Jan 25, 2026 Languages : ಕನ್ನಡ | English

ಬೆಳಗಾವಿ ಗಡಿ ವಿವಾದ: ನಾಳೆ ಸುಪ್ರೀಂ ಕೋರ್ಟ್ ವಿಚಾರಣೆ, ಸಿಎಂ ಸಿದ್ದರಾಮಯ್ಯ ಖಡಕ್ ಸಂದೇಶ

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಸುದ್ದಿಯಲ್ಲಿದೆ. ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಈ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಯಲಿದ್ದು, ರಾಜ್ಯದ ಜನತೆ ಹಾಗೂ ರಾಜಕೀಯ ವಲಯದ ಗಮನ ಅತ್ತ ಸೆಳೆಯುತ್ತಿದೆ. 2004ರಲ್ಲಿ ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಬೆಳಗಾವಿ ಸೇರಿ 865 ಗಡಿ ಭಾಗದ ಪ್ರದೇಶಗಳನ್ನು ತಮ್ಮ ರಾಜ್ಯಕ್ಕೆ ಸೇರಿಸಬೇಕೆಂದು ಬೇಡಿಕೆ ಇಟ್ಟಿತ್ತು. 20 ವರ್ಷಗಳ ಬಳಿಕ ಈ ಅರ್ಜಿ ವಿಚಾರಣೆ ನಡೆಯುತ್ತಿರುವುದು ಮಹತ್ವದ್ದಾಗಿದೆ. ಈ ನಡುವೆ, ಮಹಾರಾಷ್ಟ್ರದ ಗಡಿ ತಂಟೆಗೆ ಸಿಎಂ ಸಿದ್ದರಾಮಯ್ಯ ಖಡಕ್ ಸಂದೇಶ ನೀಡಿದ್ದಾರೆ.

ಮಹಾರಾಷ್ಟ್ರ ಅರ್ಜಿಗೆ ಕರ್ನಾಟಕದ ಪ್ರಬಲವಾದ – ಬೆಳಗಾವಿ ಗಡಿ ವಿವಾದ ತೀವ್ರ ಚರ್ಚೆ
ಮಹಾರಾಷ್ಟ್ರ ಅರ್ಜಿಗೆ ಕರ್ನಾಟಕದ ಪ್ರಬಲವಾದ – ಬೆಳಗಾವಿ ಗಡಿ ವಿವಾದ ತೀವ್ರ ಚರ್ಚೆ

ನಿನ್ನೆಯಷ್ಟೇ ಬೆಳಗಾವಿ ನೆಲದಲ್ಲಿ ನಿಂತುಕೊಂಡು ಮಾತನಾಡಿದ ಸಿಎಂ, “ಮಹಾರಾಷ್ಟ್ರದವರಿಗೆ ಈ ಪ್ರಕರಣದಲ್ಲಿ ಯಾವುದೇ ಹಕ್ಕಿಲ್ಲ. ಗಡಿ ಗುರುತಿಸುವ ಪರಮಾಧಿಕಾರ ಸಂಸತ್ತಿಗಿದೆ. ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಇದು ಬರುವುದಿಲ್ಲ. ದೇರ್ ಈಸ್ ನೋ ಕೇಸ್” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮಾತುಗಳು ರಾಜ್ಯದ ಜನತೆಗೆ ಧೈರ್ಯ ತುಂಬುವಂತಿವೆ. ಕರ್ನಾಟಕ ಸರ್ಕಾರವು ಮಹಾರಾಷ್ಟ್ರದ ಅರ್ಜಿಗೆ ತೀವ್ರ ಆಕ್ಷೇಪಣೆ ಸಲ್ಲಿಸಿದೆ. ಗಡಿ ರೇಖೆಗಳನ್ನು ಗುರುತಿಸುವುದು ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಕರ್ನಾಟಕದ ವಾದ. ಈ ಹಿನ್ನೆಲೆಯಲ್ಲಿ, ಮೊದಲು ಅರ್ಜಿ ದಾಖಲಿಸಲು ಅವಕಾಶವಿದೆಯೇ ಇಲ್ಲವೇ ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸಬೇಕಿದೆ.

ಸಿಎಂ ಸಿದ್ದರಾಮಯ್ಯ ಅವರು, “ಕರ್ನಾಟಕದ ಪರ ಒಳ್ಳೆಯ ವಕೀಲರು ಇದ್ದಾರೆ. ನಾವು ಪ್ರಬಲವಾದಕ್ಕೆ ಸಿದ್ಧರಾಗಿದ್ದೇವೆ. ಮಹಾರಾಷ್ಟ್ರದವರಿಗೆ ಈ ಪ್ರಕರಣದಲ್ಲಿ ಯಾವುದೇ ಅವಕಾಶವಿಲ್ಲ” ಎಂದು ರಾಜ್ಯದ ಪರ ನಿಲುವು ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ ಗಡಿ ವಿವಾದವು ಕೇವಲ ಕಾನೂನು ವಿಚಾರವಲ್ಲ, ಜನರ ಭಾವನೆಗೂ ಸಂಬಂಧಿಸಿದೆ. ಮರಾಠಿ ಭಾಷಿಕರು ವಾಸಿಸುವ ಪ್ರದೇಶಗಳನ್ನೂ ಒಳಗೊಂಡಿರುವುದರಿಂದ, ಈ ವಿವಾದವು ದಶಕಗಳಿಂದ ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ. ಆದರೆ ಕರ್ನಾಟಕದ ನಿಲುವು ಸ್ಪಷ್ಟ – ಬೆಳಗಾವಿ ಮತ್ತು ಗಡಿ ಭಾಗಗಳು ಕರ್ನಾಟಕದ ಅವಿಭಾಜ್ಯ ಅಂಗ.

ನಾಳೆಯ ವಿಚಾರಣೆಗೆ ಮುನ್ನ ಸಿಎಂ ನೀಡಿದ ಖಡಕ್ ಸಂದೇಶವು ರಾಜ್ಯದ ಜನತೆಗೆ ಭರವಸೆ ನೀಡಿದೆ. “ನ್ಯಾಯಾಂಗ ವ್ಯಾಪ್ತಿಗೆ ಬರುವುದಿಲ್ಲ” ಎಂಬ ವಾದದೊಂದಿಗೆ ಕರ್ನಾಟಕ ಸರ್ಕಾರವು ತನ್ನ ಹಕ್ಕನ್ನು ಕಾಪಾಡಿಕೊಳ್ಳಲು ಸಜ್ಜಾಗಿದೆ. ಹೌದು ಒಟ್ಟಾರೆ, ಬೆಳಗಾವಿ ಗಡಿ ವಿವಾದ ವಿಚಾರಣೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಅವರ ಸ್ಪಷ್ಟ ನಿಲುವು, ರಾಜ್ಯದ ಪರ ಪ್ರಬಲವಾದಕ್ಕೆ ಸಿದ್ಧತೆ ಮತ್ತು ಜನತೆಗೆ ಧೈರ್ಯ ತುಂಬುವ ಸಂದೇಶವು ಮಹತ್ವದ ಬೆಳವಣಿಗೆಯಾಗಿದೆ.

Latest News