ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಯುವತಿಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಆರೋಪಿ ಪ್ರವೀಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ತಾಲ್ಲೂಕಿನ ಸಮಂದೂರು ಗ್ರಾಮದ 21 ವರ್ಷದ ಬಿಸಿಎ (BCA) ಪದವೀಧರೆಯೇ ಈ ವಂಚನೆಗೆ ಬಲಿಯಾದವರು. ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಈಕೆಗೆ ಕಗ್ಗಲಿಪುರದ ಪ್ರವೀಣ್ ಎಂಬಾತನ ಪರಿಚಯವಾಗಿತ್ತು. ಯುವತಿ ತನ್ನ ಡಿಗ್ರಿ ಪ್ರಾಜೆಕ್ಟ್ ಮಾಡುತ್ತಿದ್ದ ಸಮಯದಲ್ಲಿ ಆಕೆಗೆ ಸಹಾಯ ಮಾಡುವುದಾಗಿ ನಂಬಿಸಿ ಪ್ರವೀಣ್ ಹತ್ತಿರವಾಗಿದ್ದನು.
ಸ್ನೇಹ ಬೆಳೆದಂತೆಲ್ಲಾ ಆರೋಪಿ ಪ್ರವೀಣ್ ಯುವತಿಯ ಕೆಲವು ಖಾಸಗಿ ಫೋಟೋ ಮತ್ತು ವೀಡಿಯೊಗಳನ್ನು ಪಡೆದುಕೊಂಡಿದ್ದನು. ನಂತರ ತನ್ನ ಅಸಲಿ ರೂಪ ತೋರಿಸಿದ ಈತ, ಆ ಫೋಟೋಗಳನ್ನು ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಲು ಶುರುಮಾಡಿದನು. "ನಿನ್ನ ಫೋಟೋಗಳನ್ನು ಡಿಲೀಟ್ ಮಾಡಬೇಕೆಂದರೆ ನನಗೆ ಹಣ ಮತ್ತು ಚಿನ್ನ ಕೊಡಬೇಕು" ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.
ಯುವತಿಯು ಹೆದರಿ ತನ್ನ ಅಕ್ಕನ ಮದುವೆಗಾಗಿ ಮನೆಯಲ್ಲಿ ಇಟ್ಟಿದ್ದ ಸುಮಾರು 200 ಗ್ರಾಂ ಚಿನ್ನಾಭರಣ ಮತ್ತು 5 ಲಕ್ಷ ರೂಪಾಯಿ ನಗದನ್ನು ಜುಲೈ 2025 ರಿಂದ ಹಂತ ಹಂತವಾಗಿ ಪ್ರವೀಣ್‌ಗೆ ನೀಡಿದ್ದಾಳೆ. ಒಟ್ಟಾರೆ 14.5 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಆತನ ಪಾಲಾಗಿದೆ.
ಮನೆಯಲ್ಲಿ ಅಕ್ಕನ ಮದುವೆಯ ತಯಾರಿ ನಡೆಯುತ್ತಿತ್ತು. ತಂದೆ ಮುನಿಯಪ್ಪ ಅವರು ಖರ್ಚಿಗೆ ಹಣ ಬೇಕೆಂದು ಲಾಕರ್ ತೆರೆದಾಗ ಹಣ ಮತ್ತು ಚಿನ್ನಾಭರಣ ಮಾಯವಾಗಿರುವುದು ಬೆಳಕಿಗೆ ಬಂದಿದೆ. ಮಗಳನ್ನು ವಿಚಾರಿಸಿದಾಗ ಆಕೆ ನಡೆದ ಎಲ್ಲಾ ಭೀಕರ ಘಟನೆಗಳನ್ನು ವಿವರಿಸಿದ್ದಾಳೆ. ತಕ್ಷಣವೇ ತಂದೆ ಮಾರ್ಚ್ 6 ರಂದು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಪ್ರವೀಣ್‌ನನ್ನು ಬುಧವಾರ ಬಂಧಿಸಿದ್ದಾರೆ. ಈತ ಯಾವುದೇ ಕೆಲಸವಿಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ. ಆತನಿಂದ ಕೆಲವು ಒಡವೆ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಆತನ ಮೊಬೈಲ್ ಫೋನ್ ಅನ್ನು ತಪಾಸಣೆ ನಡೆಸಲಾಗುತ್ತಿದೆ.
"ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಳ್ಳುವ ಮೊದಲು ಸಾವಿರ ಬಾರಿ ಯೋಚಿಸಿ. ನಿಮ್ಮ ಖಾಸಗಿ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ" ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ಆರೋಪಿಯ ಮೇಲೆ ಸುಲಿಗೆ, ವಂಚನೆ ಮತ್ತು ನಂಬಿಕೆ ದ್ರೋಹದ ಕೇಸ್ ದಾಖಲಿಸಲಾಗಿದೆ.