ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮಾರೆಡುಮಿಲ್ಲಿ–ಭದ್ರಾಚಲಂ ಘಾಟ್ ರಸ್ತೆಯಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಮೋಟುಗುಡೆಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆದಲ್ಲಿ ಖಾಸಗಿ ಟ್ರಾವೆಲ್ಸ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಣಿವೆಗೆ ಬಿದ್ದಿದೆ. ಬಸ್‌ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಅಲ್ಲೂರಿ ಜಿಲ್ಲೆ ಆಸ್ಪತ್ರೆ ಹಾಗೂ ಭದ್ರಾಚಲಂ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಅಪಘಾತದ ನಂತರ ಸ್ಥಳೀಯರು, ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್ ಪಲ್ಟಿಯಾದ ಸ್ಥಳವು ಘಾಟ್ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿತ್ತು. ಆದರೂ ತುರ್ತು ಸೇವಾ ಸಿಬ್ಬಂದಿ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು. ಮಾರೆಡುಮಿಲ್ಲಿ–ಭದ್ರಾಚಲಂ ರಸ್ತೆ ತೀವ್ರ ತಿರುವುಗಳು ಹಾಗೂ ಕಣಿವೆಗಳಿಂದ ಕೂಡಿದ್ದು, ಚಾಲಕ ನಿಯಂತ್ರಣ ತಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ. ದಟ್ಟ ಮಂಜು ಹಾಗೂ ರಸ್ತೆ ಸುರಕ್ಷತಾ ಕ್ರಮಗಳ ಕೊರತೆ ಕೂಡ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಪಘಾತವು ಯಾತ್ರಿಕರ ಕುಟುಂಬಗಳಲ್ಲಿ ಭಾರಿ ದುಃಖವನ್ನುಂಟುಮಾಡಿದೆ. ಸರ್ಕಾರ ತುರ್ತು ನೆರವು ಕಾರ್ಯಾಚರಣೆ ಕೈಗೊಂಡಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸುವ ನಿರೀಕ್ಷೆಯಿದೆ. ಸ್ಥಳೀಯರು ಹಾಗೂ ಸಾಮಾಜಿಕ ಸಂಸ್ಥೆಗಳು ಗಾಯಾಳುಗಳಿಗೆ ನೆರವು ನೀಡಲು ಮುಂದಾಗಿವೆ. ಈ ಘಟನೆ ಘಾಟ್ ರಸ್ತೆಗಳಲ್ಲಿನ ಸುರಕ್ಷತಾ ಕ್ರಮಗಳ ಕೊರತೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ತೀವ್ರ ತಿರುವುಗಳು ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ಸೂಕ್ತ ಎಚ್ಚರಿಕೆ ಫಲಕಗಳು ಹಾಗೂ ರಕ್ಷಣಾ ತಡೆಗೋಡೆಗಳ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.