ಮದುವೆ ಅಂದಮೇಲೆ ಸಾವಿರ ಕನಸುಗಳಿರುತ್ತವೆ. ಆದರೆ ಬೆಳಗಾವಿಯ ಜ್ಯೋತಿ ನಗರದ ಶ್ರೀನಿಧಿ ಎಂಬ 28 ವರ್ಷದ ಯುವತಿಯ ಬಾಳಲ್ಲಿ ಆ ಕನಸುಗಳೆಲ್ಲ ನಾಲ್ಕೇ ವರ್ಷಕ್ಕೆ ಮಣ್ಣು ಪಾಲಾಗಿವೆ. ಮನೆಯ ಮೊದಲ ಮಹಡಿಯಲ್ಲಿ ಕಿಟಿಕಿ ಗ್ರೀಲ್‌ಗೆ ವೇಲ್ ಬಿಗಿದುಕೊಂಡು ಶ್ರೀನಿಧಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈಗ ಇದು ಹತ್ಯೆಯೋ ಅಥವಾ ಆತ್ಮಹತ್ಯೆಯೋ ಎಂಬ ದೊಡ್ಡ ಚರ್ಚೆ ಶುರುವಾಗಿದೆ.
ನಡೆದಿದ್ದೇನು?
ಶ್ರೀನಿಧಿ, ಸಂತೋಷ್ ನಾವಿ ಎಂಬಾತನನ್ನು 2021ರಲ್ಲಿ ಸಂಭ್ರಮದಿಂದ ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಪುಟ್ಟ ಮಕ್ಕಳೂ ಇದ್ದಾರೆ. ಮಗಳ ಜೀವನ ಚೆನ್ನಾಗಿರಲಿ ಎಂದು ಪೋಷಕರು ಆಸೆಯಿಂದ ಮದುವೆ ಮಾಡಿಕೊಟ್ಟಿದ್ದರು. ಆದರೆ, ಸಂಸಾರ ಶುರುವಾದ ಕೆಲವೇ ದಿನಗಳಲ್ಲಿ ಗಂಡನ ಅಸಲಿ ಆಟ ಬಯಲಾಗಿದೆ. ಗಂಡ-ಹೆಂಡತಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಶುರುವಾದ ಜಗಳ, ಕೊನೆಗೆ ಜೀವ ತೆಗೆಯುವ ಮಟ್ಟಕ್ಕೆ ಹೋಗಿದೆ.
ಮೊಬೈಲ್ ಕಿತ್ತುಕೊಂಡಿದ್ದ ಪತಿ
ಪತಿ ಸಂತೋಷ್ ಮತ್ತು ಆತನ ಮನೆಯವರು ವರದಕ್ಷಿಣೆಗಾಗಿ ಶ್ರೀನಿಧಿಗೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಶ್ರೀನಿಧಿ ತನ್ನ ತವರು ಮನೆಯವರ ಜೊತೆ ಮಾತನಾಡಬಾರದು ಎಂದು ಆಕೆಯ ಮೊಬೈಲ್ ಫೋನ್ ಅನ್ನು ಕೂಡ ಕಿತ್ತುಕೊಂಡಿದ್ದರಂತೆ. ಅಪ್ಪ-ಅಮ್ಮನ ಜೊತೆ ಮಾತಾಡೋಕೂ ಬಿಡದೆ ಮನೆಯಲ್ಲಿ ಆಕೆಯನ್ನು ಹತ್ತಿಕ್ಕುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ.
ಪೋಷಕರ ಆಕ್ರೋಶ: "ಇದು ಕಿರುಕುಳಕ್ಕೆ ಬಲಿಯಾದ ಜೀವ"
"ನಮ್ಮ ಮಗಳು ಸುಮ್ಮನೆ ಪ್ರಾಣ ಕಳೆದುಕೊಳ್ಳುವವಳಲ್ಲ, ಆಕೆಯ ಗಂಡ ಮತ್ತು ಅತ್ತೆಯ ಕಿರುಕುಳವೇ ಇದಕ್ಕೆ ಕಾರಣ" ಎಂದು ಶ್ರೀನಿಧಿ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಮಗಳ ಸಾವಿಗೆ ನ್ಯಾಯ ಬೇಕು ಎಂದು ಅವರು ಬೆಳಗಾವಿ ಎಪಿಎಂಸಿ ಠಾಣೆಯ ಮೆಟ್ಟಿಲೇರಿದ್ದಾರೆ.
ದೂರಿನ ಬೆನ್ನಲ್ಲೇ ಪೊಲೀಸರು ಪತಿ ಸಂತೋಷ್‌ನನ್ನು ವಶಕ್ಕೆ ಪಡೆದಿದ್ದಾರೆ. ಕೇವಲ ಪತಿ ಮಾತ್ರವಲ್ಲದೆ, ಅತ್ತೆ ಮತ್ತು ಇನ್ನಿಬ್ಬರು ಸಂಬಂಧಿಕರ ವಿರುದ್ಧವೂ ವರದಕ್ಷಿಣೆ ಕಿರುಕುಳದ ಕೇಸ್ ದಾಖಲಾಗಿದೆ. ಒಂದು ಸುಂದರ ಸಂಸಾರದಲ್ಲಿ ಇಂತಹ ವಿರಸ ಮೂಡಿಸಿ, ಒಬ್ಬ ಯುವತಿಯ ಬಲಿ ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.
ತನಿಖೆಯಿಂದ ಹೊರಬರಬೇಕಿದೆ ಸತ್ಯ
ಒಂದು ಕಡೆ ಇಬ್ಬರು ಹಸುಗೂಸುಗಳನ್ನು ಬಿಟ್ಟು ಹೋದ ತಾಯಿಯ ಆಕ್ರಂದನ, ಇನ್ನೊಂದು ಕಡೆ ವರದಕ್ಷಿಣೆ ದಾಹದ ಆರೋಪ. ಈ ಎರಡರ ನಡುವೆ ಶ್ರೀನಿಧಿ ಸಾವಿನ ಹಿಂದಿರೋ ಅಸಲಿ ರಹಸ್ಯವೇನು? ಕಿರುಕುಳ ತಾಳಲಾರದೆ ಆಕೆ ಈ ನಿರ್ಧಾರ ತಗೊಂಡ್ರಾ ಅಥವಾ ಇದರ ಹಿಂದೆ ಬೇರೆ ಏನಾದರೂ ಸಂಚಿದೆಯೇ ಎಂಬುದು ಪೊಲೀಸರ ತನಿಖೆಯಿಂದಲೇ ಹೊರಬರಬೇಕಿದೆ.
ನಾಲ್ಕು ವರ್ಷಗಳ ಹಿಂದೆ ಅದ್ಧೂರಿಯಾಗಿ ಶುರುವಾದ ದಾಂಪತ್ಯ ಜೀವನ, ಇಂದು ಇಬ್ಬರು ಮಕ್ಕಳನ್ನು ಅನಾಥವಾಗಿಸಿ ಸ್ಮಶಾನದಲ್ಲಿ ಅಂತ್ಯವಾಗಿರೋದು ಮಾತ್ರ ವಿಧಿಯ ಆಟ. ಮಗಳನ್ನ ಕಳೆದುಕೊಂಡ ಆ ಪೋಷಕರಿಗೆ ಆದಷ್ಟು ಬೇಗ ನ್ಯಾಯ ಸಿಗಲಿ ಅನ್ನೋದೇ ಎಲ್ಲರ ಆಶಯ.