ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಹಾವೇರಿ ಉತ್ತರ ಕರ್ನಾಟಕ ಶಿವಶರಣರ ಶ್ರೀ ಅಲ್ಲಮಪ್ರಭು ಅಹಿಂದ ಗುರುಪೀಠ ಪೀಠಾಧ್ಯಕ್ಷ ಮಹೇಶ್ವರಾನಂದ ಸ್ವಾಮೀಜಿ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕಿಡಿಕಾರಿದ್ದು, ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಸ್ವಾಮೀಜಿ ತಮ್ಮ ಭಾಷಣದಲ್ಲಿ ಯತ್ನಾಳರನ್ನು ಸೋಲಿಸಲು ಶ್ರೀ ಸಿದ್ಧೇಶ್ವರ ಸ್ವಾಮೀಜಿಯ ಮೇಲೆ ಶಪತ (ಆಣೆ) ಮಾಡಿರುವುದಾಗಿ ಘೋಷಿಸಿದರು. ಜೊತೆಗೆ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಬೇಕಿತ್ತು ಎಂದು ಅಭಿಪ್ರಾಯಪಟ್ಟರು. “ಕೆಂಪೇಗೌಡ ಎಂಬ ಹೆಸರನ್ನು ಇಟ್ಟಿದ್ದಾರೆ, ನಮಗೆ ತೊಂದರೆಯಿಲ್ಲ. ಆದರೆ ರಾಜ್ಯದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದರೆ ಅದಕ್ಕೆ ಟಿಪ್ಪು ಸುಲ್ತಾನ್ ಹೆಸರು ಇರಬೇಕು” ಎಂದು ಸಿದ್ಧರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಸ್ವಾಮೀಜಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಅವರು ಬಿಜೆಪಿ ನಾಯಕರನ್ನು “ಯಹೂದಿಗಳು” ಎಂದು ಉಲ್ಲೇಖಿಸಿ ಟೀಕಿಸಿದರು. ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ಕೇವಲ 66 ಲಕ್ಷ ಇದ್ದರೂ 59 ಜನ ಶಾಸಕರಿದ್ದಾರೆ, ಆದರೆ ಒಂದು ಕೋಟಿ ಮುಸ್ಲಿಂ ಜನಸಂಖ್ಯೆಯಿಂದ ಕೇವಲ 10 ಜನ ಶಾಸಕರಿದ್ದಾರೆ ಎಂದು ಅಂಕಿ–ಅಂಶಗಳನ್ನು ಹಂಚಿಕೊಂಡರು. ಮುಂದಿನ ಚುನಾವಣೆಯಲ್ಲಿ ಕನಿಷ್ಠ 30 ಜನ ಮುಸ್ಲಿಂ ಶಾಸಕರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಗಂಗಾವತಿ, ವಿಜಯಪುರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಸೋಲಿಸಲಾಗುತ್ತಿದೆ ಎಂದು ಆರೋಪಿಸಿದ ಸ್ವಾಮೀಜಿ, ಯತ್ನಾಳರನ್ನು ಬೆಂಬಲಿಸುವ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದರು. ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯ ಆಣೆಗೆ ಹಮೀದ್ ಮುಷರಫಿ ಅವರನ್ನು ಸೋಲಿಸುವವರನ್ನೇ ನಾವು ಸೋಲಿಸುತ್ತೇವೆ ಎಂದು ಘೋಷಿಸಿದರು.
ಸ್ವಾಮೀಜಿ ತಮ್ಮ ಭಾಷಣದಲ್ಲಿ ನಟ ಶಾರುಖ್ ಖಾನ್ ಟಿಪ್ಪು ಸುಲ್ತಾನ್ ಕುರಿತು ಚಿತ್ರ ಮಾಡಬೇಕೆಂದು ಮನವಿ ಮಾಡಿದರು. ಟಿಪ್ಪು ಸುಲ್ತಾನ್ ಹಾಗೂ ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಹೋಲಿಸಿ, “ಟಿಪ್ಪು ಸುಲ್ತಾನ್ ತಮ್ಮ ಕಾಲದಲ್ಲಿ ರಾಕೆಟ್ ಕಂಡುಹಿಡಿದರು, ಅಬ್ದುಲ್ ಕಲಾಂ ನ್ಯೂಕ್ಲಿಯರ್ ಕಂಡುಹಿಡಿದರು. ಇಬ್ಬರೂ ದೇಶಕ್ಕೆ ಶಕ್ತಿ ತುಂಬಿದರು” ಎಂದು ಹೇಳಿದರು.
ಸಿದ್ಧರಾಮಯ್ಯ ಸರ್ಕಾರ ದ್ವೇಷ ಭಾಷಣ ತಡೆ ಮಸೂದೆ ತಂದಿರುವುದನ್ನು ಉಲ್ಲೇಖಿಸಿದ ಸ್ವಾಮೀಜಿ, “ಇನ್ನು ದ್ವೇಷ ಭಾಷಣ ನಡೆಯುವುದಿಲ್ಲ. ಮಾಡಿದರೆ ಶಿಕ್ಷೆ” ಎಂದು ಯತ್ನಾಳರಿಗೆ ಪರೋಕ್ಷವಾಗಿ ವಾರ್ನಿಂಗ್ ನೀಡಿದರು.
ಅವರು ದೇಶದ ಜನಸಂಖ್ಯೆಯ ಅಂಕಿ–ಅಂಶಗಳನ್ನು ಹಂಚಿಕೊಂಡು, “ದೇಶದಲ್ಲಿ 30 ಕೋಟಿ ಮುಸ್ಲಿಂ, 30 ಕೋಟಿ ದಲಿತ, 80 ಕೋಟಿ ಓಬಿಸಿ ಸೇರಿ ಒಟ್ಟು 97 ಶೇಕಡಾ ಜನರಿದ್ದಾರೆ. ಆದರೆ 3 ಶೇಕಡಾ ಯಹೂದಿಗಳು ದೇಶವನ್ನು ಬಿಗಡಾಯಿಸುತ್ತಿದ್ದಾರೆ” ಎಂದು ಕಿಡಿಕಾರಿದರು. ಜಮಖಂಡಿ ಸರ್ವಧರ್ಮ ಸಮ್ಮೇಳನದಲ್ಲಿ ನೀಡಿದ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.