Apr 9, 2026 Languages : ಕನ್ನಡ | English

ಕೃಷ್ಣಾ ನದಿಯ ಆಳದಲ್ಲಿ ಅಡಗಿದೆಯಾ ನಿಗೂಢ ಶಕ್ತಿ? ಸರಣಿ ಸಾವಿನ ಬೆನ್ನಲ್ಲೇ ಬಯಲಾದ ಭಯಾನಕ ಸತ್ಯ!!

ರಾಜ್ಯದಲ್ಲಿ ಬಿಸಿಲಿನ ಪ್ರತಾಪ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಸುಡುವ ಸೆಖೆಯಿಂದ ಬಚಾವಾಗಲು ಮಕ್ಕಳು ಈಗ ತಂಪು ತಾಣಗಳನ್ನ ಹುಡುಕುತ್ತಿದ್ದಾರೆ. ಆದರೆ, ಇದೇ 'ತಂಪು' ಈಗ ಹಲವು ಕುಟುಂಬಗಳಲ್ಲಿ ಕಣ್ಣೀರನ್ನ ತರಿಸುತ್ತಿದೆ. ಬೇಸಿಗೆ ರಜೆ ಅಂದ್ರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ, ಆದ್ರೆ ಪೋಷಕರಿಗೆ ಮಾತ್ರ ಇದು 'ಸಜೆ'ಯಾಗಿ ಬದಲಾಗಿದೆ. ಹಳ್ಳಿಗಳಲ್ಲಿ ಮಕ್ಕಳು ತಂಡ ತಂಡವಾಗಿ ಕೆರೆ, ಕುಂಟೆ ಹಾಗೂ ನದಿಗಳಿಗೆ ಈಜಲು ಹೋಗುತ್ತಿದ್ದು, ಅಲ್ಲಿ ಅನಾಹುತಗಳು ಸಂಭವಿಸುತ್ತಿವೆ.

ಕೃಷ್ಣಾ ನದಿಯಲ್ಲಿ ಕೊನೆಯಾದ ಬಾಲಕನ ಬದುಕು
ಕೃಷ್ಣಾ ನದಿಯಲ್ಲಿ ಕೊನೆಯಾದ ಬಾಲಕನ ಬದುಕು

ಕೃಷ್ಣಾ ನದಿಯಲ್ಲಿ ಕೊನೆಯಾದ ಬಾಲಕನ ಬದುಕು

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಇಂತಹದ್ದೇ ಒಂದು ಮನ ಕಲಕುವ ಘಟನೆ ನಡೆದಿದೆ. 14 ವರ್ಷದ ನೌಮನ್ ಡೌವ್ ಎಂಬ ಬಾಲಕ ತನ್ನ ಗೆಳೆಯರೊಂದಿಗೆ ಸೇರಿ ಕುಡಚಿ ಪಟ್ಟಣದ ಪಕ್ಕದಲ್ಲೇ ಹರಿಯುವ ಕೃಷ್ಣಾ ನದಿಗೆ ಈಜಲು ಹೋಗಿದ್ದ. ಗೆಳೆಯರೊಂದಿಗೆ ನೀರಲ್ಲಿ ಆಟವಾಡುತ್ತಿದ್ದಾಗ ನೌಮನ್ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾನೆ.

ನಿನ್ನೆ ಮಧ್ಯಾಹ್ನದಿಂದ ಬಾಲಕನಿಗಾಗಿ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿದ್ದರು. ಕೊನೆಗೆ ಇಂದು ಬಾಲಕನ ಶವ ಪತ್ತೆಯಾಗಿದೆ. ಈ ಘಟನೆಯಿಂದ ಕುಡಚಿ ಪಟ್ಟಣದಲ್ಲಿ ಶೋಕದ ಛಾಯೆ ಆವರಿಸಿದ್ದು, ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರಿಲ್ ಆರಂಭದಲ್ಲೇ ಆತಂಕದ ಅಂಕಿ-ಅಂಶ

ಇನ್ನೂ ಏಪ್ರಿಲ್ ತಿಂಗಳು ಸರಿಯಾಗಿ ಶುರುವಾಗಿಲ್ಲ, ಆಗಲೇ ರಾಜ್ಯದಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ಎರಡಂಕಿ ದಾಟಿದೆ ಎಂಬುದು ನಿಜಕ್ಕೂ ಆತಂಕಕಾರಿ ವಿಷಯ. ಶಾಲೆಗೆ ರಜೆ ಇರುವುದರಿಂದ ಪೋಷಕರು ಕೆಲಸಕ್ಕೆ ಹೋದಾಗ ಅಥವಾ ಗಮನಿಸದಿದ್ದಾಗ ಮಕ್ಕಳು ಗುಂಪಾಗಿ ಹಳ್ಳ-ಕೊಳ್ಳಗಳಿಗೆ ತೆರಳುತ್ತಿದ್ದಾರೆ. ನೀರಿನ ಆಳದ ಅರಿವಿಲ್ಲದೆ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಪೋಷಕರು ಮತ್ತು ಮಕ್ಕಳು ಗಮನಿಸಬೇಕಾದ ಸಂಗತಿಗಳು

ಒಂಟಿಯಾಗಿ ಹೋಗಬೇಡಿ: ಮಕ್ಕಳು ಮೋಜಿನ ಭರಾಟೆಯಲ್ಲಿ ಸುರಕ್ಷತೆಯನ್ನ ಮರೆಯುತ್ತಿದ್ದಾರೆ. ಪೋಷಕರ ಗಮನಕ್ಕೆ ತರದೆ ನದಿಗಳಿಗೆ ಇಳಿಯುವುದು ಅಪಾಯಕಾರಿ.

ಆಳದ ಅರಿವಿರಲಿ: ನದಿ ಅಥವಾ ಕೆರೆಗಳಲ್ಲಿ ನೀರು ನೋಡುವುದಕ್ಕೆ ಶಾಂತವಾಗಿ ಕಂಡರೂ, ಒಳಗೆ ಸುಳಿ ಅಥವಾ ಹೂಳು ಇರಬಹುದು. ಈಜಲು ಬಾರದಿದ್ದರೂ ನೀರಿಗೆ ಇಳಿಯುವ ಸಾಹಸ ಬೇಡ.

ಹದ್ದಿನ ಕಣ್ಣಿರಲಿ: ಪೋಷಕರು ತಮ್ಮ ಮಕ್ಕಳು ರಜೆಯಲ್ಲಿ ಎಲ್ಲಿಗೆ ಹೋಗುತ್ತಿದ್ದಾರೆ, ಯಾರ ಜೊತೆ ಇದ್ದಾರೆ ಎಂಬುದನ್ನು ಸದಾ ಗಮನಿಸುತ್ತಿರಬೇಕು. ಹತ್ತಿರದಲ್ಲಿ ಜಲಮೂಲಗಳಿದ್ದರೆ ಮಕ್ಕಳನ್ನ ಒಬ್ಬರೇ ಬಿಡಬೇಡಿ.

ಬೇಸಿಗೆ ಕಾಲದಲ್ಲಿ ಮನೆಯಲ್ಲಿ ಸೆಖೆ ತಾಳಲಾರದೆ ಮಕ್ಕಳು ಹೊರಗೆ ಹೋಗುತ್ತೇವೆ ಎನ್ನುತ್ತಾರೆ. ಅವರನ್ನು ಕಟ್ಟಿ ಹಾಕುವುದು ಪೋಷಕರಿಗೆ ದೊಡ್ಡ ತಲೆನೋವಾಗಿದೆ. "ಮಕ್ಕಳನ್ನು ಮನೆಯಲ್ಲಿ ಇರಿಸಿಕೊಳ್ಳುವುದೇ ಒಂದು ಸಾಹಸವಾಗಿದೆ" ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ರಜೆ ಎಂದರೆ ಅದು ಜ್ಞಾನ ಬೆಳೆಸುವ ಮತ್ತು ವಿಶ್ರಾಂತಿ ಪಡೆಯುವ ಸಮಯವಾಗಬೇಕೇ ಹೊರತು, ಪ್ರಾಣಕ್ಕೆ ಸಂಚಕಾರ ತರುವ ಕಾಲವಾಗಬಾರದು. ನೀರಿನ ಮಜಾ ಜೀವಕ್ಕೆ ಹೊರೆಯಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸೋಣ. ನೌಮನ್ ಅಗಲಿಕೆಯಿಂದ ನೊಂದು ಹೋಗಿರುವ ಆತನ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಸಿಗಲಿ ಎಂದು ಹಾರೈಸೋಣ.