ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಮೂರು ಅಂಗಡಿಗಳಿವೆ ಎಂದ ಕಾರಜೋಳ - ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆ!!

ಬಾಗಲಕೋಟೆಯಲ್ಲಿ ಸಂಸದ ಗೋವಿಂದ ಕಾರಜೋಳ ತೀವ್ರ ಟೀಕೆಗಳನ್ನು ಸರ್ಕಾರದ ವಿರುದ್ಧ ಹೊರಹಾಕಿದ್ದಾರೆ. “ರಾಜ್ಯದಲ್ಲಿ ಭ್ರಷ್ಟಾಚಾರದ ಜಾತ್ರೆ ನಡೆಯುತ್ತಿದೆ. ಮೂರು ವರ್ಷಗಳಲ್ಲಿ ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ” ಎಂದು ಅವರು ಆರೋಪಿಸಿದರು. ಸ್ವಜನ ಪಕ್ಷಪಾತ ಮಿತಿ ಮೀರಿದ ದುರಾಡಳಿತ ನಡೆಯುತ್ತಿದೆ ಎಂದು ಅವರು ಹೇಳಿದರು.

ಹೆಣ್ಮಕ್ಕಳಿಗೆ ರಕ್ಷಣೆ ಇಲ್ಲ – ಸರ್ಕಾರದ ವಿರುದ್ಧ ಕಾರಜೋಳ ಅಸಮಾಧಾನ
ಹೆಣ್ಮಕ್ಕಳಿಗೆ ರಕ್ಷಣೆ ಇಲ್ಲ – ಸರ್ಕಾರದ ವಿರುದ್ಧ ಕಾರಜೋಳ ಅಸಮಾಧಾನ

ಕಾರಜೋಳ ಅವರ ಮಾತಿನಲ್ಲಿ, ಹೆಣ್ಮಕ್ಕಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಅ*ತ್ಯಾಚಾರ ಮತ್ತು ಜೀವಹಾನಿ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೂ ನಿಂದಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. “ಇಂತಹ ಕೆಟ್ಟ ದುರಾಡಳಿತ ಮಾಡುವ ಸರ್ಕಾರ ಇರಬಾರದು ಎಂದು ಜನ ಶಾಪ ಹಾಕುತ್ತಿದ್ದಾರೆ” ಎಂದು ಅವರು ಹೇಳಿದರು.

ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಬೆಂಬಲ ನೀಡುತ್ತಿರುವುದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರಿಗೆ ಸೋನಿಯಾ ಗಾಂಧಿ ಬೆಂಬಲ ನೀಡುತ್ತಿರುವುದು, ಎರಡೂ ಕಡೆ ಅಧಿಕಾರದ ಹೋರಾಟ ನಡೆಯುತ್ತಿದೆ ಎಂದು ಕಾರಜೋಳ ಟೀಕಿಸಿದರು. “ಕರ್ನಾಟಕ ಜನತೆ, ಆಡಳಿತ, ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಕಳಕಳಿ ಇಲ್ಲ. ಕುರ್ಚಿಗಾಗಿ ಮೂರು ಗುಂಪುಗಳಾಗಿ ಕಾದಾಟ ನಡೆಸುತ್ತಿದ್ದಾರೆ. ಈ ಸರ್ಕಾರ ನೀರ ಮೇಲಿನ ಗುಳ್ಳೆಯಂತಿದೆ, ಯಾವಾಗ ಮುಳುಗುತ್ತದೋ ಗೊತ್ತಿಲ್ಲ” ಎಂದು ಅವರು ವ್ಯಂಗ್ಯವಾಡಿದರು.

ಬಜೆಟ್ ನಂತರ ಕಾಂಗ್ರೆಸ್‌ನಲ್ಲಿ ಅಸಮದಾನ ಸ್ಫೋಟವಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರಜೋಳ, “ಅದು ಸಾಧ್ಯವಿಲ್ಲ. ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಮೂರು ಅಂಗಡಿಗಳಂತೆ ಅಧಿಕಾರ ಹಂಚಿಕೊಂಡಿದ್ದಾರೆ. ಸೋನಿಯಾ ಗಾಂಧಿಯವರದು ಒಂದು ಅಂಗಡಿ, ರಾಹುಲ್ ಗಾಂಧಿಯವರದು ಒಂದು ಅಂಗಡಿ, ಅಖಿಲ ಭಾರತ ಕಾಂಗ್ರೆಸ್ ಪದಾಧಿಕಾರಿಗಳದು ಒಂದು ಅಂಗಡಿ. ಇವರಿಗೆ ವ್ಯಾಪಾರ ಆಗುತ್ತೆ ಮಾತ್ರ, ಜನರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ” ಎಂದು ಹೇಳಿದರು.

ರಾಜ್ಯಪಾಲರ ವಿರುದ್ಧ ನಡೆದ ಘಟನೆಗಳ ಬಗ್ಗೆ ಮಾತನಾಡಿದ ಅವರು, “ರಾಜ್ಯಪಾಲರನ್ನು ತಡೆಯುವುದು ಇವರೆಗೂ ಎಲ್ಲೂ ಆಗಿರಲಿಲ್ಲ. ರಾಜ್ಯಪಾಲರಿಗೂ ಗೌರವ ಕೊಡದಿರುವವರು ಶಾಸನಬದ್ಧ ಆಡಳಿತ ನಡೆಸಲು ಸಾಧ್ಯವಿಲ್ಲ. ಗೂಂಡಾ ವರ್ತನೆ ಮಾಡುವುದು ಸರಿಯಲ್ಲ” ಎಂದು ಟೀಕಿಸಿದರು.

ಬಾಗಲಕೋಟೆ ಬಿಜೆಪಿ ಒಳಗಿನ ಭಿನ್ನಮತದ ಬಗ್ಗೆ ಮಾತನಾಡಿದ ಕಾರಜೋಳ, “ಅದಕ್ಕಾಗಿಯೇ ನಿನ್ನೆ ಸಭೆ ನಡೆಸಿದ್ದೇವೆ. ಮತದಾರರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ನಾವು ಎಲ್ಲರೂ ಒಟ್ಟಿಗೆ ಇದ್ದೇವೆ ಎಂದು ಘೋಷಿಸಿದ್ದೇವೆ. ಈ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಗೆದ್ದೇ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest News