದರ ವಿರುದ್ಧ ಹೋರಾಟ ಮಾಡಿದ್ದಾರೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ಆಫೀಶಿಯಲ್ ಆರ್ಡರ್ ಆಗಿಲ್ಲ. ರಾಜ್ಯದ ಇತರೆ 5 ಜಿಲ್ಲೆಗಳಂತೆ ನಮ್ಮ ಜಿಲ್ಲೆಯಲ್ಲೂ ಕೇವಲ ಮಾಹಿತಿ ಕೇಳಿದ್ದಾರೆ ಅಷ್ಟೇ. ಇತ್ತೀಚೆಗೆ ಹೆಲಿಕಾಪ್ಟರ್ ಮೂಲಕ ವಿಮಾನ ಸರ್ವೆ ಮಾಡಿದ್ದು ಕೇವಲ ಖನಿಜಗಳ ಶೋಧಕ್ಕಾಗಿ, ಅದಕ್ಕೆ ಹೆದರಬೇಡಿ. ನಾನು, ಉಸ್ತುವಾರಿ ಸಚಿವರು ಎಲ್ಲರೂ ಇಲ್ಲೇ ಇದ್ದೇವೆ. ಅಣು ಸ್ಥಾವರ ಅನ್ನೋ ಹೆಸರನ್ನ ಕೇಳಿಯೇ ಜನ ಹೆದರುತ್ತಿದ್ದಾರೆ, ಆದರೆ ಯಾವುದೇ ಕಾರಣಕ್ಕೂ ಇಲ್ಲಿ ಪ್ರಾಜೆಕ್ಟ್ ಮಾಡಲು ನಾವು ಬಿಡುವುದಿಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ, ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬಂದು ಜನರ ಪರವಾಗಿ ಹೋರಾಟ ಮಾಡ್ತೇನೆ" ಎಂದು ಭಾವುಕರಾಗಿ ನುಡಿದಿದ್ದಾರೆ.

ಹರತಾಳು ಹಾಲಪ್ಪನಿಗೆ ಮಾತನಾಡುವ ಯೋಗ್ಯತೆ ಇಲ್ಲ!

ಕೊನೆಯದಾಗಿ ಹಸಿರಮಕ್ಕಿ ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ಮಾಜಿ ಶಾಸಕ ಹರತಾಳು ಹಾಲಪ್ಪ ಮಾಡಿದ ಟೀಕೆಗೆ ತಿರುಗೇಟು ನೀಡಿದ ಬೇಳೂರು, "ಹಸಿರಮಕ್ಕಿ ಸೇತುವೆ ಕೆಲಸ ಆದಷ್ಟು ಬೇಗ ಮುಗಿಯುತ್ತೆ. ಇದರ ಬಗ್ಗೆ ಮಾತನಾಡುವ ಯೋಗ್ಯತೆ ಹರತಾಳು ಹಾಲಪ್ಪನಿಗೆ ಇಲ್ಲ. ಅವರು ಶಾಸಕರಾಗಿದ್ದ 5 ವರ್ಷದ ಅವಧಿಯಲ್ಲಿ ಏನು ಕೀಳಲಿಲ್ಲ, ಕನಿಷ್ಠ ಈ ಸೇತುವೆಯನ್ನ ಬಂದು ನೋಡಿಯೂ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ನಾವೇ ಖುದ್ದಾಗಿ ಮುಖ್ಯಮಂತ್ರಿಗಳನ್ನು ಕರೆಸಿ, ಈ ಸೇತುವೆಯನ್ನು ಗ್ರ್ಯಾಂಡ್ ಆಗಿ ಉದ್ಘಾಟನೆ ಮಾಡಿಸ್ತೇವೆ" ಎಂದು ಚಾಟಿ ಬೀಸಿದ್ದಾರೆ. ಒಟ್ಟಿನಲ್ಲಿ ಬೇಳೂರು ಅವರ ಈ ಆಕ್ರೋಶದ ನುಡಿಗಳು ರಾಜ್ಯ ಕಾಂಗ್ರೆಸ್ ವಲಯದಲ್ಲಿ ಸಖತ್ ಸಂಚಲನ ಮೂಡಿಸಿರುವುದಂತೂ ನಿಜ.

Latest News