ಸತತ 20 ಬಾರಿ ಬೇಯಿಸಿದರೂ ಮಣಿಯದ ಮಟನ್ - ಮಾಂಸದಂಗಡಿ ಮಾಲೀಕನ ವಿರುದ್ಧ ಠಾಣೆ ಮೆಟ್ಟಿಲೇರಿದ ಭೂಪ!!

ಸಾಮಾನ್ಯವಾಗಿ ಜನರು ಪೊಲೀಸ್ ಸ್ಟೇಷನ್‌ಗೆ ಹೋಗುವುದು ಕಳ್ಳತನವಾದಾಗ, ಜಗಳವಾದಾಗ ಅಥವಾ ಯಾವುದಾದರೂ ಗಂಭೀರ ಸಮಸ್ಯೆ ಎದುರಾದಾಗ. ಆದರೆ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಡಿಪತ್ರಿ ಎಂಬಲ್ಲಿ ನಡೆದ ಘಟನೆ ಕೇಳಿದರೆ ನೀವು ನಗದೆ ಇರಲು ಸಾಧ್ಯವೇ ಇಲ್ಲ. ವ್ಯಕ್ತಿಯೊಬ್ಬ ತಾನು ತಂದಿದ್ದ ಕುರಿ ಮಾಂಸ ಬೇಯುತ್ತಿಲ್ಲ ಎಂಬ ಕಾರಣಕ್ಕೆ ಮಾಂಸದ ಪಾತ್ರೆಯನ್ನೇ ಹಿಡಿದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾನೆ!

ಬೇಯದ ಮಾಂಸದ ಪಾತ್ರೆ ಹಿಡಿದು ಪೊಲೀಸ್ ಠಾಣೆಗೆ ಹೋದ ಭೂಪ
ಬೇಯದ ಮಾಂಸದ ಪಾತ್ರೆ ಹಿಡಿದು ಪೊಲೀಸ್ ಠಾಣೆಗೆ ಹೋದ ಭೂಪ

ತಡಿಪತ್ರಿಯ ಪುಟ್ಲೂರು ರಸ್ತೆ ನಿವಾಸಿ ಸೋದಲ ಹಾಜಿ ಎಂಬುವವರು ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದರು. ಹಬ್ಬದ ಪ್ರಯುಕ್ತ ಮಟನ್ ಅಂಗಡಿಗೆ ಹೋಗಿ ಕುರಿ ತಲೆ ಮಾಂಸವನ್ನು (ತಲಕುರ) ಖರೀದಿಸಿ ತಂದಿದ್ದರು. ಮನೆಗೆ ಬಂದು ಬಹಳ ಖುಷಿಯಿಂದ ಅಡುಗೆ ಮಾಡಲು ಶುರು ಮಾಡಿದರು. ಆದರೆ ಇಲ್ಲಿಂದಲೇ ಅವರ ಅಸಲಿ ತಲೆನೋವು ಶುರುವಾಗಿದ್ದು.

ಸಾಮಾನ್ಯವಾಗಿ ತಲೆ ಮಾಂಸ ಬೇಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ನಿಜ. ಆದರೆ ಹಾಜಿ ಅವರು ಒಂದು ಬಾರಿ ಅಲ್ಲ, ಎರಡು ಬಾರಿ ಅಲ್ಲ... ಬರೋಬ್ಬರಿ 20 ಬಾರಿ ಪ್ರಯತ್ನ ಪಟ್ಟರೂ ಮಾಂಸ ಮಾತ್ರ ಮೆತ್ತಗಾಗಲೇ ಇಲ್ಲ! ಎಷ್ಟೇ ಕೂಗಿಸಿದರೂ, ಎಷ್ಟೇ ಹೊತ್ತು ಬೇಯಿಸಿದರೂ ಮಾಂಸ ಮಾತ್ರ ಕಲ್ಲಿನಂತೆ ಗಟ್ಟಿಯಾಗಿಯೇ ಇತ್ತು.

ಸತತ ಪ್ರಯತ್ನದ ನಂತರ ಸುಸ್ತಾದ ಹಾಜಿ ಅವರಿಗೆ ವಿಪರೀತ ಸಿಟ್ಟು ಬಂತು. "ಅಂಗಡಿಯವನು ನನಗೆ ಮೋಸ ಮಾಡಿದ್ದಾನೆ, ತಿನ್ನಲು ಯೋಗ್ಯವಲ್ಲದ ಮಾಂಸ ಕೊಟ್ಟಿದ್ದಾನೆ" ಎಂದು ನಿರ್ಧರಿಸಿದ ಅವರು, ಅರ್ಧ ಬೆಂದಿದ್ದ ಮಾಂಸವಿದ್ದ ಇಡೀ ಪಾತ್ರೆಯನ್ನೇ ಎತ್ತಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹೋದರು.

ಠಾಣೆಯಲ್ಲಿದ್ದ ಪೊಲೀಸರು ಮೊದಲು ದಂಗಾದರು. ಪಾತ್ರೆ ಹಿಡಿದು ಬಂದವನನ್ನು ನೋಡಿ ಏನೋ ದೊಡ್ಡ ಅನಾಹುತವಾಗಿದೆ ಅಂದುಕೊಂಡಿದ್ದರು. ಆದರೆ ಹಾಜಿ ಅವರು ಮಾಂಸದ ಪಾತ್ರೆಯನ್ನು ಸಿಐ (CI) ಆನಂದ್ ರಾವ್ ಅವರ ಮುಂದೆ ಇಟ್ಟು, "ಸ್ವಾಮಿ, ಈ ಮಾಂಸ ನೋಡಿ, ಎಷ್ಟೇ ಬೇಯಿಸಿದರೂ ಬೇಯುತ್ತಿಲ್ಲ. ಆ ಮಾಂಸದವನ ಮೇಲೆ ಕೇಸ್ ಹಾಕಿ" ಎಂದು ಗಂಭೀರವಾಗಿ ದೂರು ನೀಡಿದರು.

ಇದು ತಮಾಷೆಯಾಗಿ ಕಂಡರೂ, ಸಾರ್ವಜನಿಕರ ಸಮಸ್ಯೆಯನ್ನು ಆಲಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿದ ಸಿಐ ಆನಂದ್ ರಾವ್ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿದರು. ಕೂಡಲೇ ಮಾಂಸ ಮಾರಾಟಗಾರನನ್ನು ಠಾಣೆಗೆ ಕರೆಸಿದರು. ಪೊಲೀಸರ ಎದುರು ಬಂದ ಮಾರಾಟಗಾರ, "ಬಹುಶಃ ಕುರಿ ತುಂಬಾ ವಯಸ್ಸಾಗಿದ್ದಿರಬಹುದು (ಬಲಿತ ಕುರಿ), ಹಾಗಾಗಿ ಮಾಂಸ ಬೇಯುತ್ತಿಲ್ಲ" ಎಂದು ಒಪ್ಪಿಕೊಂಡಿದ್ದಾನೆ.

ಪೊಲೀಸರ ಮಧ್ಯಸ್ಥಿಕೆಯಲ್ಲಿ ಈ "ಮಾಂಸದ ಪಂಚಾಯಿತಿ" ಸುಖಾಂತ್ಯವಾಯಿತು. ಹಳೆಯ ಗಟ್ಟಿ ಮಾಂಸದ ಬದಲಿಗೆ ಅಷ್ಟೇ ಪ್ರಮಾಣದ ತಾಜಾ ಮತ್ತು ಎಳೆಯ ಮಟನ್ ನೀಡಲು ಮಾರಾಟಗಾರ ಒಪ್ಪಿಕೊಂಡ ನಂತರ ಹಾಜಿ ಅವರು ಸಮಾಧಾನಗೊಂಡು ಮನೆಗೆ ಮರಳಿದರು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಈ ಘಟನೆ ಈಗ ಇಡೀ ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜನರು "ಪೊಲೀಸರು ಮಾಂಸದ ಸಮಸ್ಯೆಯನ್ನೂ ಬಗೆಹರಿಸುತ್ತಾರೆ ಅಂದರೆ ನಿಜಕ್ಕೂ ಗ್ರೇಟ್" ಎಂದು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು "ಅಡುಗೆ ಬರದೆ ಸ್ಟೇಷನ್‌ಗೆ ಹೋದರಾ?" ಎಂದು ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಯುಗಾದಿ ಹಬ್ಬದ ದಿನ ಈ ತಲೆ ಮಾಂಸದ ಕಥೆ ಎಲ್ಲರಿಗೂ ಫುಲ್ ಎಂಟರ್‌ಟೈನ್‌ಮೆಂಟ್ ನೀಡಿದ್ದಂತೂ ಸುಳ್ಳಲ್ಲ.

ಪೊಲೀಸ್ ಅಧಿಕಾರಿ ಆನಂದ್ ರಾವ್ ಅವರು ಮಾತನಾಡಿ, "ನಾಗರಿಕರ ಸಮಸ್ಯೆ ಎಷ್ಟೇ ವಿಚಿತ್ರವಾಗಿದ್ದರೂ, ಅವರಿಗೆ ನ್ಯಾಯ ಕೊಡಿಸುವುದು ನಮ್ಮ ಕೆಲಸ" ಎಂದು ನಗುನಗುತ್ತಲೇ ಹೇಳಿದ್ದಾರೆ.

Latest News