"ನಮ್ಮ ನೆಲದಲ್ಲಿ ನಮ್ಮ ಭಾಷೆಯೇ ಮೊದಲು" ಎನ್ನುವುದನ್ನು ಬೆಳಗಾವಿಯ ಕನ್ನಡ ಪರ ಹೋರಾಟಗಾರರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಂಕೇಶ್ವರದಿಂದ ಹುಬ್ಬಳ್ಳಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಹೊನಗಾ ಬಳಿ ಕೇವಲ ಇಂಗ್ಲಿಷ್ ಭಾಷೆಯಲ್ಲಿದ್ದ ನಾಮಫಲಕವನ್ನು ತೆರವುಗೊಳಿಸಿ, ಅಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವಂತೆ ಮಾಡುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಯಶಸ್ವಿಯಾಗಿದೆ.
ಸಂಕೇಶ್ವರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಹೊನಗಾ ಸೇತುವೆ ಹತ್ತಿರ ಇತ್ತೀಚೆಗೆ ಹೆದ್ದಾರಿ ಇಲಾಖೆಯ ಸಿಬ್ಬಂದಿಗಳು ಹೊಸದೊಂದು ಮಾಹಿತಿ ಫಲಕವನ್ನು ಅಳವಡಿಸುತ್ತಿದ್ದರು. ಆದರೆ, ಆ ಫಲಕದಲ್ಲಿ ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸಲಾಗಿತ್ತು. ಆ ದಾರಿಯಲ್ಲಿ ಸಾಗುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಾಳಪ್ಪಾ ಗುಡಗೇನಟ್ಟಿ ಅವರು ಇದನ್ನು ಗಮನಿಸಿ ತಕ್ಷಣವೇ ಸ್ಥಳದಲ್ಲೇ ವಾಹನ ನಿಲ್ಲಿಸಿ ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕದ ಭೂಮಿಯಲ್ಲಿ ಸಾಗುವ ಹೆದ್ದಾರಿಯಲ್ಲಿ ಕನ್ನಡಿಗರಿಗೆ ಅರ್ಥವಾಗದ ಭಾಷೆಯಲ್ಲಿ ಫಲಕ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಅವರು ಎತ್ತಿದರು. ಕೂಡಲೇ ಕೆಲಸ ನಿಲ್ಲಿಸುವಂತೆ ಸೂಚಿಸಿ, ಅಲ್ಲಿದ್ದ ಸಿಬ್ಬಂದಿಗಳಿಗೆ ಕನ್ನಡ ಭಾಷೆಯ ಅಸ್ಮಿತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಬಾಳಪ್ಪಾ ಅವರು ಸ್ಥಳಕ್ಕೆ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಕರೆಸಿದರು. ಸರ್ಕಾರಿ ನಿಯಮದಂತೆ ಯಾವುದೇ ಫಲಕಗಳಲ್ಲಿ ಕನಿಷ್ಠ 60% ಕನ್ನಡ ಬಳಕೆ ಇರಲೇಬೇಕು ಎಂಬ ನಿಯಮವನ್ನು ಅಧಿಕಾರಿಗಳಿಗೆ ನೆನಪಿಸಿದರು. "ನಾವು ಕನ್ನಡಿಗರು, ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಗೆ ಮೊದಲ ಆದ್ಯತೆ ಸಿಗಬೇಕು. ಇಂಗ್ಲಿಷ್ ತಿಳಿಯದ ಸಾಮಾನ್ಯ ವಾಹನ ಸವಾರರಿಗೆ ಈ ಫಲಕದಿಂದ ಏನು ಪ್ರಯೋಜನ?" ಎಂದು ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿದರು.
ಹೋರಾಟಗಾರರ ನ್ಯಾಯಯುತವಾದ ಆಗ್ರಹಕ್ಕೆ ಮಣಿದ ಹೆದ್ದಾರಿ ಅಧಿಕಾರಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡರು. "ಈಗ ಅಳವಡಿಸುತ್ತಿರುವ ಇಂಗ್ಲಿಷ್ ಫಲಕವನ್ನು ಕೂಡಲೇ ವಾಪಸ್ ಪಡೆಯುತ್ತೇವೆ. ಸರ್ಕಾರದ ನಿಯಮದಂತೆ 60 ಪ್ರತಿಶತ ಕನ್ನಡ ಭಾಷೆಯನ್ನು ಒಳಗೊಂಡಿರುವ ಹೊಸ ಫಲಕವನ್ನೇ ಇಲ್ಲಿ ಅಳವಡಿಸುತ್ತೇವೆ" ಎಂದು ಸ್ಥಳದಲ್ಲೇ ಭರವಸೆ ನೀಡಿದರು.
ತಮ್ಮ ಮನವಿಗೆ ಕೂಡಲೇ ಸ್ಪಂದಿಸಿ, ಕನ್ನಡಕ್ಕೆ ಗೌರವ ನೀಡಿದ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡದ ಉಳಿವಿಗಾಗಿ ಇಂತಹ ಸಣ್ಣ ಸಣ್ಣ ಜಾಗೃತಿಗಳು ಬಹಳ ಮುಖ್ಯವಾಗುತ್ತವೆ. ಕರವೇ ಯುವ ಸೇನೆಯ ಈ ಸಮಯಪ್ರಜ್ಞೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಅಧಿಕಾರಿಗಳು ಕೆಲಸ ಮಾಡುವಾಗ ನಿಯಮಗಳನ್ನು ಪಾಲಿಸದಿದ್ದರೆ ಸಾರ್ವಜನಿಕರು ಹಾಗೂ ಸಂಘಟನೆಗಳು ಹೀಗೆ ಎಚ್ಚರಿಸುವುದು ಅನಿವಾರ್ಯವಾಗಿದೆ.
"ನಮ್ಮೂರಿನ ದಾರಿಯಲ್ಲಿ ನಮಗೆ ದಾರಿ ತೋರಿಸುವ ಫಲಕ ನಮ್ಮ ಭಾಷೆಯಲ್ಲೇ ಇರಬೇಕು. ಕನ್ನಡವನ್ನು ಕಡೆಗಣಿಸಿದರೆ ನಾವು ಸುಮ್ಮನಿರುವುದಿಲ್ಲ. ಅಧಿಕಾರಿಗಳು ನಮ್ಮ ಮಾತಿಗೆ ಬೆಲೆ ಕೊಟ್ಟಿರುವುದು ಸಂತೋಷ ತಂದಿದೆ."