ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಇವತ್ತು ಬೆಳಗ್ಗೆ ಜನ ಎದ್ದಾಗ ಕಂಡ ದೃಶ್ಯ ನಿಜಕ್ಕೂ ಮೈ ಜುಂ ಎನಿಸುವಂತಿತ್ತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಮೋಹನ್ ಅವರ ಮನೆ ಗೇಟ್ ಮುಂದೆ ವಾ*ಮಾಚಾರದ ವಸ್ತುಗಳು ಪತ್ತೆಯಾಗಿವೆ. ವಿಶೇಷ ಅಂದ್ರೆ, ಬರಿ ಅಧಿಕಾರಿಯಷ್ಟೇ ಅಲ್ಲ, ಅವರ ಜೀಪ್ ಡ್ರೈವರ್ ಮೇಲೂ ಈ ಮಾಟ-ಮಂತ್ರ ಪ್ರಯೋಗ ನಡೆದಿದೆ!
ಬಾಳೆಹೊನ್ನೂರಿನಲ್ಲಿರೋ ಎಸಿಎಫ್ ಮೋಹನ್ ಅವರ ಕ್ವಾರ್ಟರ್ಸ್ ಮುಂದೆ ಈ ಘಟನೆ ನಡೆದಿದೆ. ಕಿಡಿಗೇಡಿಗಳು ಮಧ್ಯರಾತ್ರಿ ಹೊಂಚು ಹಾಕಿ ಬಂದು, ಅಧಿಕಾರಿ ಮೋಹನ್ ಮತ್ತು ಅವರ ಜೀಪ್ ಚಾಲಕನ ಫೋಟೋಗಳನ್ನು ಮಣ್ಣಿನ ಮಡಕೆಯೊಳಗೆ ಇಟ್ಟಿದ್ದಾರೆ. ಅದಕ್ಕೆ ಅರಿಶಿನ-ಕುಂಕುಮ ಹಚ್ಚಿ, ಯಾವುದೋ ಪೂಜೆ ಮಾಡಿದ ರೀತಿ ಮಡಕೆಯನ್ನು ಗೇಟ್ ಮುಂಭಾಗದಲ್ಲೇ ಹೊಡೆದು ಹಾಕಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಅಧಿಕಾರಿ ಮತ್ತು ಡ್ರೈವರ್ ಇಬ್ಬರೂ ಶಾಕ್ ಆಗಿದ್ದಾರೆ.
ಸ್ವಂತ ಸಿಬ್ಬಂದಿ ಮೇಲೆಯೇ ಡೌಟು
ಮಾಟ-ಮಂತ್ರದ ಬಗ್ಗೆ ಎಸಿಎಫ್ ಮೋಹನ್ ಅವರು ಸುಮ್ಮನೆ ಕೂತಿಲ್ಲ. ತಕ್ಷಣವೇ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಈ ದೂರಿನಲ್ಲಿ ಒಂದು ದೊಡ್ಡ ಟ್ವಿಸ್ಟ್ ಇದೆ. ಅರಣ್ಯ ಇಲಾಖೆಯ ಕಚೇರಿಯಲ್ಲಿ ಕೆಲಸ ಮಾಡೋ ಸಿಬ್ಬಂದಿಯೇ ಈ ಕೃತ್ಯ ಎಸಗಿರಬಹುದು ಅಂತ ಮೋಹನ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕಚೇರಿಯಲ್ಲಿ ಏನಾದರೂ ಕೆಲಸದ ವಿಚಾರಕ್ಕೆ ಗಲಾಟೆ ಆಗಿತ್ತಾ? ಅಥವಾ ಯಾರಾದರೂ ಸೇಡು ತೀರಿಸಿಕೊಳ್ಳಲು ಈ ದಾರಿ ಹಿಡಿದಿದ್ದಾರಾ? ಅನ್ನೋದು ಈಗ ತನಿಖೆಯ ವಿಷಯ.
ಡ್ರೈವರ್ ಯಾಕೆ ಟಾರ್ಗೆಟ್?
ಸಾಮಾನ್ಯವಾಗಿ ಅಧಿಕಾರಿಗಳ ಮೇಲೆ ಯಾರಾದರೂ ಸಿಟ್ಟಿದ್ದರೆ ಅವರ ಮೇಲೆ ಮಂತ್ರ ಹಾಕಿಸೋದು ಕೇಳಿದ್ದೇವೆ. ಆದರೆ ಇಲ್ಲಿ ಅಧಿಕಾರಿಯ ಜೊತೆಗೆ ಪಾಪ ಆ ಜೀಪ್ ಡ್ರೈವರ್‌ನ ಫೋಟೋವನ್ನೂ ಮಡಕೆ ಒಳಗೆ ಇಟ್ಟಿರೋದು ಎಲ್ಲರ ಹುಬ್ಬೇರಿಸಿದೆ. "ಅಧಿಕಾರಿ ಜೊತೆ ಅವನೂ ಸದಾ ಇರುತ್ತಾನೆ" ಅನ್ನೋ ಕಾರಣಕ್ಕೆ ಡ್ರೈವರ್ ಅನ್ನು ಕೂಡ ಟಾರ್ಗೆಟ್ ಮಾಡಿರಬಹುದು ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಪೊಲೀಸ್ ತನಿಖೆ ಶುರು
ಪ್ರಸ್ತುತ ಬಾಳೆಹೊನ್ನೂರು ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ರಾತ್ರಿ ಹೊತ್ತು ಮಡಕೆ ಹಿಡಿದು ಬಂದವರು ಯಾರು? ಇಲಾಖೆಯ ಸಿಬ್ಬಂದಿಗೂ ಇದಕ್ಕೂ ಏನಾದರೂ ಸಂಬಂಧ ಇದೆಯಾ? ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.
ಮಲೆನಾಡಿನ ಈ ಜಿಲ್ಲೆಯಲ್ಲಿ ಈಗ ವಾಮಾಚಾರದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ವಿಜ್ಞಾನ ಯುಗದಲ್ಲಿ ಇದ್ದರೂ ಇನ್ನೂ ಇಂತಹ "ಮಾಟ-ಮಂತ್ರ"ಗಳನ್ನ ನಂಬಿ ಜನ ಬೇರೆಯವರಿಗೆ ಕೆಟ್ಟದ್ದು ಮಾಡೋಕೆ ಹೋಗ್ತಿರೋದು ನಿಜಕ್ಕೂ ಬೇಸರದ ಸಂಗತಿ. ಆ ಮಡಕೆ ಹೊಡೆದವರು ಯಾರು ಅನ್ನೋದನ್ನ ಪೊಲೀಸರು ಯಾವಾಗ ಪತ್ತೆ ಹಚ್ಚುತ್ತಾರೆ ಅಂತ ಕಾದು ನೋಡಬೇಕು.