May 2, 2026 Languages : ಕನ್ನಡ | English

ಅಂದು ದಂತ ಕಳೆದುಕೊಂಡಿದ್ದ ಭೀಮ ಇಂದು ಸೇಡು ತೀರಿಸಿಕೊಳ್ತಾನಾ? ಬೇಲೂರಲ್ಲಿ ಹೈ-ವೋಲ್ಟೇಜ್ ಆನೆ ಕಾಳಗದ ಭೀತಿ!!

ಬೇಲೂರು ತಾಲ್ಲೂಕಿನ ಕೋಗೋಡು ಮತ್ತು ಶಿರಗುರ ಗ್ರಾಮಗಳ ಜನರಿಗೆ ಈಗ ರಾತ್ರಿ ನಿದ್ದೆಯಿಲ್ಲ, ಹಗಲು ನೆಮ್ಮದಿಯಿಲ್ಲ. ಈ ಭಾಗದಲ್ಲಿ ದೈತ್ಯ ಕಾಡಾನೆಗಳಾದ ಭೀಮ ಮತ್ತು ಕ್ಯಾಪ್ಟನ್ ಪ್ರತ್ಯಕ್ಷವಾಗಿವೆ. ಈ ಎರಡು ಆನೆಗಳು ಈಗ ಒಂದೇ ಜಾಗದಲ್ಲಿ ಕಾಣಿಸಿಕೊಂಡಿರುವುದು ಅರಣ್ಯ ಇಲಾಖೆಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬೇಲೂರಲ್ಲಿ ದೈತ್ಯ ಆನೆಗಳ ಹೈಡ್ರಾಮಾ
ಬೇಲೂರಲ್ಲಿ ದೈತ್ಯ ಆನೆಗಳ ಹೈಡ್ರಾಮಾ

ಮತ್ತೆ ಶುರುವಾಗುತ್ತಾ 'ದಂತ' ಯುದ್ಧ?

ಈ ಭೀಮ ಮತ್ತು ಕ್ಯಾಪ್ಟನ್ ನಡುವೆ ಹಳೆ ದ್ವೇಷವಿದೆ! ಸುಮಾರು ಆರು ತಿಂಗಳ ಹಿಂದೆ ಇದೇ ರೀತಿ ಇವೆರಡೂ ಆನೆಗಳು ಭೀಕರವಾಗಿ ಕಾದಾಡಿದ್ದವು. ಆ ಕಾಳಗ ಎಷ್ಟು ಜೋರಾಗಿತ್ತೆಂದರೆ ಕಾಡಾನೆ 'ಭೀಮ' ತನ್ನ ಒಂದು ದಂತವನ್ನೇ ಕಳೆದುಕೊಂಡಿತ್ತು. ಈಗ ಮತ್ತೆ ಇವೆರಡೂ ಆನೆಗಳಿಗೆ ಮದ ಏರಿದ್ದು, ಕಾಳಗಕ್ಕೆ ಅಣಿಯಾದಂತೆ ಕಾಣುತ್ತಿವೆ.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈಗ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದಾರೆ. ಮೈಕ್ ಮೂಲಕ ಅನೌನ್ಸ್ ಮಾಡುತ್ತಾ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ:

ರಸ್ತೆಯಲ್ಲಿ ವಾಹನ ನಿಲ್ಲಿಸಬೇಡಿ - ಕಾಡಾನೆಗಳು ಓಡಾಡುವ ದಾರಿಯಲ್ಲಿ ಅಥವಾ ರಸ್ತೆ ಬದಿಯಲ್ಲಿ ಯಾರೂ ಬೈಕ್ ಅಥವಾ ಕಾರುಗಳನ್ನು ನಿಲ್ಲಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅನಗತ್ಯವಾಗಿ ಹೊರಬರಬೇಡಿ - ತೋಟಗಳಿಗೆ ಅಥವಾ ಕಾಲುಹಾದಿಗಳಲ್ಲಿ ಒಂಟಿಯಾಗಿ ಓಡಾಡುವುದು ಅಪಾಯಕಾರಿ ಎಂದು ಎಚ್ಚರಿಸಲಾಗಿದೆ.

ಎರಡು ಆನೆಗಳ ನಡುವೆ ಮತ್ತೆ ಫೈಟ್ ನಡೆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂಬ ಆತಂಕ ಅರಣ್ಯ ಇಲಾಖೆಗಿದೆ. ಹೀಗಾಗಿ ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಹಗಲಿರುಳು ಈ ಆನೆಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ. ಅವುಗಳು ಒಂದಕ್ಕೊಂದು ಹತ್ತಿರ ಬರದಂತೆ ತಡೆಯಲು ಹರಸಾಹಸ ಪಡುತ್ತಿದ್ದಾರೆ. ಒಂದು ವೇಳೆ ಇವೆರಡೂ ಕಾಳಗಕ್ಕೆ ಇಳಿದರೆ ಅಕ್ಕಪಕ್ಕದ ರೈತರ ಬೆಳೆ ಮತ್ತು ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.

ಕೋಗೋಡು ಮತ್ತು ಶಿರಗುರ ಗ್ರಾಮಗಳ ಸುತ್ತಮುತ್ತ ಕಾಡಾನೆಗಳು ರಾಜಾರೋಷವಾಗಿ ಓಡಾಡುತ್ತಿರುವುದು ಕಂಡು ಜನ ಕಂಗಾಲಾಗಿದ್ದಾರೆ. ಅತ್ತ ಭೀಮ ಮತ್ತು ಕ್ಯಾಪ್ಟನ್ ನಡುವಿನ ಈ ಶಕ್ತಿ ಪ್ರದರ್ಶನ ಎಲ್ಲಿ ತಮ್ಮ ಪ್ರಾಣಕ್ಕೆ ಕುತ್ತು ತರುತ್ತದೋ ಎಂಬ ಭಯ ಎಲ್ಲರನ್ನೂ ಆವರಿಸಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಇದ್ದು ಪರಿಸ್ಥಿತಿ ನಿಭಾಯಿಸುತ್ತಿದ್ದರೂ, ಕಾಡಾನೆಗಳು ಯಾವಾಗ ಯಾವ ಕಡೆಯಿಂದ ಬರುತ್ತವೆ ಎಂಬುದು ಯಾರಿಗೂ ತಿಳಿಯದಂತಾಗಿದೆ.

Latest News