May 9, 2026 Languages : ಕನ್ನಡ | English

ಎಸ್ಪಿ ಹೆಸರಲ್ಲೇ 3 ಲಕ್ಷ ವಸೂಲಿ ಮಾಡಿದ ಘಟನೆ - ಸ್ವಂತ ಸಿಬ್ಬಂದಿಯನ್ನೇ ಜೈಲಿಗಟ್ಟಿದ ದಕ್ಷ ಅಧಿಕಾರಿ ಸುಮನ್ ಪನ್ನೇಕರ್!!

ಬಳ್ಳಾರಿ: "ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?" ಎಂಬ ಗಾದೆ ಮಾತು ಬಳ್ಳಾರಿ ಪೊಲೀಸ್ ಇಲಾಖೆಯಲ್ಲಿ ಈಗ ನಿಜವಾಗಿದೆ. ಬಳ್ಳಾರಿ ಎಸ್ಪಿ ಸುಮನ್ ಪನ್ನೇಕರ್ ಅವರ ಗನ್ ಮ್ಯಾನ್ ಆಗಿದ್ದ ದೇವರಾಜ್ ಎಂಬಾತ, ಅಕ್ರಮ ಅಕ್ಕಿ ಸಾಗಣೆದಾರರನ್ನು ಹೆದರಿಸಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ ಸಿಕ್ಕಿಬಿದ್ದಿದ್ದಾನೆ. ಸ್ವತಃ ಎಸ್ಪಿಯವರೇ ಈ ಅಕ್ರಮದ ಬಗ್ಗೆ ಮಾಹಿತಿ ನೀಡಿ, ತಮ್ಮ ಗನ್ ಮ್ಯಾನ್ ಅನ್ನು ಜೈಲಿಗಟ್ಟುವ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.

ಕಾನೂನು ರಕ್ಷಕನೇ ಭಕ್ಷಕ – ಬಳ್ಳಾರಿಯಲ್ಲಿ ಶಾಕಿಂಗ್ ಘಟನೆ!!
ಕಾನೂನು ರಕ್ಷಕನೇ ಭಕ್ಷಕ – ಬಳ್ಳಾರಿಯಲ್ಲಿ ಶಾಕಿಂಗ್ ಘಟನೆ!!

ಏಪ್ರಿಲ್ 27ರ ರಾತ್ರಿ ನಡೆದಿದ್ದೇನು?

ಘಟನೆ ನಡೆದಿರುವುದು ಏಪ್ರಿಲ್ 27ರ ರಾತ್ರಿ ಮೋಕಾ ಫಾರೆಸ್ಟ್ ಹತ್ತಿರ. ಅಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡಲಾಗುತ್ತಿತ್ತು. ಈ ವಿಷಯ ತಿಳಿದ ಗನ್ ಮ್ಯಾನ್ ದೇವರಾಜ್ ಮತ್ತು ಆತನ ತಂಡ ಅಲ್ಲಿಗೆ ಎಂಟ್ರಿ ಕೊಟ್ಟಿದೆ. "ನಾವು ಎಸ್ಪಿ ಸ್ಕ್ವಾಡ್‌ನವರು, ನೀವು ಮಾಡುತ್ತಿರುವುದು ತಪ್ಪು, ಈಗಲೇ ಕೇಸ್ ದಾಖಲಿಸುತ್ತೇವೆ" ಎಂದು ಅಕ್ಕಿ ಸಾಗಿಸುತ್ತಿದ್ದ ಶರಭಯ್ಯ ಎಂಬುವವರನ್ನು ಬೆದರಿಸಿದ್ದಾರೆ.

5 ಲಕ್ಷಕ್ಕೆ ಡಿಮ್ಯಾಂಡ್, 3 ಲಕ್ಷ ವಸೂಲಿ!

ಕೇಸ್ ಹಾಕಬಾರದು ಎಂದರೆ 5 ಲಕ್ಷ ರೂಪಾಯಿ ಕೊಡಬೇಕು ಎಂದು ದೇವರಾಜ್ ಡಿಮ್ಯಾಂಡ್ ಮಾಡಿದ್ದಾನೆ. ಕೊನೆಗೆ ಮಾತುಕತೆ ನಡೆದು 3 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ಆದರೆ, ಅಕ್ರಮ ಅಕ್ಕಿ ಸಾಗಿಸುತ್ತಿದ್ದ ಶರಭಯ್ಯ ಈ ಬಗ್ಗೆ ಸುಮ್ಮನಿರದೆ ದೂರು ನೀಡಿದ್ದಾರೆ. ಈ ದೂರು ಎಸ್ಪಿಯವರ ಕೈ ಸೇರುತ್ತಿದ್ದಂತೆಯೇ ತನಿಖೆ ಚುರುಕುಗೊಂಡಿತು. ತನಿಖೆಯ ವೇಳೆ ಹಣ ಪಡೆದಿದ್ದು ಬೇರೆ ಯಾರೂ ಅಲ್ಲ, ತಮ್ಮದೇ ಗನ್ ಮ್ಯಾನ್ ದೇವರಾಜ್ ಎಂದು ತಿಳಿದು ಎಸ್ಪಿ ಅವರೇ ಶಾಕ್ ಆಗಿದ್ದಾರೆ.

ಸ್ಕ್ವಾಡ್ ಹೆಸರಲ್ಲಿ ಲೂಟಿ: ಯಾರೆಲ್ಲಾ ಅರೆಸ್ಟ್?

ಪೊಲೀಸರು ಈ ಪ್ರಕರಣದಲ್ಲಿ ಗನ್ ಮ್ಯಾನ್ ದೇವರಾಜ್ ಮತ್ತು ಆತನಿಗೆ ಸಾಥ್ ನೀಡಿದ್ದ ಸಾಯಿರಾಮ್ ಎಂಬುವವರನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಕೃತ್ಯದಲ್ಲಿ ವಕೀಲರೊಬ್ಬರಾದ ಗಾದಿಲಿಂಗ ಎಂಬುವವರು ಕೂಡ ಭಾಗಿಯಾಗಿರುವುದು ತನಿಖೆಯಲ್ಲಿ ಬಯಲಾಗಿದೆ. ಬಂಧಿತರಿಂದ ಹಣ, ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಎಸ್ಪಿಯವರ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ದೇವರಾಜ್, ಎಸ್ಪಿಯವರ ಹೆಸರನ್ನೇ ಬಳಸಿಕೊಂಡು ಈ ರೀತಿ ಲೂಟಿ ಮಾಡಿರುವುದು ಇಲಾಖೆಗೆ ದೊಡ್ಡ ಮುಜುಗರ ತಂದಿದೆ. ಸದ್ಯ ಆತನನ್ನು ಅಮಾನತು ಮಾಡಲಾಗಿದೆ.

ಎಸ್ಪಿ ಸುಮನ್ ಪನ್ನೇಕರ್ ನೀಡಿದ ಖಡಕ್ ಸ್ಪಷ್ಟನೆ

ಈ ಘಟನೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಎಸ್ಪಿ ಸುಮನ್ ಪನ್ನೇಕರ್ ಅವರು ಕೆಲವು ಪ್ರಮುಖ ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ:

  • ಯಾವುದೇ ಸ್ಕ್ವಾಡ್ ಇಲ್ಲ: ಜಿಲ್ಲೆಯಲ್ಲಿ 'ಎಸ್ಪಿ ಸ್ಕ್ವಾಡ್' ಅಥವಾ 'ಐಜಿ ಸ್ಕ್ವಾಡ್' ಎಂಬ ಯಾವುದೇ ಪ್ರತ್ಯೇಕ ತಂಡಗಳಿಲ್ಲ.
  • ದೂರು ನೀಡಿ: ಯಾರಾದರೂ ಸ್ಕ್ವಾಡ್ ಹೆಸರನ್ನು ಹೇಳಿಕೊಂಡು ಬಂದು ಹಣಕ್ಕೆ ಬೇಡಿಕೆ ಇಟ್ಟರೆ ತಕ್ಷಣ ಪೊಲೀಸರಿಗೆ ದೂರು ನೀಡಿ.
  • ಗೌಪ್ಯತೆ: ಮಾಹಿತಿ ನೀಡುವವರ ಹೆಸರನ್ನು ರಹಸ್ಯವಾಗಿಡಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

ಕಾನೂನು ರಕ್ಷಕನೇ ಭಕ್ಷಕನಾದಾಗ ಇಡೀ ಇಲಾಖೆಯ ಮೇಲೆ ಜನರಿಟ್ಟಿರುವ ನಂಬಿಕೆ ಕಡಿಮೆಯಾಗುತ್ತದೆ. ಆದರೆ, ತಮ್ಮ ಕೈ ಕೆಳಗಿನ ಸಿಬ್ಬಂದಿಯೇ ತಪ್ಪು ಮಾಡಿದರೂ ಬಿಡದೆ ಕಾನೂನು ಕ್ರಮ ಜರುಗಿಸಿದ ಎಸ್ಪಿ ಸುಮನ್ ಪನ್ನೇಕರ್ ಅವರ ಪ್ರಾಮಾಣಿಕತೆ ಮೆಚ್ಚುವಂತದ್ದು. ಬಳ್ಳಾರಿಯ ಜನರೇ, ಇನ್ಮುಂದೆ ಯಾರೇ ಬಂದು 'ಸ್ಕ್ವಾಡ್' ಅಂತ ಹೆದರಿಸಿದರೂ ಎದುರಿಸಬೇಡಿ, ನೇರವಾಗಿ ದೂರು ನೀಡಿ! 

Latest News