ರೈಲಿನಲ್ಲಿ ಮಹಿಳೆ ಕೆನ್ನೆಗೆ ಬಾರಿಸಿದ ಭೂಪ - ಅಸಭ್ಯ ಸನ್ನೆ ಪ್ರಶ್ನಿಸಿದ್ದಕ್ಕೆ ಕಪಾಳಮೋಕ್ಷ ಮಾಡಿದ ಕಿಡಿಗೇಡಿ!! ವಿಡಿಯೋ;

ಭಾರತೀಯ ರೈಲ್ವೆ ಅಂದಮೇಲೆ ಅದು ಜನಸಾಮಾನ್ಯರ ಜೀವನಾಡಿ. ಆದರೆ ಅದೇ ರೈಲಿನಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಇತ್ತೀಚೆಗೆ ಬಿಹಾರದ ಆರಾ (Ara) ಎಂಬ ಪ್ರದೇಶದ ಹತ್ತಿರ ನಡೆದ ಘಟನೆಯೊಂದು ಇಡೀ ದೇಶದ ಗಮನ ಸೆಳೆದಿದೆ. ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಧೈರ್ಯವಾಗಿ ಪ್ರಶ್ನಿಸಿದ ಮಹಿಳೆಗೆ ಸಿಕ್ಕ ಪ್ರತಿಫಲ ಮಾತ್ರ ಬಹಳ ಕಹಿ ಮತ್ತು ಆಘಾತಕಾರಿ.

ಆರಾ ರೈಲು ಘಟನೆ – ಮಹಿಳೆಯರ ಸುರಕ್ಷತೆ ಪ್ರಶ್ನೆ! | Photo Credit: https://x.com/azizkavish
ಆರಾ ರೈಲು ಘಟನೆ – ಮಹಿಳೆಯರ ಸುರಕ್ಷತೆ ಪ್ರಶ್ನೆ! | Photo Credit: https://x.com/azizkavish

ನಡೆದದ್ದೇನು? ಇಲ್ಲಿದೆ ಕಂಪ್ಲೀಟ್ ವಿವರ;

ಘಟನೆ ನಡೆದದ್ದು ಮೇ 3ರಂದು. ಸ್ವೀಟಿ ರಜಪೂತ್ ಎಂಬ ಮೇಕಪ್ ಆರ್ಟಿಸ್ಟ್ ತನ್ನ ಗೆಳೆಯರೊಂದಿಗೆ ಪಾಟ್ನಾದಿಂದ ವಾಪಸ್ ಆಗುತ್ತಿದ್ದರು. ರೈಲು ಪ್ರಯಾಣದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಸ್ವೀಟಿ ಅವರತ್ತ ನೋಡಿ ಅಸಭ್ಯ ಸನ್ನೆಗಳನ್ನು ಮಾಡಿದ್ದಾನೆ. ಇದನ್ನು ಸುಮ್ಮನೆ ನೋಡಿ ಸಹಿಸಿಕೊಳ್ಳದ ಸ್ವೀಟಿ, ಆತನ ಬಳಿ ಹೋಗಿ ನೇರವಾಗಿ "ಏಕೆ ಹೀಗೆ ಮಾಡ್ತಿದ್ದೀಯಾ?" ಎಂದು ಪ್ರಶ್ನಿಸಿದ್ದಾರೆ.

ಆದರೆ ಅಲ್ಲಿ ನಡೆದದ್ದೇ ಬೇರೆ! ತಾನು ತಪ್ಪು ಮಾಡಿದ್ದರೂ ಒಪ್ಪಿಕೊಳ್ಳದ ಆ ವ್ಯಕ್ತಿ, ಎಲ್ಲರ ಎದುರೇ ಸ್ವೀಟಿ ಅವರ ಕೆನ್ನೆಗೆ ಜೋರಾಗಿ ಬಾರಿಸಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಆತ, "ನಾನು ರೈಲ್ವೆ ಸಿಬ್ಬಂದಿ, ನನಗೇನು ಮಾಡಕ್ಕಾಗಲ್ಲ" ಎಂದು ದರ್ಪ ತೋರಿಸಿದ್ದಾನೆ. ಆ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಗುಂಪು ಕೇವಲ ಮೂಕಪ್ರೇಕ್ಷಕವಾಗಿತ್ತು ಎಂಬುದು ಅತೀ ದೊಡ್ಡ ವಿಷಾದದ ಸಂಗತಿ.

ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಅಲೆ

ಈ ಘಟನೆಯ ವಿಡಿಯೋ ಮತ್ತು ಹ*ಲ್ಲೆಗೊಳಗಾದ ಸ್ವೀಟಿ ಅವರ ಫೋಟೋಗಳು ಈಗ ಅಂತರ್ಜಾಲದಲ್ಲಿ ಬೆಂಕಿಯಂತೆ ಹಬ್ಬಿವೆ. ಹೊಡೆತದ ತೀವ್ರತೆಗೆ ಸ್ವೀಟಿ ಅವರ ಮುಖ ಊದಿಕೊಂಡಿರುವ ಫೋಟೋ ನೋಡಿ ನೆಟ್ಟಿಗರು ಕಣ್ಣೀರು ಹಾಕುತ್ತಿದ್ದಾರೆ. ವಿಡಿಯೋದಲ್ಲಿ ಆ ವ್ಯಕ್ತಿ ತನ್ನ ತಪ್ಪನ್ನು ನಿರಾಕರಿಸುತ್ತಾ ಜಗಳಕ್ಕೆ ಇಳಿಯುವುದು ಸ್ಪಷ್ಟವಾಗಿ ಕಾಣುತ್ತಿದೆ.

ಸಾವಿರಾರು ಜನರು ಈ ವಿಡಿಯೋವನ್ನು ಹಂಚಿಕೊಂಡು, "ನಮ್ಮ ರೈಲುಗಳಲ್ಲಿ ಮಹಿಳೆಯರಿಗೆ ರಕ್ಷಣೆ ಎಲ್ಲಿಗೆ ಬಂತು?" ಎಂದು ರೈಲ್ವೆ ಇಲಾಖೆಯನ್ನು (Railway Authorities) ಪ್ರಶ್ನಿಸುತ್ತಿದ್ದಾರೆ. "ಒಬ್ಬ ಮಹಿಳೆ ಮೇಲೆ ಹ*ಲ್ಲೆ ನಡೆಯುತ್ತಿದ್ದರೂ ಅಲ್ಲಿರುವ ಜನ ಸುಮ್ಮನೆ ನಿಂತಿದ್ದಾರಲ್ಲ, ಇದು ನಾಚಿಕೆಗೇಡಿನ ಸಂಗತಿ" ಎಂಬ ಕಮೆಂಟ್‌ಗಳು ಎಲ್ಲೆಡೆ ಕೇಳಿಬರುತ್ತಿವೆ.

ಸುರಕ್ಷತೆಯೇ ಇಲ್ಲಿ ದೊಡ್ಡ ಸವಾಲು

ಭಾರತದ ರೈಲುಗಳು, ವಿಶೇಷವಾಗಿ ಉತ್ತರ ಭಾರತದ ಭಾಗಗಳಲ್ಲಿ ಮಿತಿಮೀರಿದ ಜನಸಂದಣಿಯಿಂದ ಕೂಡಿರುತ್ತವೆ. ಇಂತಹ ಗಿಜಿಗುಟ್ಟುವ ಜನಸಂದಣಿಯನ್ನೇ ಬಂಡವಾಳ ಮಾಡಿಕೊಳ್ಳುವ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ಆರಾ ಘಟನೆಯಲ್ಲಿ ಆ ವ್ಯಕ್ತಿ ತಾನು 'ರೈಲ್ವೆ ಸ್ಟಾಫ್' ಎಂದು ಹೇಳಿಕೊಂಡಿರುವುದು ಇಲಾಖೆಗೆ ಮತ್ತಷ್ಟು ಮುಜುಗರ ತಂದಿದೆ. ನಿಜವಾಗಿಯೂ ಆತ ರೈಲ್ವೆ ಉದ್ಯೋಗಿಯೇ ಅಥವಾ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.

ಸಾರ್ವಜನಿಕರ ಆಗ್ರಹವೇನು?

ಈಗ ಜನರೆಲ್ಲರೂ ಒಕ್ಕೊರಲಿನಿಂದ ಆಗ್ರಹಿಸುತ್ತಿರುವುದು ಒಂದೇ - "ಆ ಕಿರಾತಕನನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆ ನೀಡಿ". ಈ ಘಟನೆಯು ಕೇವಲ ಒಬ್ಬ ಮಹಿಳೆಯ ಮೇಲಿನ ಹ*ಲ್ಲೆಯಲ್ಲ, ಬದಲಾಗಿ ಒಬ್ಬರ ಘನತೆಯನ್ನು ಪ್ರಶ್ನಿಸಿದಾಗ ಸಿಕ್ಕ ಹಿಂಸೆ. ಮಹಿಳೆಯರು ಧೈರ್ಯವಾಗಿ ಇಂತಹ ಕಿಡಿಗೇಡಿಗಳನ್ನು ಪ್ರಶ್ನಿಸುವ ವಾತಾವರಣ ನಮ್ಮ ದೇಶದಲ್ಲಿ ನಿರ್ಮಾಣವಾಗಬೇಕಿದೆ.

ರೈಲಿನಲ್ಲಿ ಇಂತಹ ಕಿಡಿಗೇಡಿಗಳು ಕಂಡುಬಂದಲ್ಲಿ ತಕ್ಷಣ ರೈಲ್ವೆ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಿ ದೂರು ನೀಡಿ. ಘಟನೆಯನ್ನು ವಿಡಿಯೋ ಮಾಡುವುದು ಸಾಕ್ಷ್ಯಕ್ಕಾಗಿ ಒಳ್ಳೆಯದೇ, ಆದರೆ ಮೊದಲು ಸಂತ್ರಸ್ತೆಗೆ ನೆರವಾಗುವುದು ನಮ್ಮ ಕರ್ತವ್ಯ. ಯಾವುದೇ ಬೆದರಿಕೆಗೆ ಮಣಿಯದೆ ಹತ್ತಿರದ ರೈಲ್ವೆ ಪೋಲಿಸ್ (GRP) ನಿಲ್ದಾಣದಲ್ಲಿ ದೂರು ದಾಖಲಿಸಿ.

ಪ್ರತಿ ಬಾರಿಯೂ ಇಂತಹ ಘಟನೆಗಳು ನಡೆದಾಗ ನಾವು ಚರ್ಚೆ ಮಾಡುತ್ತೇವೆ, ಆದರೆ ಈ ಬಾರಿ ಆ ವ್ಯಕ್ತಿಗೆ ಸರಿಯಾದ ಶಿಕ್ಷೆಯಾಗುವವರೆಗೂ ನಾವು ಧ್ವನಿ ಎತ್ತಬೇಕಿದೆ. ಮಹಿಳೆಯರ ಸುರಕ್ಷತೆ ಕೇವಲ ಇಲಾಖೆಯ ಜವಾಬ್ದಾರಿಯಲ್ಲ, ಅದು ಸಮಾಜದ ಹೊಣೆ ಕೂಡ ಹೌದು. 

Latest News