ಬೆಳಗಾವಿ: ಡಿಸೆಂಬರ್ 8ರಿಂದ ಡಿಸೆಂಬರ್ 19ರವರೆಗೆ ಸುವರ್ಣ ಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಸರ್ಕಾರದ ವಿರುದ್ಧ ವಿವಿಧ ಸಂಘ ಸಂಸ್ಥೆಗಳು ಬಿಸಿ ಮುಟ್ಟಿಸಲು ತಯಾರಾಗಿರುವ ಹಿನ್ನೆಲೆಯಲ್ಲಿ, ಪ್ರತಿಭಟನೆಗಳ ಸಾಲು ಸಾಲು ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ.
ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಇಂದಿನಿಂದ ಡಿಸೆಂಬರ್ 21ರವರೆಗೆ ಸುವರ್ಣ ಸೌಧದ ಸುತ್ತಮುತ್ತ 3 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಐದು ಜನಕ್ಕಿಂತ ಹೆಚ್ಚು ಮಂದಿ ಸೇರಿ ಪ್ರತಿಭಟನೆ ನಡೆಸುವುದು ನಿಷೇಧವಾಗಿದ್ದು, ಪ್ರತಿಭಟನೆ ಮಾಡಲು ಪೂರ್ವಾನುಮತಿ ಕಡ್ಡಾಯವಾಗಿದೆ.
ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಮುಂದಾದರೆ ಕೇಸ್ ದಾಖಲಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಅಧಿವೇಶನದ ಸಮಯದಲ್ಲಿ ಡ್ರೋನ್ ಬಳಕೆಗೂ ಅನುಮತಿ ಕಡ್ಡಾಯವಾಗಿದ್ದು, ಯಾವುದೇ ಅಸಮಾಧಾನಕಾರಿ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಈ ಪ್ರತಿಭಟನೆಗಳಲ್ಲಿ ಕಬ್ಬು ಬೆಳೆಗಾರರು, ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರು, ವಿವಿಧ ಕಾರ್ಮಿಕ ಸಂಘಟನೆಗಳು, ಉಪನ್ಯಾಸಕರು, ಉತ್ತರ ಕರ್ನಾಟಕ ವಿಕಾಸ ವೇದಿಕೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಹಲವು ಸಂಘಟನೆಗಳು ಭಾಗವಹಿಸಲಿವೆ.
ಸುವರ್ಣ ಸೌಧದಲ್ಲಿ ನಡೆಯಲಿರುವ ಈ ಅಧಿವೇಶನವು ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗಳ ಕೇಂದ್ರವಾಗಲಿದ್ದು, ಪ್ರತಿಭಟನೆಗಳ ತೀವ್ರತೆ ಸರ್ಕಾರಕ್ಕೆ ಸವಾಲಾಗಲಿದೆ.