ನಮಸ್ಕಾರ ಗೆಳೆಯರೇ, ಪ್ರೀತಿ ಅನ್ನೋದು ಬದುಕನ್ನು ರೂಪಿಸಬೇಕೇ ಹೊರತು ಬಲಿಯಾಗಬಾರದು. ಆದರೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನಡೆದ ಒಂದು ಘಟನೆ ಇಡೀ ಜಿಲ್ಲೆಯನ್ನೇ ಕಂಗಾಲು ಮಾಡಿದೆ. ಒಬ್ಬರಿಲ್ಲದೆ ಒಬ್ಬರು ಇರಲಾರೆವು ಎಂದು ಶಪಥ ಮಾಡಿದ್ದ ಜೋಡಿ, ಈಗ ಒಬ್ಬರ ಹಿಂದೆ ಒಬ್ಬರು ಎಂಬಂತೆ ಸಾವಿನ ಹಾದಿ ಹಿಡಿದಿದ್ದಾರೆ. ಕ್ಷಣಿಕ ಕೋಪ ಇಬ್ಬರು ಯುವಜೀವಿಗಳನ್ನು ಬಲಿ ಪಡೆದಿದೆ.
ಏನಿದು ಘಟನೆ?
ಈ ದಾರುಣ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು 19 ವರ್ಷದ ಪವಿತ್ರಾ ಮತ್ತು 20 ವರ್ಷದ ಕಾರ್ತಿಕ್. ಕಾರ್ತಿಕ್ ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದ ನಿವಾಸಿಯಾಗಿದ್ದರೆ, ಪವಿತ್ರಾ ಬನಹಟ್ಟಿ ನಗರದ ಕೆಎಚ್‌ಡಿಸಿ (KHDC) ಕಾಲೋನಿಯಲ್ಲಿ ವಾಸವಾಗಿದ್ದರು. ಇಬ್ಬರೂ ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಮೊನ್ನೆ ಇವರಿಬ್ಬರ ನಡುವೆ ಒಂದು ಸಣ್ಣ ವಿಷಯಕ್ಕೆ ಜೋರು ಜಗಳ ನಡೆದಿದೆ.
ಸಾಮಾನ್ಯವಾಗಿ ಪ್ರೇಮಿಗಳ ನಡುವೆ ಜಗಳ ಆಗೋದು ಸಹಜ, ಆದರೆ ಇಲ್ಲಿ ಆ ಜಗಳ ವಿಕೋಪಕ್ಕೆ ಹೋಗಿದೆ. ಜಗಳದಿಂದ ಮನನೊಂದ ಪವಿತ್ರಾ, ತನ್ನ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ನೇ*ಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರೇಯಸಿ ಸಾವಿನ ಸುದ್ದಿ ಕೇಳಿ ಪ್ರೇಮಿಯೂ ಬಲಿ!
ಪವಿತ್ರಾ ಸಾವನ್ನಪ್ಪಿದ್ದಾಳೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕಾರ್ತಿಕ್ ಕೂಡ ಅಕ್ಷರಶಃ ಕುಸಿದು ಹೋಗಿದ್ದಾನೆ. ತನ್ನಿಂದಲೇ ಪವಿತ್ರಾ ಈ ನಿರ್ಧಾರ ತಗೊಂಡಳು ಅಥವಾ ಅವಳಿಲ್ಲದೆ ನಾನು ಬದುಕಲಾರೆ ಎಂಬ ಭಾವನೆಯಿಂದ ಕಾರ್ತಿಕ್ ಕೂಡ ಅಸಂಗಿ ಗ್ರಾಮದಲ್ಲಿ ನೇ*ಣಿಗೆ ಶರಣಾಗಿದ್ದಾನೆ. ಅತ್ತ ಹುಡುಗಿ ಸತ್ತ ಕೆಲವೇ ಹೊತ್ತಿನಲ್ಲಿ ಇತ್ತ ಹುಡುಗನೂ ಹೆಣವಾಗಿದ್ದಾನೆ. ಈ ಇಬ್ಬರೂ ಯುವ ಪ್ರೇಮಿಗಳ ಸಾವು ಈಗ ಅಸಂಗಿ ಮತ್ತು ಬನಹಟ್ಟಿ ನಗರದಲ್ಲಿ ಸೂತಕದ ಛಾಯೆ ಮೂಡಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಬನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮುಂದಿನ ಪ್ರಕ್ರಿಯೆ ನಡೆಯಲಿದೆ.
ಯುವಜನತೆಯ ಗಮನಕ್ಕೆ..
ಗೆಳೆಯರೇ, ಜೀವನದಲ್ಲಿ ಜಗಳ, ಭಿನ್ನಾಭಿಪ್ರಾಯ ಅನ್ನೋದು ಎಲ್ಲರಿಗೂ ಇರುತ್ತೆ. ಆದರೆ ಪ್ರೀತಿಯ ಹೆಸರಿನಲ್ಲಿ ಇಂತಹ ಕಠಿಣ ನಿರ್ಧಾರ ತಗೊಳ್ಳೋದು ಎಷ್ಟು ಸರಿ? ಹತ್ತೊಂಬತ್ತು-ಇಪ್ಪತ್ತರ ವಯಸ್ಸು ಅಂದ್ರೆ ಅದು ಬದುಕನ್ನು ಕಟ್ಟಿಕೊಳ್ಳಬೇಕಾದ ಸಮಯ. ಒಂದು ಕ್ಷಣದ ಸಿಟ್ಟು ಅಥವಾ ಬೇಸರಕ್ಕೆ ಬಲಿಯಾಗಿ ನಿಮ್ಮನ್ನು ನಂಬಿದ ಹೆತ್ತವರನ್ನು ಬೀದಿಗೆ ತರುವುದು ಸರಿಯೇ?
ಪ್ರೀತಿ ಅನ್ನೋದು ಒಬ್ಬರಿಗೊಬ್ಬರು ಬಲವಾಗಬೇಕೇ ಹೊರತು ಬದುಕನ್ನೇ ಮುಗಿಸಬಾರದು. ಸಣ್ಣ ಜಗಳಗಳಾದಾಗ ಕೂತು ಮಾತನಾಡಿ ಬಗೆಹರಿಸಿಕೊಳ್ಳೋದು ಅಥವಾ ದೊಡ್ಡವರ ಸಹಾಯ ತಗೊಳ್ಳೋದು ಮುಖ್ಯ. ಭಾವೋದ್ರೇಕಕ್ಕೆ ಒಳಗಾಗಿ ಜೀವ ಕಳೆದುಕೊಳ್ಳುವುದು ಯಾವ ಸಮಸ್ಯೆಗೂ ಪರಿಹಾರವಲ್ಲ. ಈ ಜೋಡಿಯ ಸಾವು ಈಗ ಆ ಎರಡು ಕುಟುಂಬಗಳಿಗೆ ಎಂದಿಗೂ ಮರೆಯಲಾಗದ ಘಾಸಿ ಉಂಟುಮಾಡಿದೆ.
ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ. ಯುವಜನತೆಗೆ ನಿಮ್ಮದೊಂದು ಕಿವಿಮಾತು ಇರಲಿ.